ಬಂಟ್ವಾಳ: ಮಂಗಳೂರು ಹಿದಾಯ ಫೌಂಡೇಶನ್ ಅಧೀನದಲ್ಲಿರುವ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಗುರಿಮಜಲು ಹಿದಾಯ ಶೇರ್ ಮತ್ತು ಕೇರ್ ಕಾಲೋನಿಯಲ್ಲಿರುವ ಹಿದಾಯ ವಿಶೇಷ ಮಕ್ಕಳ ಪಾಲನಾ ಕೇಂದ್ರದ ಶಾಲೆಯಲ್ಲಿ ವಿಶೇಷ ಮಕ್ಕಳ ವಾರ್ಷಿಕ ಪ್ರತಿಭಾ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ನಾಟೆಕಲ್ ಕುನಿಲ್ ಶಾಲೆಯ ಉಪ ಚಯರ್‌ಮ್ಯಾನ್ ಪಿ.ಎಸ್ ಮೊಹಿದ್ದೀನ್ ಕುಂಞ ಅವರು ಉದ್ಘಾಟಿಸಿ, ಮಾತನಾಡಿ, ದೇವರು ಪ್ರತಿಯೊಬ್ಬರಿಗೂ ವಿವಿಧ ರೀತಿಯ ಪರೀಕ್ಷೆಗಳನ್ನು ನೀಡುತ್ತಾನೆ. ಪರೀಕ್ಷೆಯನ್ನು ಎದುರಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ.  ಹಿದಾಯ ಪೌಂಡೇಶನ್ ಅವರ ಸೇವೆ ಇಡೀ ದೇಶಕ್ಕೆ ಮಾದರಿಯಾಗಿದೆ. ಮಕ್ಕಳ ಪೋಷಣೆ ಉತ್ತಮ ಕಾರ್ಯವಾಗಿದೆ. ಇಲ್ಲಿಯ ಮಕ್ಕಳಿಗಾಗಿ ಕುನಿಲ್ ವಿದ್ಯಾ ಸಂಸ್ಥೆ ವತಿಯಿಂದ ಹೊಸ ವಾಹನವನ್ನು ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಹಿದಾಯ ಪೌಂಡೇಶನ್ ಅಧ್ಯಕ್ಷ ಜಿ. ಮೊಹಮ್ಮದ್ ಹನೀಫ್ ಹಾಜಿ ಮಾತನಾಡಿ, ಬಂಟ್ವಾಳ ತಾಲೂಕಿನಲ್ಲಿ ಹೆಚ್ಚು ವಿಶೇಷ ಮಕ್ಕಳ ಸಂಖ್ಯೆ ಇದೆ. ಮುಂದಿನ ದಿನಗಳಲ್ಲಿ ಇಂತಹ ಮಕ್ಕಳ ಹುಟ್ಟಿನ ಬಗ್ಗೆ ಹೆತ್ತವರು ಜಾಗೃತರಾಗಬೇಕು. ವೈದ್ಯರು ಕೊಡುವ ಸಲಹೆ-ಸೂಚನೆಗಳನ್ನು ಪಾಲಿಸಿದಾಗ ಯಾವುದೇ ಸಮಸ್ಯೆ ಬರುವುದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯಬೇಕು ಎಂದರು.
ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮೊದಲು ವಿಶೇಷ ಮಕ್ಕಳಿಂದ ಸ್ವಾಗತ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳ ಹೆತ್ತವರಿಗೆ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹೆತ್ತವರಿಗೂ ಬಹುಮಾನ ವಿತರಿಸಲಾಯಿತು.
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶೇಕ್ ಆದಂ ಸಾಹೇಬು, ಟ್ರಸ್ಟ್‌ನ ಸದಸ್ಯ ಕೆ.ಎಸ್ ಅಬೂಬಕ್ಕರ್, ಮೊಹಮ್ಮದ್ ಬೆಳ್ಳಚ್ಚಾರು, ಉರ್ದು ಶಾಲೆಯ ಶಿಕ್ಷಕ ರಿಯಾಜ್, ಉರ್ದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಖಲೀಲ್ ಅಹಮ್ಮದ್, ಕೇಂದ್ರಿಯಾ ಸಮಿತಿ ಸದಸ್ಯ ತಾಹೀರ್ ಇಸ್ಮಾಯಿಲ್, ಇದ್ದಿನ್ ಕುಂಞ, ರಝಾಕ್ ಮಾಸ್ಟರ್ ಅನಂತಾಡಿ, ಬಿ.ಎಂ ತುಂಬೆ, ಸಾದಿಕ್ ಹಸನ್, ಅಬೂಬಕ್ಕರ್ ಮುಸ್ಲಿಯಾರ್, ಮುಖ್ಯ ಶಿಕ್ಷಕಿ ಆಶಾಲತಾ, ರಶೀದ್ ಕಕ್ಕಿಂಜೆ, ಉದ್ಯಮಿ ಆದಿಲ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here