ಬಂಟ್ವಾಳ: ತಾಲೂಕಿನ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮೇರಿ-ಮಾನಡ್ಕ ಗಿರಿಜನ ರಸ್ತೆಗೆ 2017 ರಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರು 10 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿ ಅಭಿವೃದ್ಧಿ ಮಾಡಲಾಗಿತ್ತು. ಇಲ್ಲಿ ಮಾಜಿ ಸಚಿವ ರಮಾನಾಥ ರೈ ಅವರ ಹೆಸರಿರುವ ಶಿಲಾ ಕಲ್ಲನ್ನು ಅಳವಡಿಸಲಾಗಿತ್ತು. ಈ ಶಿಲಾಕಲ್ಲನ್ನು ಕಿಡಿಗೇಡಿಗಳು ಗುರುವಾರ ದ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಖಂಡನೆ:
ಮಾಜಿ ಸಚಿವ ಬಿ ರಮಾನಾಥ ರೈ ಅವರ ಅಭಿವೃದ್ದಿ ಕಾರ್ಯಗಳನ್ನು ಕಂಡು ಸಹಿಸದ ವಿರೋಧಿಗಳು ಕೈ ಮೈ ಪರಚುತ್ತಲೇ ಇದ್ದು, ರಾಯಿ ಪ್ರದೇಶದ ಶಿಲಾಕಲ್ಲು ದ್ವಂಸ ಇದರ ಮುಂದುವರಿದ ಭಾಗವಾಗಿದೆ. ವಿಕೃತ ಮನಸ್ಸಿನ ಕಿಡಿಗೇಡಿ ಕೃತ್ಯವನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ಬೇಬಿ ಕುಂದರ್ ಎಂದಿದ್ದಾರೆ.
ರಮಾನಾಥ ರೈ ಅವಧಿಯ ಬಳಿಕ ಬಂದ ಬಿಜೆಪಿ ಶಾಸಕರಿಂದ ಕ್ಷೇತ್ರದಲ್ಲಿ ಒಂದೇ ಒಂದು ಜನಪರ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಕೈಲಾಗದವ ಮೈ ಪರಚಿಕೊಂಡ ಎಂಬಂತೆ ರೈಗಳ ಅಭಿವೃದ್ದಿ ಕಾರ್ಯಗಳ ಕುರುಹುಗಳನ್ನು ನಾಶಪಡಿಸುವ ಕೃತ್ಯಕ್ಕೆ ಇಳಿಯಲಾಗಿದೆ ಎಂದು ಆರೋಪಿಸಿರುವ ಬೇಬಿ ಕುಂದರ್ ರೈಗಳ ಅಭಿವೃದ್ದಿ ಕಾರ್ಯಗಳನ್ನು ಜನಮಾನಸದಿಂದ ಇಲ್ಲವಾಗಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ವಿರೋಧಿಗಳು ಇದೀಗ ಅಭಿವೃದ್ದಿ ಕಾರ್ಯದ ಕುರುಹುಗಳನ್ನು ದ್ವಂಸ ಮಾಡುವ ವಿಕೃತ ಮನಸ್ಥಿತಿಗೆ ಬಂದಿದ್ದಾರೆ. ಏನೇ ಕೈ ಮೈ ಪರಚಿಕೊಂಡರೂ ಬಂಟ್ವಾಳ ಕ್ಷೇತ್ರದಲ್ಲಿ ರೈಗಳ ಅವಧಿಯಲ್ಲಿ ಆಗಿರುವ ಅಭಿವೃದ್ದಿಯ ಸುವರ್ಣ ಯುಗವನ್ನು ಒಪ್ಪಿಕೊಳ್ಳಬೇಕೇ ಹೊರತು ಅಲ್ಲಗಳೆಯಲು ಯಾವ ವಿರೋಧಿಯಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ರಾಯಿಯಲ್ಲಿ ನಡೆಸಿರುವ ಕೃತ್ಯ ಇಲ್ಲಿನ ಗಿರಿಜನ ಸಮುದಾಯಕ್ಕೆ ಹಾಗೂ ಈ ಭಾಗದ ಸಾರ್ವಜನಿಕರಿಗೆ ಮಾಡಿದ ಅವಮಾನ ಎಂದು ಬಣ್ಣಿಸಿರುವ ಬೇಬಿ ಕುಂದರ್ ಘಟನೆ ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಎಂದಿದ್ದಾರೆ.