ವಿಟ್ಲ: ಧರ್ಮ ಪಾಲನೆಯಿಂದ ಬದುಕು ಸುಂದರವಾಗುವುದು. ಧರ್ಮ ದೈವಗಳ ಕಾರಣೀಕ,ಸನ್ನಿವೇಶಗಳು ನಮ್ಮ ನಂಬಿಕೆಯನ್ನು ಇನ್ನಷ್ಟು ಗಟ್ಟಿಯಾಗಿಸುತ್ತವೆ. ದೈವ ದೇವರ ಪ್ರಭಾವದಿಂದಲೇ ಕರಾವಳಿ ಜಿಲ್ಲೆ ಬೆಳಗುತ್ತಿದೆ. ಬಾಕಿಲಗುತ್ತು ದೈವ ಸಂಕಲ್ಪದಂತೆ ಸರಿಯಾದ ಕಾಲಕ್ಕೆ ಪ್ರಜ್ವಲಿಸಿದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಬಾಕಿಲಗುತ್ತು ಕ್ಷೇತ್ರದಲ್ಲಿ ಶ್ರೀ ಉಳ್ಳಾಲ್ತಿ, ವೈದ್ಯನಾಥೇಶ್ವರ, ಹೊಸಮ್ಮ, ಅಣ್ಣಪ್ಪ ಪಂಜುರ್ಲಿ, ಬೆರ್ಮೆರ್ ಬೈದೇರುಗಳು ಹಾಗೂ ಇತರ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ದೈವಗಳಿಗೆ ನೇಮೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಧರ್ಮವನ್ನು ಬಿಟ್ಟು ಸಂಸ್ಕೃತಿಯಿರುವುದಿಲ್ಲ. ಸಂಸ್ಕೃತಿಯನ್ನು ಬಿಟ್ಟು ಧರ್ಮವಿರದು. ಪರಿಶುದ್ಧ ಮನಸ್ಸಿನಿಂದ ಮಾತ್ರ ಅಂತರಂಗ ಪ್ರವೇಶಿಸಬಹುದು. ಸಂಸ್ಕಾರದ ಮೂಲಕ ಸಂಸ್ಕೃತಿಯನ್ನು ಉಳಿಸಬಹುದು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮಾಜಿ ಅರಣ್ಯ ಸಚಿವ ರಮಾನಾಥ ರೈ ವಹಿಸಿದ್ದರು. ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಧಾರ್ಮಿಕ ಉಪನ್ಯಾಸ ನೀಡಿ ಪರಂಪರೆ, ಅನಾದಿ ಕಾಲದಿಂದ ಆಚರಿಸಿಕೊಂಡು ಬಂದ ಶಿಷ್ಟ ಜನ ಜೀವನ ಪದ್ಧತಿಯೊಂದಿಗೆ ಆರಾಧನಾ ಸಂಸ್ಕೃತಿ ದೈವ ಕ್ಷೇತ್ರಗಳ ಮೂಲಕ ಉಳಿದುಕೊಳ್ಳುತ್ತವೆ ಎಂದರು. ಇದೇ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣದಲ್ಲಿ ಶ್ರಮಿಸಿದವರನ್ನು ಹಾಗೂ ದಾನಿಗಳನ್ನು ಗೌರವಿಸಲಾಯಿತು.
ಗೆಜ್ಜೆಗಿರಿ ನಂದನಬಿತ್ತಿಲ್ ಆಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್, ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಉದ್ಯಮಿಗಳಾದ ಕೆ. ಸಂಜೀವ ಪೂಜಾರಿ, ಪ್ರಕಾಶ್ ಶೆಟ್ಟಿ, ಸಂಜೀವ ಪೂಜಾರಿ, ಬಂಟ್ವಾಳ ಎ.ಪಿ.ಎಂ.ಸಿ. ಅಧ್ಯಕ್ಷ ಪದ್ಮನಾಭ ರೈ, ಉದ್ಯಮಿ ಬಿ. ಸಂಜೀವ ಪೂಜಾರಿ ವಿಟ್ಲ, ಮಾಣಿ ಯುವವಾಹಿನಿ ಅಧ್ಯಕ್ಷ ರಮೇಶ್ ಮುಜಾಲ, ಸಾಲೆತ್ತೂರು ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಟ್ಟತ್ತಿಲಕೋಡಿ ಉಪಸ್ಥಿತರಿದ್ದರು.

ರಕ್ಷಿತಾ, ಸಂಶಿತಾ, ಯಶಸ್ವಿನಿ ಪ್ರಾರ್ಥಿಸಿದರು. ಸಭಾ ನಿರ್ವಹಣೆ ಸಮಿತಿ ಸಂಚಾಲಕಿ ರೇಣುಕಾ ಕಣಿಯೂರು ಸ್ವಾಗತಿಸಿದರು. ಬಾಕಿಲಗತ್ತು ಆಡಳಿತ ಟ್ರಸ್ಟ್ ಅಧ್ಯಕ್ಷ ವಸಂತ ಪೂಜಾರಿ ಬಾಕಿಲಗುತ್ತು ಪ್ರಸ್ತಾವನೆಗೈದರು. ದೀಪಕ್ ಪೆರಾಜೆ ವಂದಿಸಿದರು. ದಿನಕರ್ ಅಂಚನ್ ಬರಿಮಾರು ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here