ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತಿ; ಕರಮೂಲೇ ಸ್ಥಿತೇ ಗೌರಿ, ಪ್ರಭಾತೇ ಕರ ದರ್ಶನಂ ಕುರು|| ಇದು ತಲೆ ತಲಾಂತರದಿಂದ ನಮ್ಮ ಹಿರಿಯರು ಸ್ವಯಂ ಹೇಳುತ್ತಿದ್ದ ಮತ್ತು ಕಿರಿಯ ತಲೆಮಾರಿಗೆ ಹೇಳಿಕೊಡುತ್ತಿದ್ದ ಶ್ಲೋಕ. ಈ ಶ್ಲೋಕ ಇಂದು ಅರ್ಥಪೂರ್ಣವಾಗಿ ಜೀವನದಲ್ಲಿ ಅಳವಡಿಕೆಯಾಗುತ್ತಿದೆಯೇ? ಇಂದು ನಮ್ಮ ಕರದಲ್ಲಿ ನಿರಂತರವಾಸಿಯಾಗಿ ಈ ದೇವಿಯರು ಚಿರಸ್ಥಾಯಿಯಾಗಿರುವರೇ? ಇರಲು ಸಾಧ್ಯವೇ? ತಂತ್ರಜ್ಞಾನ ಯುಗವಿದು. ಎಲ್ಲದಕ್ಕೂ ಮೇಲಾಗಿ ವಿದ್ಯುನ್ಮಾನ ಯುಗ. ವಿದ್ಯುನ್ಮಾನ ಪ್ರಾಬಲ್ಯತೆ ಪಡೆದಲ್ಲಿ ಚಿಕ್ಕ ಚಿಕ್ಕ ಹಕ್ಕಿಗಳಿಗೂ ಇರಲು ಅಸಾಧ್ಯವಾಗುತ್ತಿರುವಾಗ, ವಿದ್ಯುನ್ಮಾನ ವಸ್ತುಗಳೇ ನಮ್ಮ ಬದುಕಿನ ಅವಿಭಾಜ್ಯ ವಸ್ತುಗಳಾಗಿರುವಾಗ ಈ ತ್ರಿಮೂರ್ತಿ ದೇವಿಯರು ನಮ್ಮ ಅಂಗೈಯಲ್ಲಿ ವಾಸವಿರುವುದಾದರೂ ಹೇಗೆ ಎಂಬ ಸಂದೇಹ ಏಳುವುದು ಸಹಜವಲ್ಲವೇ?
ಇಂದು ನಮಗೆ ಅತ್ಯಂತ ಆಪ್ತವಾದ ಮತ್ತು ಅನಿವಾರ್ಯವೂ ಆದ ವಿದ್ಯುನ್ಮಾನ ಉಪಕರಣ ಮೊಬೈಲ್. ಮೊಬೈಲ್‌ನ್ನು ಚರವಾಣಿ ಎಂದೂ ಹೇಳಬಹುದು. ಚರವಾಣಿಯ ಇಂಚರವಿಲ್ಲದೇ ಇದ್ದರೆ ನಮಗೆ ಇರುಳು ನಿದ್ದೆಬಾರದು, ಹಗಲು ವೇಳೆ ಸವೆಯದು. ಕೈಯೊಳಗೆ ಮೊಬೈಲೊಂದಿದ್ದರೆ ನಾನೇ ರಾಜಕುಮಾರ ಎಂದೋ ರಾಜಕುಮಾರಿ ಎಂದೋ ವಿಜೃಂಭಿಸುವವರು ನಾವು. ಆದುದರಿಂದ, ಕರಾಗ್ರೇ ವಸತೇ…….ದರ್ಶನಂ ಕುರು ಈ ಶ್ಲೋಕವು ನಂಬಿಕೆಗೆ ನಿಲುಕದ್ದಾಗಿ ಹೋದೀತೇ?
ಈ ಮೊಬೈಲ್ ಆರಂಭದ ಹಂತದಲ್ಲಿ ನಮ್ಮ ಮನಸ್ಸನ್ನು ಹೆಚ್ಚು ಬಾಗಿಸಿ ತನ್ನ ಹಿಡಿತದಲ್ಲಿ ಇಡುತ್ತಿರಲಿಲ್ಲ, ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಮೊಬೈಲ್ ತನ್ನ ಚತುರತನವನ್ನು, ಅಂದಿಗಿಂತ ಇಂದು ಸಹಸ್ರ ಸಹಸ್ರ ಪಟ್ಟು ಹೆಚ್ಚಿಸಿಕೊಂಡಿದೆ. ಮೊಬೈಲ್ ಕೂಡ ನಮಗಿಂತ ಚತುರ (SMART) ನಾಗಿ ಬೆಳೆದಂತೆ ನಮ್ಮ ಮನಸ್ಸನ್ನು ಅದು ಹೆಚ್ಚು ಹೆಚ್ಚು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲಾರಂಭಿಸಿತು. ನಮ್ಮ ಮನಸ್ಸು ಚತುರ ಚರವಾಣಿಯ ದಾಸಾನುದಾಸನಾಗಿ ಬಿಟ್ಟಿತು.
SMART ಎಂಬ ಪದದ ಐದೂ ಅಕ್ಷರಗಳನ್ನೂ ವಿಸ್ತರಿಸಿ ವಿವರಿಸಲು ಹೊರಟರೆ Specific, measurable, achievable, realistic and time bounded ಎಂದು ವಿಶದೀಕರಿಸಬಹುದು. ನಾವು ಮೊಬೈಲನ್ನು ನಿರ್ದಿಷ್ಠವಾದ ಗುರಿಗಾಗಿ ಬಳಸಬೇಕು ಎಂಬುದನ್ನು Specific ಎಂಬ ಪದವು ವಿವರಿಸುತ್ತದೆ. ನಮ್ಮ ಬಳಕೆಯು ಒಂದು ಅಳತೆಯ ಮಾಪನಕ್ಕೆ ಒಳಪಟ್ಟಿರಬೇಕು ಉದಾಹರಣೆಗೆ ಊಟದ ವಿಶ್ರಾಂತಿಯಲ್ಲಿ, ಯಾರದರೂ ನೀಡುವ ಅಗತ್ಯ ಕರೆಗಳಿಗೆ ಉತ್ತರಿಸುವ ಮತ್ತು ಇತತರರಿಗೆ ಅಗತ್ಯವಾಗಿ ಕರೆ ಕೊಡಬೇಕಾದ ಸಂದರ್ಭಗಳಲ್ಲಿ, ಇತರ ಬಿಡುವಿನ ವೇಳೆಯಲ್ಲಿ …ಹೀಗೆ ಒಂದು ಮಾಪನದೊಂದಿಗೆ ಬಳಸಲು measurable ಎಂಬ ಪದವು ಸೂಚಿಸುತ್ತದೆ. ಆದರೆ ಹೀಗಾಗುತ್ತಿದಯೇ? ನಿತ್ಯ ಮೊಬೈಲ್ ಮುಖಿಯಾಗಿಯೇ ಇರುತ್ತೇವಲ್ಲವೇ?
ಯಾವುದಾದರೂ ಸಾಧನೆಗಾಗಿ ಮೊಬೈಲನ್ನು ಬಳಸಿದರೆ ಆಗ ಅದು achievable ಆಗುತ್ತದೆ. ಉದಾಹರಣೆಗೆ ಒಂದು ವಿಷಯವನ್ನು ಇತರರಿಗೆ ಮನವರಿಕೆ ಮಾಡಿಕೊಡಲು, ತಮ್ಮ ಉದ್ಯೋಗ ಸಂಬಂಧಿತ ದಾಖಲೆ ಕಳುಹಿಸಲು, ಒಂದು ದಾಖಲೆಗಾಗಿ ಭಾವಚಿತ್ರ ತೆಗೆಯಲು, ಅಗತ್ಯ ಸಂದೇಶ ರವಾನೆಗೆ ….. ಇಂತಹ ಕೆಲಸಗಳಲ್ಲಿ ಮೊಬೈಲ್ ಬಳಕೆಯಾಗುತ್ತಿದ್ದರೆ ಸ್ವೀಕಾರಾರ್ಹ. ಒಂದಷ್ಟು ವಿವಿಧ ಭಂಗಿಗಳ ಫೋಟೋ ಅಥವಾ ವೀಡಿಯೋ ತೆಗೆಸಿ ಅವುಗಳನ್ನು ವಿವಿಧ ಜಾಲಗಳ ಮೂಲಕ ಇತರರಿಗೆ ತಲೆನೋಯುವ ಸಂಖ್ಯೆಗಳಲ್ಲಿ ಕಳುಹಿಸಿಕೊಡಲು ಮೊಬೈಲ್ ಬಳಕೆಯಾದರೆ ಸಮಯ ಹಾನಿ ಮತ್ತು ಇತರರಿಗೆ ನಾವು ನೀಡುವ ಕಿರುಕುಳ ಎಂಬುದನ್ನರಿಯಬೇಕು. ಇಲ್ಲಿ ಸಾಧನೆ ಕಾಣದು, ವೇದನೆಯೇ ಅಧಿಕ.
ಕರ್ತವ್ಯ ಸಾಧನೆಗೆ ಮೊಬೈಲ್ ಮಾರಕವಾಗಿ ಪರಿಣಮಿಸಿದೆ. ಹೊಲದಲ್ಲಿ ದುಡಿಯುವ ರೈತ ಅಥವಾ ಕಾರ್ಮಿಕ ಮೊಬೈಲ್ ದಾಸನಾದರೆ ಏನೆಲ್ಲ ಅನರ್ಥಗಳು ಸಂಭವಿಸಬಹುದಲ್ಲವೇ? ಶಸ್ತ್ರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡ ವೈದ್ಯರೊಬ್ಬರಿಗೆ ಕರೆಯೊಂದು ಬಂದರೆ, ಆ ಕರೆಯನ್ನು ವೈದ್ಯರು ಉತ್ತರಿಸುವ ಪ್ರಯತ್ನದಲ್ಲಿ ವೇಳೆ ಕಳೆದರೆ ರೋಗಿಯ ಸ್ಥಿತಿ ಚಿಂತಾಜನಕವಾಗದೇ? ರಾಷ್ಟ್ರದ ಅಡಿಪಾಯವೆನಿಸುವ ವಿದ್ಯಾರ್ಥಿಗಳು ಕಲಿಕೆಯ ಬಹತೇಕ ಅವಧಿಯನ್ನು ಮೊಬೈಲ್‌ಗಳೊಂದಿಗೆ ಸರಸವಾಡಿದರೆ ಅಡಿಪಾಯದ ಡಿ ಜಾರಿಹೋಗಿ ಅಪಾಯವುಂಟಾಗದೇ? ತರಗತಿಯೊಳಗೆ ಪಾಠ ಮಾಡಬೇಕಾದ ಬೋಧಕನಿಗೆ ಮೊಬೈಲ್ ಗೀಳು ಅಂಟಿದರೆ ವಿದ್ಯಾರ್ಥಿಗಳ ಸಾಧನೆ ಶೂನ್ಯವಾಗದೇ? ಬಿಡುವಿನ ವೇಳೆಯಲ್ಲಿ ಮುಂದಿನ ತರಗತಿಗೆ ಬೋಧಕ ತಯಾರಿ ನಡೆಸುತ್ತಿದ್ದು ಉತ್ತಮ ನಿರ್ವಹಣೆ ಮಾಡಬೇಕು. ಆ ಸಮಯದಲ್ಲಿ ಮೊಬೈಲೊಳಗೆ ಬೋಧಕರು ಹೊಕ್ಕು ಕುಳಿತು ಮನರಂಜಿಸಿಸಿದರೆ ತರಗತಿಯೊಳಗೆ ಆತ ಎಂತಹ ಕಲಿಕಾ ಸಾಧನೆ ಮಾಡಬಲ್ಲ? ಸರಕಾರ ಶಿಕ್ಷಕರಿಗೆ ಶಾಲೆಗೆ ಮೊಬೈಲ್ ಒಯ್ಯದಿರಲು, ಒಯ್ದರೂ ಮುಖ್ಯಶಿಕ್ಷಕರ ಸುಪರ್ದಿಗೆ ನೀಡಲು ಆದೇಶಿಸ ಬೇಕು. ಕೇವಲ ಶಿಕ್ಷಣ ಇಲಾಖೆಗೆ ಈ ಕಟ್ಟುನಿಟ್ಟುಗಳಿದ್ದರೆ ಸಾಲದು. ಎಲ್ಲ ಇಲಾಖೆಗಳಲ್ಲಿಯೂ ಮೊಬೈಲ್ ಧಾರಾಳವಾಗಿ ಧಾಳಿ ಮಾಡುತ್ತಿದೆ. ನೌಕರರ ಮೊಬೈಲ್ ಚಟವು ಸಾರ್ವಜನಿಕರನ್ನು ಹಿಂಸಿಸುತ್ತಿದೆ. ಮೊಬೈಲುಗಳ ಬದಲಿಗೆ ಇಲಾಖೆಗಳು ಸ್ಥಿರ ದೂರವಾಣಿಯನ್ನೇ ಉಪಯೋಗಿಸುವ ಕಟ್ಟು ನಿಟ್ಟಿನ ಆದೇಶ ಆಗಲೇಬೇಕು.
ಮೊಬೈಲು realistic ಆಗಿಲ್ಲ. ಅದರಲ್ಲಿ ಬರುವ ಸಂದೇಶಗಳಲ್ಲಿ ಅದೆಷ್ಟೋ ಸುಳ್ಳುಗಳಿರುವುದನ್ನು ನಾವು ಗಮನಿಸಬಹುದು. ಅತ್ಯಂತ ಹಳೆಯ ಸುದ್ದಿಗಳೂ ಹರಿದಾಡುತ್ತಿರುತ್ತವೆ. ಚಿತ್ರಗಳು, ವೀಡಿಯೋಗಳು ಕಸಿ ಕಟ್ಟಿದವುಗಳೇ ಹೆಚ್ಚಿನ ಸಂಖ್ಯೆಯಲ್ಲಿ ರವಾನಿಸಲ್ಪಡುತ್ತಿರುವುದನ್ನು ಅರ್ಥಮಾಡಿಕೊಂಡಾಗ ಮೊಬೈಲಿನ ಪ್ರಾಮಾಣಿಕತೆ ಸಂದೇಹಾರ್ಹವಾಗುವುದಿಲ್ಲವೇ? ಇದು ಮೊಬೈಲಿನ ದೋಷವಲ್ಲ, ಬಳಕೆದಾರನದೇ ಅಪರಾಧ. ಆದರೆ ನಾವು ನೈಜತೆಯನ್ನು ಮೊಬೈಲ್‌ನಿಂದ ಅಪೇಕ್ಷಿಸುವುದು ಅಸಂಂಜಸ. ಮಿತ್ರನಿಗೆ ಮೊಬೈಲ್ ರಿಂಗಣಿಸಿ, ತಾವು ಎಲ್ಲಿದ್ದೀರಿ? ಎಂದು ಕೇಳಿದರೆ ಮಂಗಳೂರಿನಲ್ಲಿದ್ದುಕೊಂಡು ಉಡುಪಿಯಲ್ಲಿದ್ದೇನೆಂದು ಹೇಳುವುದೂ ನನ್ನ ಅನುಭವ. ಮೊಬೈಲ್‌ನ್ನು realistic ಆಗಿ ಬಳಸುವಲ್ಲಿ ಎಡಹುವಿಕೆ ಹೇರಳವಾಗಿರುತ್ತದೆ.
ಮೊಬೈಲುಗಳು time bounded ಆಗಿರಲೂ ಅಸಾಧ್ಯ. ತಕ್ಷಣದಲ್ಲಿ ಒಂದು ಸಂದೇಶ ಕಳುಹಿಸಲಿದ್ದಾಗ ರೇಂಜ್ ಇಲ್ಲ, ಕಡಿಮೆ ರೇಂಜ್ ಮುಂತಾದ ಕಾರಣಗಳಿಗಾಗಿ ಸಂಪರ್ಕ ಅಸಾಧ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಸಹಕರಿಸದ ಮೊಬೈಲ್ ಸಮಯಾಧಾರಿತವಾದ ಕೆಲಸಗಳಿಗೆ ಅನುಪಯುಕ್ತ. ಆದುದರಿಂದ ಮೊಬೈಲಿನತ್ತ ನಮ್ಮ ಮನಸ್ಸು ಬಾಗದೇ ಇದ್ದರೆ ನಮ್ಮ ಬದುಕು ಸಮಪಕ ದಿಕ್ಕಿನಲ್ಲಿ ಪಯಣಿಸುವುದರೊಂದಿಗೆ ಗುರಿತಲುಪುವ ಸಾಧ್ಯತೆ ಅಧಿಕವಾಗುತ್ತದೆ
…ಮುಂದುವರಿಯುತ್ತದೆ.
ಲೇ: ರಮೇಶ ಎಂ ಬಾಯಾರು, ಎಂ. ಎ, ಬಿ.ಎಡ್
ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಂದನ ಕೇಪು
ಮತ್ತು ಆಡಳಿತಾಧಿಕಾರಿ ಜನತಾ ಎಜುಕೇಷನಲ್ ಸೊಸೈಟಿ (ರಿ) ಅಡ್ಯನಡ್ಕ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here