ಎಲ್ಲರಿಗೂ ನಮಸ್ಕಾರ,

ಒಮ್ಮೆ ನನಗೆ ಮಿತ್ತರೊಬ್ಬರೊಡನೆ ವಾಗ್ವಾದ ಮಾಡಲೇಬೇಕಾದ ಅನಿವಾರ್ಯತೆ ಒದಗಿತು. ಅದೂ ಬಣ್ಣಗಳ ಶ್ರೇಷ್ಠತೆಯ ಬಗೆಗಿನ ವಾಗ್ವಾದವಾಗಿತ್ತೆನ್ನುವುದೇ ವಿಚಾರ. ಬಿಳಿಬಣ್ಣದ ಪರವಾಗಿ ಆ ಮಿತ್ತರು ಭರ್ಜರಿಯಾಗಿ ಮಾತನಾಡಿದನು. ನನಗೇಕೋ ಕರಿಯದರಲ್ಲೇ ಹಿರಿದನ್ನು ಎತ್ತಿ ಹಿಡಿಯುವ ಇರಾದೆ. ಅವರ ವಾಗ್ಝರಿಯ ಮುಂದೆ ಕರಿಯದರ ಪರವಾಗಿ ವಾದವನ್ನಾರಂಭಿಸಲು ಬೆವತೆ. ಆದರೂ ಒಂದು ಸವಾಲನ್ನೆಸೆದೇ ಬಿಡೋಣವೆನ್ನಿಸಿತು. ನನ್ನ ಮಾತಿನ ವರಸೆ ಹೇಗಿತ್ತೆಂಬುದನ್ನು ಈಗ ಸ್ವಲ್ಪ ಆಲಿಸಿ.
ವಯೋ ಲಿಂಗ ಭೇದವಿಲ್ಲದೆ ಮನುಷ್ಯನಿಗೆ ಕಪ್ಪು ಕೂದಲೇ ಇಷ್ಟ. ಬಿಳಿ ಕೂದಲಿನ ಹುಟ್ಟಡಗಿಸಲು ಅವನು ಅಥವಾ ಅವಳು ಪಡುವ ಪಾಡು ಅವರ್ಣನೀಯ ಬಿಳಿಗೂದಲಿಗೆ ಹೇಸಿ ಒಂದೊಮ್ಮೆ ನೋಯುವುದಿದ್ದರೂ ಅದನ್ನು ತನ್ನ ಉಗುರುಗಳಿಂದ ಚಿವುಟಿ ಹಿಡಿದು ಕೀಳುತ್ತಾನೆ. ಸಿಕ್ಕ ಸಿಕ್ಕ ಔಷಧಿ ಸಿಂಪಡಿಸುತ್ತಾನೆ ಅಥವಾ ಸೇವಿಸುತ್ತಾನೆ. ಬೆಂದ ಚಹದೆಲೆಯನ್ನು ಹಚ್ಚುತ್ತಾನೆ. ಕರಿಯ ಮೆಹಂದಿ ಸವರುತ್ತಾನೆ. ಬೇರೆ ಬೇರೆ ರಾಸಾಯನಿಕಗಳನ್ನೂ ಕೂದಲಿಗೆ ಲೇಪಿಸುತ್ತಾನೆ. ಕರಿಯ ಕೂದಲನ್ನೇ ಹೊಂದಿರಬೇಕೆಂದು ಹಲವು ನಿದ್ದೆಗಳನ್ನು ಬಿಡುತ್ತಾನೆ. ಕರಿಯ ಕೂದಲಿಗಾಗಿ ಸಹಸ್ರಾರು ರೂಪಾಯಿಗಳನ್ನು ವ್ಯಯಿಸುತ್ತಾನೆ. ತಾವು ಗಂಡಸರು ಎಂದು ಮೀಸೆ ತಿರುಹುವರೂ ತಮ್ಮ ಮೀಸೆಯನ್ನು ಕಪ್ಪಾಗಿಸಲು ಹಲವು ಜಾಣ ಕ್ರಮಗಳನ್ನು ವಹಿಸುತ್ತಾರೆ. ಮೀಸೆ ಬೋಳಿಸಿದರೂ ಸರಿ, ಇಷ್ಟ ಪಟ್ಟು ಬಿಳಿಮೀಸೆ ಉಳಿಸಿಕೊಳ್ಳುವವರೇ ಇಲ್ಲ ಎಂಬುವುದು ಅತಿಶಯೋಕ್ತಿಯಲ್ಲ. ಕಪ್ಪು ಬಣ್ಣದ ಕಣ್ಣು ಗುಡ್ಡೆಯೇ ಆಕರ್ಷಕ ಮತ್ತು ರೂಪವರ್ಧಕ ತಾನೇ? ಕರಿಯದರ ಹಿರಿಮೆಗೆ ಇನ್ನೇನು ಸಾಕ್ಷಿ ಬೆಕು?
ಲೌಕಿಕ ವಸ್ತುಗಳಾದ ಗಣಕ ಯಂತ್ರ, ಮೊಬೈಲ್, ಪರ್ಸ್, ರೇಡಿಯೋ, ಫೊಟೋ ಫ್ರೇಂ, ಕನ್ನಡಕದ ಫ್ರೇಂ, ದೂರದರ್ಶನದ ಸ್ಕ್ರೀನ್ ಎಲ್ಲದರಲ್ಲೂ ನಮ್ಮ ಆಯ್ಕೆ ಕರಿಯದೇ ಅಲ್ಲವೇ? ಬರೆಯುವ ಶಾಯಿಯು ಕರಿಯ ಬಣ್ಣದ್ದಾದರೆ ನಮಗೆ ಅತೀವ ಸಂತಸವಾಗುತ್ತದೆ. ರಿಸ್ಟ್ ವಾಚ್‌ನಲ್ಲಿ ಸಂಖ್ಯೆಗಳು ಕಪ್ಪು ಬಣ್ಣದ್ದಿರಲಿ, ವಾಚಿನ ಬೆಲ್ಟ್ ಕಪ್ಪಿದ್ದರೆ ಚೆಂದ ಎಂದೆನ್ನದವರು ಯಾರು? ಧರಿಸುವ ಪ್ಯಾಂಟ್ ಕಪ್ಪು ಬಣ್ಣಕ್ಕೆ ಹತ್ತಿರವಿದ್ದರಷ್ಟೇ ಪುರುಷರಿಗಿಷ್ಟ. ಅದರ ಬೆಲ್ಟೂ ಕಪ್ಪಾಗಿದ್ದರೇನೇ ಮನಸ್ಸಿಗೆ ಹಿತ. ಕಣ್ಣಿಗೆ ಹಚ್ಚುವ ಕಾಡಿಗೆ ಬಿಳಿ ಬಣ್ಣದ್ದು ಸಿಗುವುದೇ ಇಲ್ಲವಲ್ಲಾ !!! ಮಾರುಕಟ್ಟೆಯಲ್ಲಿ ವಿವಿಧ ವರ್ಣದ ಛತ್ರಿಗಳಿದ್ದರೂ ಬಹು ಜನರ ಆಯ್ಕೆ ಕಪ್ಪು ಬಣ್ಣದ ಬಟ್ಟೆಯಿರುವ, ಕಪ್ಪು ಹಿಡಿಕೆಯಿರುವ ಕೊಡೆ ಎಂದರೆ ವಿರೋಧಿಸುವವರು ಯಾರೂ ಇಲ್ಲ.
ಪುಟ್ಟ ಮಗುವಿನ ಕೆನ್ನೆಗೆ ಹಚ್ಚುವ, ದೃಷ್ಠಿ ಚುಕ್ಕಿಯು ಕಪ್ಪು. ಕರಿದಾದ ಬಣ್ಣಕ್ಕೆ ಎಂತಹ ನಿರೋಧಕ ಶಕ್ತಿ ಇದೆ ಎಂಬುದಕ್ಕೆ ಇದು ಸಾಕ್ಷಿಯಲ್ಲವೇ? ಮುದ್ದು ಕಂದಮ್ಮಗಳ ಕತ್ತಿಗೆ ಹಾರ ಹಾಕುವ ಸಂದರ್ಭದಲ್ಲೂ ಕರಿಬಣ್ಣದ ಕಾಯಿಗಳೇ ಹೆಚ್ಚಾಗಿರುವ ಹಾರಗಳ ಹುಡುಕೋಣವಿರುತ್ತದೆ. ಮಗು ಬರೆಯಲಾರಂಭ ಮಾಡುವ ಬಳಪ ಕರಿದು. ಅದರಲ್ಲಿ ಬರೆಯಲು ಬಳಸುವ ಕಡ್ಡಿ ಕಪ್ಪು. ಓದುವ ಅಕ್ಷರ ಕಪ್ಪು. ಮೇಸ್ಟ್ರು ಬರೆಯುವ ಹಲಗೆಗೆ ಹೆಸರೇ ಕರಿಹಲಗೆ ಎಂದಾಗಿದೆ. ಬರೆಯುವ ಪೆನ್ಸಿಲ್ ನ ಸೀಸದ ಬಣ್ಣ ಕಪ್ಪು ತಾನೇ? ಶಿಕ್ಷಣ ಮತ್ತು ಜ್ಞಾನದ ಆಸರೆಗಳು ಕರಿಯದರ ಹಿರಿಮೆಗೆ ಸಾಕ್ಷಿ
ಆಧುನಿಕ ಮನೆಗಳಲ್ಲಿ ಪಾಕ ತಯಾರಿಸಲು ಕಪ್ಪು ಬಣ್ಣದ ಸ್ಲಾಬ್‌ಗಳಿರುತ್ತವೆ. ಮಣ್ಣಿನ ಅಡುಗೆ ಪಾತ್ರೆಗಳನ್ನು ಕರಿಗೊಳಿಸಿಯೇ ಬಳಸುತ್ತಾರೆ. ನಿತ್ಯ ಬಳಸುವ ಚಾಕು, ಕತ್ತಿ, ಕೊಡಲಿ, ಗುದ್ದಲಿ, ಹಾರೆ ಇವೆಲ್ಲವೂ ಕಬ್ಬಿಣದಿಂದಲೇ ತಯಾರುಗೊಂಡಿವೆ. ಕಬ್ಬಿಣದ ವರ್ಣ ಕರಿಯದು ತಾನೇ? ಹಿರಿಯರ ಕಾಲzಲ್ಲಿ ಅಡುಗೆ ಕೋಣೆಗಳ ನೆಲ, ಒಲೆಕಟ್ಟೆಗಳು ಕರಿಯ ವರ್ಣದ್ದಾಗಿರುವಂತೆ ನೋಡಿಕೊಳ್ಳುತ್ತಿದ್ದರು.. ಸೆಗಣಿ ಸಾರಿಸುವ ನೆಲವಾದರೆ ಕಪ್ಪು ಮಸಿ ಮಿಶ್ರಗೊಳಿಸಿಯೇ ಸೆಗಣಿ ಸಾರಿಸುತ್ತಿದ್ದರು. ಅಕ್ಕಸಾಲಿಗರು, ಕಮ್ಮಾರರು ತಮ್ಮ ಕಾಯಕ ಕ್ಷೇತ್ರದಲ್ಲಿ ಕಪ್ಪು ಮಸಿಯನ್ನು ಬಳಸುತ್ತಾರೆ. ಕರಿದಾದ ಮಸಿಯು ಚಿನ್ನಕ್ಕೆ ಆಕಾರ, ಅಲಂಕಾರ ಮತ್ತು ಹೊಳಪನ್ನು ಕೊಡುತ್ತದೆ. ಆ ಕಪ್ಪು ಮಸಿಯೇ ನಳನಳಿಸುವ ಕೆಂಡ ಮತ್ತು ಅತ್ಯಧಿಕ ಶಕ್ತಿಯ ಅಗ್ನಿಯನ್ನು ಸೃಷ್ಠಿಸುತ್ತದೆ. ಮಸಿಗೆ ಶುದ್ಧೀಕರಿಸುವ ಅತ್ಯಧಿಕ ಶಕ್ತಿ ಇದೆ. ಉಗಿ ಬಂಡಿಗೆ ಉಗಿಶಕ್ತಿ ನೀಡಲು ಬಳಸುವ ಕಲ್ಲಿದ್ದಲು ಬರೇ ಕಪ್ಪು.
ಹೆಸರು ಬೇಳೆ, ಶಾವಿಗೆ, ಗೋಡಂಬಿ, ಕಡಲೆ ಬೇಳೆ ಮುಂತಾದುವುಗಳ ಪಾಯಸವಾಗ ಬೇಕಾದರೆ ಅದನ್ನು ಹದವರಿತು ಕಾಯಿಸಿ ಅದರ ಬಣ್ಣವನ್ನು ಕರಿಯದರ ಸಮೀಪಕ್ಕೆ ತರುತ್ತಾರೆ. ದೇಹದ ಅನ್ನಮಯಕೋಶ ಆಹಾರವನ್ನವಲಂಬಿಸಿದೆ. ಅಡುಗೆಯ ಆರಂಭ ಅಥವಾ ಮುಕ್ತಾಯದಲ್ಲಿ ಒಗ್ಗರಣೆಗೆ ಕಪ್ಪು ಸಾಸಿವೆಯೇ ಬೇಕು. ನಮ್ಮ ಆಹಾರಕ್ರಮದಲ್ಲಿ ಕಜೆ ಅಕ್ಕಿ, ರಾಗಿ ಮತ್ತು ಗೋಧಿ ಪ್ರಮುಖ. ಇವುಗಳ ಬಣ್ಣ ಕಪ್ಪಲ್ಲವೇ?
ಗಣಪತಿಯ ನೈವೇದ್ಯವಾದ ಪಂಚಕಜ್ಜಾಯಕ್ಕೆ ಕಪ್ಪೆಳ್ಳು ಸೇರದೇ ಇದ್ದರೆ ಅದು ಅಪೂರ್ಣ. ಗಣಪತಿಗೆ ನಮ್ಮ ಮೊದಲ ಸೇವೆ. ಆ ಸೇವೆಯ ಪ್ರಸಾದ ಕರಿಯ ಬಣ್ಣದ್ದು. ಶನಿದೇವರೂ ಕಪ್ಪು ಬಣ್ಣದ ಎಳ್ಳಿಗೆ ಒಲಿಯುತ್ತಾರೆ. ಕಪ್ಪು ದನದ (ಕಪಿಲೆ) ಹಾಲು ದೇವರಿಗೆ ಪ್ರಿಯವಂತೆ. ದೇವರ ಅರ್ಚನೆಯಲ್ಲಿ ಕರಿಎಳ್ಳಿನ ಎಣ್ಣೆಯನ್ನು ಧಾರಾಳವಾಗಿ ಬಳಸುತ್ತಾರೆ. ಶ್ರೀದುರ್ಗೆಗೆ ಕರಿಯ ಬಳೆಯೇ ಪ್ರಿಯವಂತೆ. ಭಗವಾನ್ ಶ್ರೀಕೃಷ್ಣನ ದೇಹವರ್ಣ ಕಪ್ಪು. ಕರಿಯನಾದ ಅವನೂ ಲೋಕಪ್ರಿಯ. ಶ್ರೀಕೃಷ್ಣನು ಕರಿಯ ತುಳಸಿ ಪ್ರಿಯ. ನಾವು ಆರಾಧಿಸುವ ಶಿವಲಿಂಗದ ವರ್ಣ ಕಪ್ಪು. ನಮ್ಮ ಪೂಜೆಯ ಶಿಲಾಮೂರ್ತಿಗಳ ಬಣ್ಣ ಕಪ್ಪು. ಮಹಾನ್ ಬಾಹುಬಲಿಯ ಆ ಕಪ್ಪು ಬಣ್ಣದ ಶಿಲಾ ಪ್ರತಿಮೆ ಎಷ್ಟೊಂದು ನಂiiನಮನೋಹರ ಅಲ್ಲವೇ?
ಕಪ್ಪುಗಲ್ಲಿನ ಪಂಚಾಗದ ಮೇಲೆ ನಿಲ್ಲುವ ಕಟ್ಟಡಗಳೇ ಮಹಾ ಬಲಿಷ್ಠ. ಸಿಹಿಯಾದ ಜೇನಿನ ಬಣ್ಣ, ಬೆಲ್ಲದ ಬಣ್ಣ ಕಪ್ಪು. ಮಕರಂಧ ಹೀರುವ, ಪರಾಗ ಸ್ಪರ್ಷ ಮಾಡುವ ದುಂಬಿಗಳಲ್ಲೂ ಕರಿಯ ವರ್ಣದ ಸಂರಚನೆದೆ. ಅತ್ಯಂತ ಪರಿಮಳದಿಂದ ಕೂಡಿದ, ಸುಗಂಧ ದ್ರವ್ಯಗಳಲ್ಲಿ ಹೇರಳವಾಗಿ ಬಳಕೆಯಾಗುವ ಕಸ್ತೂರಿಯ ಬಣ್ಣ ಕಡು ಕಪ್ಪು. ಬಹಳಷ್ಟು ಹಣ್ಣುಗಳ ಬೀಜದ ಬಣ್ಣ ಕಪ್ಪಾಗಿರುತ್ತದೆ. ಅಥವಾ ಕಪ್ಪು ಚುಕ್ಕಿಯಂದನ್ನಾದರೂ ಹೊಂದಿರುತ್ತವೆ. ಅವಲೋಕಿಸಿದವರಿಗೆ ಬಾಳೆಯ ಹಣ್ಣಿನೊಳಗಡೆಯೂ ಕಪ್ಪು ಬೀಜದಂತಹ ರಚನೆ ಕಾಣುತ್ತದೆ. ಮೃತರ ಉತ್ತರಕ್ರಿಯೆಯಲ್ಲಿ ಕರಿ ಬಣ್ಣದ ಎಳ್ಳು ಫ್ರಧಾನ ಭೂಮಿಕೆಯನ್ನು ಹೊಂದಿದೆ. ಎಳ್ಳಿನೊಂದಿಗೆ ತರ್ಪಣವಾಗದೇ ಹೋದರೆ ಸದ್ಗತಿ ದೊರೆಯುವುದಿಲ್ಲವಂತೆ. ಮೃತರ ಸದ್ಗತಿಗೆ ಮಾಡುವ ಶ್ರಾಧ್ಧಾದಿಗಳಲ್ಲಿ ಕಾಗೆಗೂ ಮಹತ್ವದ ಸ್ಥಾನವಿದೆ. ಕಾಗೆ ಕಪ್ಪು ಬಣ್ಣದ್ದಲ್ಲದೇ ಬೇರೆ ಬಣ್ಣಗಳಲ್ಲಿ ಇಲ್ಲವಲ್ಲ? ಮುತ್ತೈದೆಯರು ಧರಿಸುವ ಮಾಂಗಲ್ಯಹಾರದಲ್ಲಿ ಕಪ್ಪುಮಣಿಗಳಿರಬೇಕು. ಅದರ ಹೆಸರೇ ಕರಿಯಮಣಿ ಸರ ಎಂಬುದು ಉಲ್ಲೇಖನೀಯ.
ನ್ಯಾಯ ದೇವತೆ ಕಕ್ಷಿಗಳಿಂದ ವಾದಗಳನ್ನು ಆಲಿಸುವಾಗ ತಾನು ಸಮದರ್ಶಿಯಾಗಿರಬೇಕೆಂದು ತನ್ನ ಕಣ್ಣುಗಳನ್ನು ಕಪ್ಪು ವಸ್ತ್ರದಿಂದ ಮುಚ್ಚಿರುತ್ತಾಳೆ. ನ್ಯಾಯಕ್ಕಾಗಿ ಹೋರಾಡುವ ಸಂದರ್ಭದಲ್ಲಿ ಹೋರಾಟಗಾರರು ಕಪ್ಪು ಬಟ್ಟೆಯ ಪಟ್ಟಿಯನ್ನೇ ಧರಿಸಿಕೊಳ್ಳುತ್ತಾರೆ. ವಾದಕ್ಕಾಗಿ ಉಲ್ಲೇಖಿಸುವುದಾದರೆ ಕಪ್ಪು ಬಣ್ಣವು ನ್ಯಾಯದ ಸಂಕೇತವಲ್ಲವೇ? ಉಗಿಬಂಡಿಯು ಓಡುವ ಟ್ರ್ಯಾಕ್ ಕಪ್ಪು. ನಮ್ಮ ಎಲ್ಲ ಭೂಸಾರಿಗೆ ವಾಹನಗಳು ಓಡುವ ರಸ್ತೆ ಕಪ್ಪು. ಆದುದರಿಂದ ಕಪ್ಪು ಕಪ್ಪೆಂದು ಹೀಗಳೆಯದಿರು. ಕರಿದೇ ಹಿರಿದು. ಕರಿಯ ಬಣ್ಣವೇ ಸರ್ವೋತ್ತಮ. ಅದ ನೀ ತಿಳಿ ಪುರುಷೋತ್ತಮ ಎಂದು ನನ್ನ ಇದಿರಾಳಿಗೆ ’ಟಾಂಗ್’ ನೀಡಿದ್ದೇನೆ. ನನ್ನ ವಾದವನ್ನು ಇದಿರಾಳಿಯು ಯಾವ ರೀತಿಯಾಗಿ ಖಂಡಿಸುತ್ತಾರೋ ಏನೋ ಎಂಬ ಭಯ ನನಗೀಗ ಆರಂಭವಾಗಿದೆ. ಮತ್ತೆ ಕರಿಯದರ ಮಹತ್ವದ ಪಟ್ಟಿಯನ್ನು ಬೆಳೆಸುವುದರತ್ತ ಸಾಗುತ್ತೇನೆ. ನಮಸ್ಕಾರ.

 

ಲೇ:ರಮೇಶ ಎಂ ಬಾಯಾರು ಎಂ.ಎ; ಬಿ.ಇಡಿ
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here