ಒಂದು ಮರವು ಬಿರುಗಾಳಿಗೆ ಬಹಳಷ್ಟು ಬಾಗಿದರೂ ಮುರಿಯದು. ಎಂತಹ ಬಲವಾದ ತೂಫಾನಾದರೂ ಮರ ಭೂತಳದ ಮೇಲೆ ಬೀಳದು, ನಿಂತೇ ಇರುತ್ತದೆ ಎಂದಾದರೆ ಆ ಮರದ ಸ್ಥಾಯಿತ್ವವನ್ನು ಅದರ ಬೇರು ದೃಢವಾಗಿದ್ದುಕೊಂಡು ಕಾಪಾಡುತ್ತಿದೆ ಎಂದರ್ಥ. ಬೇರು ಆರೋಗ್ಯಪೂರ್ಣವಾಗಿದ್ದರೆ ಮರವೂ ಸುಂದರವಾಗಿ ಕಂಗೊಳಿಸುವುದರೊಂದಿಗೆ ಉತ್ತಮ ಫಲ ನೀಡುತ್ತದೆ. ಮರವನ್ನು ಮನುಷ್ಯನಿಗೆ ಹೋಲಿಕೆ ಮಾಡಿದರೆ ಹೇಗೆಂಬ ಯೋಚನೆ ಹೊಳೆಯೆಯಿತು. ಅದರ ಪರಿಣಾಮದಿಂದ ಸಾಕಾರಗೊಂಡ ಲೇಖನ ಶ್ರೇಣಿಯಿದು.
ಮನುಷ್ಯನಿಗೆ ಬೇರು ಇದೆಯೇ? ಇರುವುದಾದರೆ ಅದು ಎಲ್ಲಿದೆ? ಹೌದು. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೇಬೇಕು ಅಲ್ಲವೇ? ಮರದ ಬೇರು ನಮ್ಮ ಇಂದ್ರಿಯಗಳಿಗೆ ಅಗೋಚರವಾಗಿರುವುದರಿಂದ ಮನುಷ್ಯನಿಗಿರುವ ಬೇರೂ ಅಗೋಚರವಾಗಿರಬೇಕು ತಾನೇ? ಹೌದು. ಅಂತಹ ಅಗೋಚರವಾಗಿರುವಂತಹ, ನಮ್ಮನ್ನು ನಿಯಂತ್ರಿಸಬಲ್ಲ ನಮ್ಮ ಬೇರು, ಮತ್ತಾವುದೂ ಅಲ್ಲ. ಅದುವೇ ಮನಸ್ಸು. ನಮ್ಮ ಮನಸ್ಸು ನಮ್ಮನ್ನು ನೇರ ನಿಲ್ಲಿಸಲು ಕಾರಣವಾಗುವಂತೆ ಬೀಳಿಸಲೂ ಕಾರಣವಾಗುತ್ತದೆ. ನಮ್ಮನ್ನು ಬೀಳಿಸುವ, ಎಂದರೆ ನಾಶಗೊಳಸುವ ಆ ಮನಸ್ಸಿನ ಸ್ವರೂಪ ಹೇಗಿರುತ್ತದೆ? ನಮ್ಮ ಪತನಕ್ಕೆ ಕಾರಣವಾಗುವ ಮನಸ್ಸು, ಅದುವೇ ಚಂಚಲ ಮನಸ್ಸು. ಚಾಂಚಲ್ಯಯುತವಾದ ಮನಸ್ಸು ಮಾತ್ರವೇ ಅರಿಷಡ್ವರ್ಗಗಳಿಗೆ ಬಹಳ ಬೇಗನೆ ಬಲಿಯಾಗುತ್ತದೆ. ಅರಿಷಡ್ವರ್ಗಗಳಲ್ಲಿ ನಮ್ಮ ಮೊದಲ ಶತ್ರುವೇ ಕಾಮನೆಗಳು, ಬಯಕೆಗಳು ಅಥವಾ ದುರಾಸೆಗಳು. ನಮ್ಮ ಹಿರಿಯರಿಗೆ ಜಮೀನು, ಧನಕನಕ, ಅಧಿಕಾರ, ಸುಖ ಮೊದಲಾದ ವಿಷಯಗಳಲ್ಲಿ ಕಾಮನೆಯಿತ್ತು. ಆದರೆ ಆ ಕಾಮನೆಗಳಿಗೆ ಪರಿಧಿಯಿತ್ತು, ನೈತಿಕತೆಯ ಬೆಂಗಾವಲಿತ್ತು. ಆದರೆ ಇಂದು ನಮ್ಮ ಮನಸ್ಸು ಸುರಾಪಾನಿತ ವೃಶ್ಚಿಕ ದಂಶಿತ ಕಪಿಗಿಂತಲೂ ಹೆಚ್ಚಿನ ತಿಪ್ಪರಲಾಗ ಹಾಕುತ್ತಿದೆ. ನಮ್ಮ ಕಾಮನೆಗಳಿಗೆ ನಿಯಮಿತವಾದ ಪರಿಧಿಯಾಗಲೀ, ನೈತಿಕತೆಯ ತಳಹದಿಯಾಗಲೀ ಇಲ್ಲ ಎನ್ನುವುದೇ ಗಹನವಾದ ಆಕ್ಷೇಪಣೀಯ ಹಾಗೂ ದುಃಖಕರ ಸಂಗತಿ.
ನಮಗೆ ಬೇಕು, ಸರಿ ಪಡೆಯೋಣ; ಆದರೆ ಒಂದು ಸಾಲದೇ? ಒಂದಕ್ಕಿಂತಲೂ ಹೆಚ್ಚು ಬೇಕು ಎಂಬ ದುರಾಸೆಯ ಮನಸ್ಸು ನಮ್ಮ ವಿನಾಶದ ಮೊದಲ ಮೆಟ್ಟಿಲು. ತನ್ನಲ್ಲಿದ್ದರೂ, ಹೊಸದಾಗಿರುವುದೊಂದನ್ನು ನೋಡಿದಾಗ ಅದೂ ತನಗೆ ಸೇರಿದರೇ…….! ಎಂಬ ಚಪಲದಿಂದ ಅದನ್ನು ಹೊಂದಲು ಇಚ್ಛಿಸುವ ಮನಸ್ಸು ನಮ್ಮ ವಿನಾಶದ ಮುಂದಿನ ಮೆಟ್ಟಲು. ತಾನು ಸಂಗ್ರಹಿಸಿದ್ದು ತನಗೆ ಮಾತ್ರವಲ್ಲ, ಮುಂದಿನ ಅಸಂಖ್ಯ ತಲೆಮಾರುಗಳಿಗೂ ಸಾಕಾಗುವಷ್ಟಾಗಿರಬೇಕೆಂಬ ಸ್ವಾರ್ಥ ಮನಸ್ಸು ನಮ್ಮನ್ನು ಅನೈತಿಕತೆಯತ್ತವೇ ಉರುಳಿಸುತ್ತದೆ ಎಂಬ ಕಠೋರ ಸತ್ಯದ ಅರಿವು ನಮಗಿದೆಯೇ? ಹಾಗಾಗಿ ಮನಸ್ಸೆಂಬ ನಮ್ಮ ಬೇರು ನಮ್ಮನ್ನು ಪತನಗೊಳಿಸದೆ, ಉತ್ಥಾನಗೊಳಿಸುವಂತಾಗಲು ನಮ್ಮ ಜೀವನ ಶೈಲಿ ಬದಲಾಗಬೇಕು, ಸೌಂದರ್ಯಪೂರ್ಣವಾಗಬೇಕು, ಜನಾಪೇಕ್ಷಿತವಾಗಬೇಕು ಹಾಗೂ ಸುಸಂಸ್ಕೃತವಾಗಬೇಕು
ಹೊಸದಾಗಿ ಮಾರುಕಟ್ಟೆಗೆ ಕಾರೊಂದರ ಪ್ರವೇಶವಾದಾಗ ಅದನ್ನು ಪಡೆಯುವ ಬಯಕೆ ಶ್ರೀಮಂತನ ಮನಸ್ಸಿಗೆ ನುಸುಳುತ್ತದೆ. ಬಡವನೂ ಬಯಕೆಯುಳ್ಳವನೇ ಆಗಿರುತ್ತಾನೆ. ಒಂದು ಸಿನಿಮಾವನ್ನು ಒಮ್ಮೆ ವೀಕ್ಷಿಸಿದ ಬಡವನೊಬ್ಬ ಅದನ್ನೇ ಮಗದೊಮ್ಮೆ, ಇನ್ನೊಮ್ಮೆ ಎಂದು ನೋಡಲು ಬಯಸುವುದು ಸರಿಯಲ್ಲ. ಹಾಗಾದರೆ ಶ್ರೀಮಂತನಾದವನು ಒಂದೇ ಸಿನಿಮಾವನ್ನು ಮತ್ತೆ ಮತ್ತೆ ನೋಡಬಹುದೇ? ಇಲ್ಲಿ ಕಾರು ಮತ್ತು ಸಿನಿಮಾಗಳು ದೃಷ್ಟಾಂತವಾಗಿವೆಯೇ ಹೊರತು ಬಡವ ಶ್ರೀಮಂತರ ನಡುವಿನ ಅಂತರದ ವ್ಯಾಖ್ಯಾನವಲ್ಲ. ಒಬ್ಬನಿಗೆ ಒಂದು ಸಾಕು ಎಂಬ ಸಂತೃಪ್ತಿ ಸಾಲದೇ ಎಂಬುದೇ ಈ ಉದಾಹರಣೆಗಳ ಗೂಢ ಭಾವ.
ನಾವು ಕೇವಲ ಕೊಳ್ಳುವಿಕೆಯಲ್ಲಿ, ದೃಶ್ಶಿಸುವಲ್ಲಿ ನಿಯಂತ್ರಿತರಾಗಿದ್ದರೆ ಸಾಕೆ? ಇಲ್ಲ. ಸಾಲದು. ಹಾಲು ಅಮೃತ, ಪ್ರಾಣ ತ್ರಾಣಗಳ ರಕ್ಷಕನೆಂದು ಒಂದು ಬಾಂಡಲೆ ಹಾಲು ಕುಡಿಯಬಹುದೇ? ಆಗ ಹಾಲೂ ವಿಷವಾಗುವುದಿಲ್ಲವೇ? ಎಲ್ಲದರಲ್ಲೂ ನಿತಂತ್ರಣವಿರಲಿ. ಮಾತು-ಕತೆಯಲ್ಲೇ ದಿನಗಳೆಯುವುದು, ದೂರದರ್ಶನ ಕಾರ್ಯಕ್ರಮಗಳ ವೀಕ್ಷಣೆಯಲ್ಲೇ ಕಾಲವ್ಯಯಿಸುವುದು, ವಾಟ್ಸಾಪ್, ಫೇಸ್‌ಬುಕ್, ಟ್ವಟ್ಟರ್ ಮುಂತಾದ ಜಾಲತಾಣಗಳ ದಾಸರಾಗಿರುವುದು ಎಲ್ಲವೂ ಅನಿಯಂತ್ರಿತ ಮನಸ್ಸಿನ ಕಾರಣದಿಂದಾಗಿ ಆಗುವ ಆಘಾತಗಳು ಆಥವಾ ದುರ್ವ್ಯಸನಗಳು. ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ನಾವು ಕುಡುಕರಾಗೆವು, ಜೂಜು ನಮ್ಮ ಬಳಿಗೆ ಇಣುಕದು, ತಮ್ಮ ಜಾವಾಬ್ದಾರಿಯ ಅರಿವಿನೊಂದಿಗೆ ಕಾರ್ಯೋನ್ಮುಖಿಯಾಗುವ ಮನಸ್ಸು ನಮ್ಮದಾಗಲೇ ಬೇಕು. ಅದಕ್ಕಾಗಿ ಮನಸ್ಸೆಂಬ ಬೇರಿಗೆ ಮೊತ್ತಮೊದಲು ಸಮಂಜಸವಾದ ನೈತಿಕ ಉಪಚಾರಗಳನ್ನು ನೀಡಿ ಅದನ್ನು ಪಳಗಿಸುವ ಪ್ರಯತ್ನ ಅತೀ ಅಗತ್ಯ.
ನಮ್ಮ ಉನ್ನತಿ ಅಥವಾ ಅವನತಿ ನಮ್ಮ ಮನಸ್ಸನ್ನು ಆಧರಿಸಿದೆ. ಮನೋನಿಗ್ರಹಿಗಳು ಭಗವಂತನನ್ನೂ ಗೆದ್ದಿದ್ದಾರೆಂಬುದಕ್ಕೆ ಪುರಾಣಗಳ ಆಧಾರಗಳಿವೆ. ನಾವು ಭಗವಂತನನ್ನು ಗೆಲ್ಲದಿದ್ದರೂ ವಿಷಾದವಿಲ್ಲ, ನಮ್ಮ ಮನಸ್ಸನ್ನು ಗೆಲ್ಲಿಸುವ, ಯಾವುದೇ ಕ್ಷುದ್ರತೆಯೂ ಮನಸ್ಸಿಗಂಟದಂತೆ, ಅದನ್ನು ಸದಾ ಶುದ್ಧವಾಗಿಡುವ ಉದ್ದೇಶಕ್ಕಾಗಿಯಾದರೂ ಮನೋನಿಗ್ರಹ ಮಾಡುವ ಅನಿವಾರ್ಯತೆಯಿದೆ.

……….ಮುಂದುವರಿಯುತ್ತದೆ.

ಲೇ: ರಮೇಶ ಎಂ ಬಾಯಾರು, ಎಂ. ಎ, ಬಿ.ಎಡ್
ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಂದನ ಕೇಪು
ಮತ್ತು ಆಡಳಿತಾಧಿಕಾರಿ ಜನತಾ ಎಜುಕೇಷನಲ್ ಸೊಸೈಟಿ (ರಿ) ಅಡ್ಯನಡ್ಕ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here