ಜನತಾ ಪದವಿಪೂರ್ವ ಕಾಲೇಜಿನ ಮುಂದಿನ ಶೈಕ್ಷಣಿಕ ಸಾಲಿಗೆ ಪ್ರಥಮ ಪಿ.ಯು. ತರಗತಿಗಳಿಗೆ ದಾಖಲಾತಿಗಾಗಿ ಹತ್ತನೇ ತರಗತಿಯಲ್ಲಿ ಈ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಮನವನ್ನೋಲೈಸುವ ಉದ್ದೇಶದಿಂದ ನಮ್ಮ ಕಾಲೇಜಿನ ಪೋಷಕ ಸಂಸ್ಥೆಗಳಿಗೆ ನಮ್ಮ ತಂಡ ಭೇಟಿ ನೀಡಿದಾಗ ನನಗಾದ ಅದ್ಭುತವಾದ ಅನುಭವವನ್ನು ಹಂಚಿಕುಳ್ಳುವ ಉದ್ದೇಶದ ಲೇಖನವಿದು.

ಈ ಭೇಟಿ ನಡೆದ ದಿನಾಂಕ 22ನೇ ಜನವರಿ 2020. ಭೇಟಿ ನೀಡಿದ ಸರಕಾರಿ ಪ್ರೌಢ ಶಾಲೆಯ ಹೆಸರನ್ನು ಗೌಪ್ಯವಾಗಿಡುವುದು ಸಮಂಜಸವಲ್ಲ. ಹಾಗಾಗಿ ಓದುಗರೇ ಶಾಲೆಯನ್ನು ಓದುತ್ತಾ ಗುರುತಿಸಲು ಅವಕಾಶ ಕಲ್ಪಿಸುತ್ತಿದ್ದೇನೆ.
ಒಂದೊಮ್ಮೆ ಉದಯವಾಣಿ ಗುರುತಿಸಿದ ಕುಗ್ರಾಮವಿದು. ಬಂಟ್ವಾಳ ತಾಲೂಕಿನ ಅತ್ಯಂತ ದಕ್ಷಿಣ ತುದಿಯಲ್ಲಿರುವ ಈ ಗ್ರಾಮ ಇಂದು ಸುಗ್ರಾಮವಾಗಿ ಬೆಳೆಯಲಾರಂಭಿಸಿದೆ. ಇಲ್ಲಿನ ಪ್ರೌಢ ಶಾಲೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಒಂದು ಆತ್ಮೀಯತೆಯ ವಾತವಾರಣಕ್ಕೆ ಹೋದ ಆನಂದಾನುಭೂತಿಯಾಯಿತು. ಸ್ವಾಗತಿಸುವ ನಗುಮುಖದ ಕರಜೋಡಿತ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಗಳು, ಲಾಗ ಹಾಕುತ್ತಾ ಇನ್ನೊಬ್ಬರ ಬೆನ್ನೇರುತ್ತಾ ಸಾಗದಿರುವ, ಶೌಚಾಲಯಕ್ಕೂ ಸಾಲಾಗಿಯೇ ನಡೆಯುವ ಶಿಸ್ತಿನ ಹಸನ್ಮುಖೀ ವಿದ್ಯಾರ್ಥಿಗಳು ನಾವು ಆ ಶಾಲೆಯಲ್ಲಿ ಕಂಡ ಮೊದಲ ಚೇತೋಹಾರಿ ದೃಶ್ಯ.
ನಮ್ಮ ಪ್ರಾಂಶುಪಾಲರು ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೇವಲ ಐದು ನಿಮಿಷಗಳಷ್ಟು ಕಾಲ ಮಾತನಾಡಿದರು. ಸಾಮಾನ್ಯವಾಗಿ ಒಂದೊಂದು ವಿದ್ಯಾರ್ಥಿ ಒಂದೊಂದು ಮುಖಭಾವದಿಂದ ತರಗತಿಯೊಳಗೆ ಕಾಣಸಿಗುತ್ತಾರೆ, ಒಬ್ಬನ ಮುಖದಲ್ಲಿ ಗಲಿಬಿಲಿ, ಇನ್ನೊಬ್ಬನಲ್ಲಿ ಗೊಂದಲ, ಮತೊಬ್ಬನ ಮುಖದಲ್ಲಿ ಯಾವುದೋ ಮ್ಲಾನ ಮೌನ ಹೀಗೆ……… ಒಂದೊಂದು ಪರಿಯ ಮುಖಗಳಿರುವ ತರಗತಿಗಳು ಧಾರಾಳವಾಗಿವೆ. ಆದರೆ ಈ ಪ್ರೌಢಶಾಲೆಯಲ್ಲಿ ಯಾವುದೇ ಮುಖದಲ್ಲೂ ಯಾವುದೇ ವ್ಯತ್ಯಸ್ತವಾದ ಭಾವಗಳಿಲ್ಲ. ಕಿವಿಯರಳಿಸಿ ಆಲಿಸುವ, ಮುಖವರಳಿಸಿ ನೋಡುವ, ಮನವರಳಿಸಿ ಅರ್ಥೈಸುವ ಆ ಮುಖಗಳು ಎಂತಹ ಬಂಡೆಯನ್ನೂ ಆಕರ್ಷಿಸುವಂತಿತ್ತು. ಅದೊಂದು ಅಪರೂಪದ ಆನಂದಾನುಭವ.
ಶಾಲಾ ’ಇಕೋ ಕ್ಲಬ್’ ಪರಿಸರದ ಬಗ್ಗೆ ವಿಶೇಷ ಕಾಳಜಿವಹಿಸುತ್ತದೆ ಎಂಬುದಕ್ಕೆ ಕಸ ಮತ್ತು ಪ್ಲಾಸ್ಟಿಕ್ ಮುಕ್ತ ಶಾಲಾ ವಾತಾವರಣವೇ ಸಾಕ್ಷಿ. ಶಾಲಾ ಮುಂಭಾಗದಲ್ಲಿ ಹಚ್ಚ ಹಸುರಾದ, ದೊಡ್ಡ ದೊಡ್ಡ ಕಾಯಿಗಳು ಕಣ್ಮನಗಳನ್ನು ಸೆಳೆಯುವ ಬದನೆಗಿಡದ ಸಾಲು ಆ ಶಾಲೆಯು ಕೈತೋಟದ ಬಗ್ಗೆ ವಹಿಸಿದ ಕಾಳಜಿಗೆ ಜ್ವಲಂತ ಸಾಕ್ಷಿ. ಕೈತೋಟದ ಬಾಳೆಕೃಷಿಯಿಂದ ಕಳೆದ ಸಾಲಿನಲ್ಲಿ ರೂಪಾಯಿ ಇಪ್ಪತ್ತು ಸಾವಿರಕ್ಕೂ ಮಿಕ್ಕಿದ ಆದಾಯ ಬಂದಿದೆ, ಈ ವರ್ಷ ಮತ್ತೂ ವಿಸ್ತೃತ ಜಮೀನಿನಲ್ಲಿ ಬಾಳೆ ನೆಡಲಾಗಿದೆ ಎಂಬುದು ಆ ಶಾಲೆಯನ್ನು ಸಮುದಾಯ ಯಾಕೆ ಇಷ್ಟಪಡುತ್ತದೆ ಎಂಬುದರ ಮರ್ಮ.
ಕೊಳೆಯಿಲ್ಲದ ನೆಲ, ವಿಕೃತ ಗೀರುಗಳು, ಹಾಳು ಮನಸ್ಸಿನ ಬರಹಗಳು, ಡೊಂಕು ಚಿತ್ತದ ಚಿತ್ತಾರಗಳು ಇಲ್ಲದ ಶಾಲಾ ಕಟ್ಟಡದ ಗೋಡೆ ನಮ್ಮ ಸಂಸ್ಥೆಯ ಅಧ್ಯಕ್ಷರಾದಿಯಾಗಿ ಎಲ್ಲರನ್ನೂ ಸೆರೆಹಿಡಿಯಿತು. ಶಾಲೆಯಲ್ಲಿ ಯಾರು ಹೆಚ್ಚು ಅಂಕ ಪಡೆದವರು? ಎನ್‌ಎಂಎಂಎಸ್ ಪರೀಕ್ಷೆ ಉತ್ತೀರ್ಣರಾದವರು ಯಾರ್‍ಯಾರು? ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಾಲ್ಲಿಸಿದವರು ಯಾರ್‍ಯಾರು ಮತ್ತು ಯಾವಾಗ ಯಾವಾಗ ಹೀಗೆ ಅನೇಕ ಮಾಹಿತಿಗಳನ್ನೂ ಆ ಶಾಲಾ ಕಛೇರಿಯ ಗೋಡೆಗಳೇ ಸಾರುತ್ತವೆ. ಶಾಲೆಗೆ ಜಮೀನು ದಾನ ಮಾಡಿದ ಗ್ರಾಮದ ಮಹಾತ್ಯಾಗಿಯ ಭಾವಚಿತ್ರವನ್ನು ಕಛೇರಿಯಲ್ಲಿ ತೂಗ ಹಾಕಿದ್ದು ಸಮುದಾಯದಲ್ಲಿ ಶಾಲೆಯ ಬಗ್ಗೆ ಅಭಿಮಾನವನ್ನು ಜಾಗೃತಗೊಳಿಸುವ ಶಿಕ್ಷಕರೆಲ್ಲರ ಪ್ರಯತ್ನ ಯಾರನ್ನೂ ಮೂಕಗೊಳಿಸದಿರದು.
ಮಕ್ಕಳು ಪಠ್ಯ ಮತ್ತು ಸಹ ಪಠ್ಯ ಚಟುವಟಿಕೆಗಳೆರಡರಲ್ಲೂ ಸಾಧನೆ ಮಾಡುತ್ತಾರೆ, ಮುಂದಿನ ಶೈಕ್ಷಣಿಕ ಕ್ಷೇತ್ರಗಳಲ್ಲೂ ಅವರ ಸಾಧನಾ ಪಥ ಮುಂದುವರಿಯುತ್ತದೆ ಎಂದಾದರೆ ಆ ಶಾಲಾ ಬೋಧಕರು ವಿದ್ಯಾರ್ಥಿಗಳ ಮನಸ್ಸನ್ನು ಮೃದುವಾಗಿ ಅರಳಿಸುವುದರೊಂದಿಗೆ ಸಾಕಷ್ಟು ಸದೃಢಗೊಳಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸುತ್ತದೆ. ಅದು ಶಾಲೆ, ಆದರೆ ನೋಡುಗನಿಗೆ ಅದು ದೇವಾಲಯ. ಶಾಲೆಯನ್ನು ಪ್ರವೇಶಿಸಿ ಅಲ್ಲೆಲ್ಲ ಸುತ್ತಾಡಿ ಮಾತನಾಡಿಸಿದಾಗ ದೇವಾಲಯಕ್ಕೋ, ಮಸೀದೀಗೋ, ಇಗರ್ಜಿಗೋ, ಬಸದಿಗೋ ಹೋದಾಗ ದೊರೆಯುವ ಮಾನಸಿಕ ಶಾಂತಿ ಒದಗುತ್ತದೆ. ಸಂದರ್ಶನಾರ್ಥಿಯ ಮನಸ್ಸು ಆನಂದ ತುಂದಿವಾಗುತ್ತದೆ. ನಮ್ಮೆಲ್ಲಾ ಶಾಲೆಗಳ ಚಿತ್ರಣ ಹೀಗೆಯೇ ಸಾಗಿದರೆ……..! ವಿದ್ಯಾಲಯಗಳೆಲ್ಲವೂ ಪ್ರಾರ್ಥನಾಲಯಗಳಂತೆ ಮುದಕರವಾಗುವುದಾದರೆ………………………! ಆಹಾ ಅದೊಂದು ಅದ್ಭುತ, ಆದರ್ಶ ಮತ್ತು ಆನಂದದ ಸ್ವರ್ಗವಾಗದೇ?

ಲೇ: ರಮೇಶ ಎಂ ಬಾಯಾರು ಎಂ.ಎ, ಬಿಇಡಿ.
ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಮತ್ತು
ಆಡಳಿತಾಧಿಕಾರಿಗಳು ಅಡ್ಯನಡ್ಕ ಜನತಾ ಎಜುಕೇಷನಲ್ ಸೊಸೈಟಿ (ರಿ)

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here