Sunday, April 7, 2024

ಕತ್ತರಿ ಮತ್ತು ಸೂಜಿ

ಎಷ್ಟೇ ಅನನುಭವಿ ದರ್ಜಿಯಾದರೂ ಅವನಲ್ಲಿ ಕತ್ತರಿ ಮತ್ತು ಸೂಜಿ ಅನಿವಾರ್ಯ. ಇವೆರಡಿಲ್ಲದವನು ದರ್ಜಿಯಾಗಲಾರ. ಬಹಳ ಗಮನಿಸಬೇಕಾದ ಅಂಶವೆಂದರೆ ಇವೆರಡರ ಗುಣ ಧರ್ಮ ಪರಸ್ಪರ ವಿರುದ್ಧವಾಗಿದೆ. ಕತ್ತರಿಯ ಕೆಲಸ ಬಟ್ಟೆಯನ್ನು ಕತ್ತರಿಸಿ ಹಾಕುವುದಾದಾರೆ ಸೂಜಿಯು ಜೋಡಿಸುವ ಕೆಲಸವನ್ನು ಮಾಡುತ್ತದೆ. ಸೂಜಿ ಗಾತ್ರ ಮತ್ತು ತೂಕದಲ್ಲಿ ಬಹಳ ಚಿಕ್ಕದು. ಕತ್ತರಿಯ ತೂಕ ಮತ್ತು ಗಾತ್ರಕ್ಕಿಂತ ಬಹಳ ಪುಟ್ಟದು. ಗಾತ್ರಕ್ಕೆ ಸರಿಯಾಗಿಯೇ ಸೂಜಿಯ ಕೆಲಸವೂ ನಿಧಾನ. ಕತ್ತರಿಯಾದರೋ ಶರವೇಗದಲ್ಲಿ ಎಲ್ಲವನ್ನೂ ಕತ್ತರಿಸಬಲ್ಲ ಶಕ್ತಿಶಾಲಿ.
ಲೀಲಾಜಾಲವಾಗಿ ಕತ್ತರಿಸಿ ಹಾಕುವ ಕೆಲಸ ಇಂದು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತದೆ. ಕುಟುಂಬ, ಸಂಬಂಧ, ವ್ಯಕ್ತಿತ್ವ ಹೀಗೆ ಎಲ್ಲವನ್ನೂ ಕತ್ತರಿಸಬಲ್ಲ ಸಶಕ್ತರು ಎಲ್ಲೆಡೆಯೂ ತುಂಬಿ ತುಳುಕುತ್ತಿದ್ದಾರೆ. ಎಲ್ಲೂ ಬೆಸೆಯುವ ಕೆಲಸಗಳು ನಡೆಯುವುದಿಲ್ಲ ಎನ್ನಲಾಗದು. ಸೂಜಿಯ ಕೆಲಸದಂತೆ ಇದು ನಿಧಾನಗತಿಯಲ್ಲಿದೆ. ಸಮಾಜದಲ್ಲಿ ಸಜ್ಜನರು ಬೆಸೆಯುವ ಕೆಲವನ್ನು ಸೂಜಿಯಂತೆ ಮಾಡುತ್ತಾರಾದರೂ ಅವರ ಶಕ್ತಿ ಕತ್ತರಿಗೆ ಸಾಟಿಯಾಗದೇ ಇರುವುದೇ ದುರಂತ.
ನಾಲಿಗೆಯು ಕತ್ತರಿಸಿ ಹಾಕುವ ಅರ್ಥಾತ್ ಮುರಿಯುವ ಅಥವಾ ತುಂಡರಿಸುವ ನಿಷ್ಣಾತರಿಗೆ ನೆರವಾಗುವ ದೊಡ್ಡ ಅಸ್ತ್ರ. ನಾಲಿಗೆಯನ್ನು ಹೇಗೆ ಬೇಕಾದರೂ ಹರಿದಾಡಿಸಬಲ್ಲ ಅಥವಾ ಹರಿಯಿಸಬಲ್ಲ ಮಾತಿನ ಮಲ್ಲರಿಗೆ ತುಂಡರಿಸಲು ಇನ್ನೊಂದು ಹರಿತದ ಆಯುಧದ ಅಗತ್ಯವೇ ಇರದು. ಸುಳ್ಳನ್ನು ಸತ್ಯವೆಂಬಂತೆ ಲೀಲಾಜಾಲವಾಗಿ ಬಿಂಬಿಸುವ ಚಾಣಾಕ್ಷತನವು ನಾಲಿಗೆಗೆ ಇದ್ದರೆ ಸಾಕು. ಸುಳ್ಳಿಗೆ ಕೈ ಕಾಲುಗಳು ಅನೇಕ. ಜನರಿಂದ ಜನರ ಬಾಯಿಗೆ ಹೋದಂತೆ ಅದಕ್ಕೆ ಮಸಾಲೆ ಜೋಡಣೆಯಾಗಿ ರಸಾತ್ಮಕವಾಗಿ ಮಿಂಚುತ್ತದೆ. ಸುಳ್ಳಿಗೆ ವೇಗ ಬಹಳ ಜಾಸ್ತಿ. ಒಂದೇ ಕ್ಷಣದಲಿ ಸುಳ್ಳು ಲಕ್ಷಾಂತರ ಮೈಲನ್ನು ಕ್ರಮಿಸಿದರೆ, ಸತ್ಯವು ಇನ್ನೂ ಶೂ ಹಾಕಿಯೇ ಇರುವುದಿಲ್ಲವಂತೆ. ಇನ್ನು ಸತ್ಯವು ಲಕ್ಷಾಂತರ ಮೈಲು ತಲುಪುವಷ್ಟರಲ್ಲಿ ಸುಳ್ಳು ತನ್ನ ಕಬಂಧ ಬಾಹುಗಳನ್ನು ಕೋಟ್ಯಂತರ ಮೈಲು ಚಾಚಿ ವಿರಾಜಮಾನವಾಗಿರುತ್ತದೆ. ಹಾಗಾಗಿ ಕತ್ತರಿಸುವ ಕೆಲಸ ಸುಲಭ. ಜೋಡಿಸುವ ಕೆಲಸ ಬಹಳ ತ್ರಾಸದಾಯಕ.
ಹೆಣ್ಣು ಮಗಳೊಬ್ಬಳಿಗೆ ವಿವಾಹದ ನೆಂಟಸ್ತಿಕೆ ಬೆಳೆದಾಗ ಕತ್ತರಿಸುವ ಕೆಲಸ ಬಹಳಷ್ಟು ನಡೆಯುತ್ತದೆ. ಗಂಡಿನ ಮನೆಯನ್ನು ಅಥವಾ ನೆಂಟರನ್ನು ಯಾ ಹಿತೈಷಿಗಳನ್ನು ಸಂಪರ್ಕಿಸಿ ಹುಡುಗಿಯ ಬಗ್ಗೆ ಅಭಿಪ್ರಾಯ ಕೊಡ ತೊಡಗುತ್ತಾರೆ. ಎಲ್ಲದನ್ನೂ ಒಳ್ಳೆಯದನ್ನೇ ಹೇಳಿ ಕೊನೆಗೆ ಆದರೆ………. ಎಂದು ವಿರಮಿಸುತ್ತಾರೆ. ಕತ್ತರಿಯಿರುವುದೇ ಈ ಆದರೆ ಎಂಬ ಪದದಲ್ಲಿ ಎಂಬುದು ದುರಂತ. ಗಂಡಿನ ಕಡೆಯವರು ಶುದ್ಧ ಬಂಗಾರ ಹೃದಯದವರಾದರೆ ವಿವಾಹ ಜರಗಬಹುದು. ಸ್ವಲ್ಪ ಹಿತ್ತಳೆ ಮಿಶ್ರಿತ ಹೃದಯವಾದರೆ ಸಂಬಂಧ ಮುಂದುವರಿಯದು.
ಜೋಡಿಸುವ ಕೆಲಸ ನಮಗೆ ಸಾಧ್ಯವಿರದೇ ಹೋದರೂ ಚಿಂತೆಯಿಲ್ಲ. ಆದರೆ ಕತ್ತರಿಸುವ ಕೆಲಸ್ಕೆ ನಾವು ಕೈಹಾಕಲೇಬಾರದು. ಅನೇಕ ಸಂದರ್ಭಗಳಲ್ಲಿ ಚಾಡಿ ಮಾತುಗಳು ಸಂಸಾರಗಳನ್ನು ಮತ್ತು ಸಂಸ್ಥೆಗಳನ್ನು ಒಡೆದು ಹಾಕುತ್ತವೆ. ತನಗೆ ಅವನು ಅಥವ ಅವಳು ಸಹಾಯ ಮಾಡಲಿಲ್ಲ, ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ, ನಮ್ಮಲ್ಲಿ ಹೇಳಲಿಲ್ಲ, ನಮಗೆ ಮರ್ಯಾದೆ ಕೊಡಲಿಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ನಮಗೆ ಕೊನೆಗೆ ತಿಳಿಸಿದರು, ಅವರ ಮನೆಗೆ ಯಜಮಾನರೇ ಹೋಗಿ ಆಮಂತ್ರಿಸಿದರು. ನಮ್ಮ ಮನೆಗೆ ಮಾತ್ರ ಹೆಂಡತಿಯನ್ನು ಕಳುಹಿಸಿ ಆಮಂತ್ರಣ ಕೊಟ್ಟರು, ನನಗೆ ಹೇಳಲಿಲ್ಲ, ಕೊಡಲಿಲ್ಲ, ಮಾತನಾಡಿಸಲಿಲ್ಲ ಹೀಗೆ ನಾನಾ ನೇತ್ಯಾತ್ಮಕ ಪಟ್ಟಿಗಳನ್ನು ಮಾಡಿಟ್ಟುಕೊಂಡು ಗುಟುರು ಹಾಕುತ್ತಾ ಕತ್ತರಿ ಪ್ರಯೋಗ ಮಾಡುವ ಅಹಂ ಉಳ್ಳ ಮೇಧಾವಿಗಳು ಸಮಾಜ ಘಾತುಕರು. ವಿಶಾಲ ಮನಸ್ಸಿರುವಲ್ಲಿ ಕೊರತೆಗಳು ಕಾಣಿಸವು. ಸಂಕುಚಿತ ಮನಸ್ಸು ಎಂದೆಂದಿಗೂ ಕತ್ತರಿಸುವ ಯೋಚನೆಯನ್ನೇ ಮಾಡುತ್ತದೆ.
ನಾವು ಕತ್ತರಿಸಿ ಘಾಸಿಗಳನ್ನುಂಟು ಮಾಡುವ ಪಿಶಾಚ ಹೃದಯಿಗಳಾಗದೆ ಎಲ್ಲವನ್ನೂ ಎಲ್ಲರನ್ನೂ ಬೆಸೆಯುವ ಸಜ್ಜನರಾಗೋಣ.

ರಮೇಶ್ ಎಂ.ಬಾಯಾರ್‍

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....