Tuesday, April 9, 2024

ವಿಟ್ಲ ಪ.ಪಂ.ನಲ್ಲಿ ಟ್ರಾಫಿಕ್ ಸಮಸ್ಯೆ ಸಭೆ

ವಿಟ್ಲ: ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಬಸ್‌ಗಳನ್ನು ನಿಲ್ಲಲು ಬಿಡಬಾರದು.. ರಸ್ತೆ ಬದಿಯಲ್ಲಿ ದಿನ ಪೂರ್ತಿ ಪಾರ್ಕಿಂಗ್ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು.. ಜಿಲ್ಲಾಧಿಕಾರಿಗಳು ಹೊರಡಿಸಿದ ನೋಪಾರ್ಕಿಂಗ್ ಝೋನ್ ಅನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನ ಮಾಡಬೇಕು.. ವಿಟ್ಲ ಪೇಟೆಯಲ್ಲಿ ತಕ್ಷಣದಿಂದ ಕಾನೂನು ಜಾರಿಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು..
ಸೋಮವಾರ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ವಿಟ್ಲ ಟ್ರಾಫಿಕ್ ನಿಯಂತ್ರಣ ಹಾಗೂ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳಿಂದ ಕೇಳಿ ಬಂದ ಬೇಡಿಕೆಗಳಾಗಿದ್ದವು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಮಾತನಾಡಿ ವಿಟ್ಲ ಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಜನರು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಲು ಬಿಡದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಿಕಟ ಪೂರ್ವ ಅಧ್ಯಕ್ಷ ಅರುಣ್ ವಿಟ್ಲ ಮಾತನಾಡಿ ಟ್ರಾಫಿಕ್ ನಿಯಂತ್ರಣದ ಸಭೆಗಳು ಹಲವು ನಡೆದು, ಹಲವು ನಿರ್ಣಯಗಳಾಗಿದೆ. ಆದರೆ ನಿರ್ಣಯದ ಬಗ್ಗೆ ಯಾವ ವಿಚಾರವೂ ಕಾರ್ಯರೂಪಕ್ಕೆ ಬಂದಿಲ್ಲ. ಹಳೆ ಬಸ್ ನಿಲ್ದಾಣದಿಂದ ನಾಲ್ಕು ಮಾರ್ಗದವರೆಗೆ ತಲುಪಲು ಬಸ್‌ಗಳಿಗೆ ಹತ್ತು ನಿಮಿಷ ತಗುಲುತ್ತದೆ. ಇದನ್ನು ತಪ್ಪಿಸುವ ಕಾರ್ಯ ಆಗಬೇಕಾಗಿದ್ದು, ಜಿಲ್ಲಾಧಿಕಾರಿಗಳ ಆದೇಶ ಸಮರ್ಪಕವಾಗಿ ಜಾರಿ ಮಾಡಬೇಕು. ಬಸ್ ರಸ್ತೆಯಲ್ಲಿ ನಿಲ್ಲಿಸುವ ಚಾಲಕರ ಡಿಎಲ್ ಸೀಝ್ ಮಾಡುವ ಕಾರ್ಯವನ್ನು ಮಾಡಿದಾಗ ಬಸ್‌ಗಳು ರಸ್ತೆಯಲ್ಲಿ ನಿಲ್ಲುವುದು ತಪ್ಪುತ್ತದೆ ಎಂದರು.
ಪ.ಪಂ. ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ ಟ್ರಾಫಿಕ್ ಸಮಸ್ಯೆಗೆ ವಿದ್ಯುತ್ ಕಂಬ ಎಂಬ ಆರೋಪಗಳು ಹಿಂದೆ ಇತ್ತಾದರೂ, ಅದನ್ನು ಬದಿಗೆ ಹಾಕುವ ಕಾರ್ಯ ಮಾಡಲಾಗಿದೆ. ಆದರೂ ಟ್ರಾಫಿಕ್ ಸಮಸ್ಯೆ ಮುಂದುವರಿಯುತ್ತಲೇ ಇದೆ. ಬಸ್‌ಗಳು ನಾಲ್ಕು ಮಾರ್ಗದಲ್ಲಿ ಹಾಗೂ ಪುತ್ತೂರು ರಸ್ತೆಯಲ್ಲಿ ನಿಂತು ಜನ ಹತ್ತಿಸುವುದನ್ನು ನಿಯಂತ್ರಿಸಬೇಕಾಗಿದೆ. ಜನರಿಗೆ ತಿಳಿಹೇಳುವ ಕಾರ್ಯವನ್ನು ಜನಪ್ರತಿನಿಧಿಗಳಾದ ನಾವು ಮಾಡಲು ಸಿದ್ದ ಎಂದರು.
ಸದಸ್ಯ ರಾಮದಾಸ್ ಶೆಣೈ ಮಾತನಾಡಿ ಖಾಸಗಿ ಹಾಗೂ ಸರಕಾರಿ ಬಸ್‌ಗಳ ನಡುವಿನ ಪೈಪೋಟಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ರಿಕ್ಷಾ ಸೇರಿ ಅಗತ್ಯವಾಹನಗಳಿಗೆ ಪ್ರತ್ಯೇಕ ತಂಗುದಾಣವನ್ನು ಕಲ್ಪಿಸಿದಾಗ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು.
ಸದಸ್ಯ ಲೋಕನಾಥ ಶೆಟ್ಟಿ ಕೊಲ್ಯ ಮಾತನಾಡಿ ರಸ್ತೆ ಅಗಲೀಕರಣ ಮಾಡಿದ ಬಳಿಕ ವಾಹನ ನಿಲುಗಡೆ ಆಗುತ್ತಿದೆ. ಶಿಸ್ತು ಇಲ್ಲದೇ ಇರುವುದೇ ಎಲ್ಲಾ ರೀತಿಯ ಸಮಸ್ಯೆಗೆ ಕಾರಣವಾಗಿದೆ. ದೇವಸ್ಥಾನ ರಸ್ತೆಯನ್ನು ಬ್ಲಾಕ್ ಮಾಡಿ ಬಸ್‌ಗಳಿಗೆ ಜನ ಹತ್ತಿಸುವ ಕಾರ್ಯ ನಡೆಯುತ್ತಿದ್ದು, ಕ್ರಮ ಅಗತ್ಯ ಎಂದರು.
ಸದಸ್ಯ ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ ಮಾತನಾಡಿ ನಾಲ್ಕು ಮಾರ್ಗದಲ್ಲಿ ಖಾಸಗಿ ಬಸ್ ನಿಂತಿದ್ದರೆ ಪರ್ಯಾಯ ರಸ್ತೆ ಬಳಸುವ ಹಾಗೆ ಆಗುತ್ತಿದೆ. ಪೊಲೀಸರು ಎಲ್ಲರಿಗೂ ಒಂದೇ ರೀತಿಯ ಕಾನೂನು ಮಾಡಬೇಕು. ಟ್ರಾಫಿಕ್ ನಿಯಂತ್ರಣವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ವಾಹನ ಸವಾರರಲ್ಲಿ ಭಯ ಬರುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದರು.
ವಿಟ್ಲ ಪೊಲೀಸ್ ಠಾಣೆಯ ಪ್ರೊಬೆಷನರಿ ಎಸ್‌ಐ ರಾಜೇಶ್ ಕೆ. ವಿ. ಮಾತನಾಡಿ ವಿಟ್ಲ ಭಾಗದಲ್ಲಿ ಹನ್ನೊಂದು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಕಾನೂನು ಕ್ರಮಕ್ಕೆ ಮುಂದಾಗುವ ಸಮಯದಲ್ಲಿ ಆರೋಪಿಗಳ ಪರ ನಿಂತು ಪೊಲೀಸರನ್ನು ಅಪರಾಧಿಗಳಾಗಿಸುವ ಕಾರ್ಯವಾಗುತ್ತಿದೆ. ಇತಿಹಾಸದ ಕಾಲದಿಂದಲೂ ವಿಟ್ಲದಲ್ಲಿ ಪೊಲೀಸರಿಗೆ ಟ್ರಾಫಿಕ್ ಸಮಸ್ಯೆ ಸವಾಲಾಗಿದೆ. ಸರಕಾರ ಮಾಡುವ ಕಾನೂನನ್ನು ಜಾರಿಗೆ ತರುವ ಕಾರ್ಯ ಪೊಲೀಸ್‌ರ ಮೇಲಿದ್ದು ಎಲ್ಲರೂ ಸಹಕಾರ ನೀಡಿದರೆ ಸಮಸ್ಯೆ ಪರಿಹಾರ ಸಾಧ್ಯ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ಮುಖ್ಯಾಧಿಕಾರಿ ಮಾಲಿನಿ, ಸಿಬ್ಬಂದಿಗಳಾದ ಚಂದ್ರಶೇಖರ ವರ್ಮ, ರತ್ನ ಬಿ. ಉಪಸ್ಥಿತರಿದ್ದರು.
ವಿಟ್ಲ ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜತೆಗೆ ನಡೆದ ಸಭೆಯಲ್ಲಿ ವಿಟ್ಲ ಪಟ್ಟಣ ಪಂಚಾಯಿತಿಯ ೮ ಮಂದಿ ಜನಪ್ರತಿನಿಧಿಗಳು ಮಾತ್ರ ಹಾಜರಿದ್ದರು. ಒಟ್ಟು 18 ಮಂದಿ ಸದಸ್ಯರಿದ್ದು, ಉಳಿದ 10 ಸಭೆಗೆ ಗೈರಾಗಿದ್ದರು. ಮಂಗಳವಾರದಿಂದಲೇ ಜಿಲ್ಲಾಧಿಕಾರಿಗಳ ಆದೇಶವನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.

 

More from the blog

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...

ದ್ವಿತೀಯ ಪಿಯುಸಿ ಫಲಿತಾಂಶ ಶೀಘ್ರ ಪ್ರಕಟ

ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 3 ನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಫಲಿತಾಂಶ ಪ್ರಕಟಗೊಂಡ ನಂತರ, ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು...

ಇಂದು ಸಂಪೂರ್ಣ ಸೂರ್ಯಗ್ರಹಣ : ಈ ರಾಶಿಯವರಿಗೆ ಕಾದಿದೆ ಆಪತ್ತು

ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸುತ್ತಿದೆ. ಸುಮಾರು 54 ವರ್ಷಗಳ ಬಳಿಕ ಸಂಭವಿಸುತ್ತಿರುವ ಸುದೀರ್ಘ ಸೂರ್ಯಗ್ರಹಣ ಇದಾಗಿದ್ದು, ಮಾಹಿತಿಗಳ ಪ್ರಕಾರ ಏಪ್ರಿಲ್ 8 ರಂದು ಸೂರ್ಯಗ್ರಹಣ ರಾತ್ರಿ 9.12 ರಿಂದ 1.25 ರವರೆಗೆ...