ವಿಟ್ಲ: ವಿದ್ಯಾ ದೇಗುಲಗಳೆನಿಸಿದ ಶಾಲೆಗಳಲ್ಲಿ ಸಾಹಿತ್ಯದ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗುವಂತಾಗಬೇಕು. ಕೇವಲ ಪಾಠ ಪ್ರವಚನಗಳನ್ನು ಮಾತ್ರ ಕೇಳುವ, ಜತೆಗೆ ಮಕ್ಕಳ ಕವನ ರಚಿಸುವವರ ಸಾಂಗತ್ಯದ ಅವಶ್ಯಕತೆ ಇದೆ. ಮಕ್ಕಳ ಸಾಹಿತ್ಯ ಸಂಸ್ಕೃತಿಯ ಒಲವು ಹೆಚ್ಚಿದಷ್ಟು ಸಾಹಿತ್ಯ ಕ್ಷೇತ್ರ ಪ್ರಬಲವಾಗುತ್ತದೆ ಎಂದು ಸಮ್ಮೇಳನಾಧ್ಯಕ್ಷೆ, ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಧನ್ಯಶ್ರೀ ಬಿ. ಹೇಳಿದರು.

ಅವರು ಮಂಗಳವಾರ ವಿಟ್ಲ ಮಾದರಿ ಸರಕಾರಿ ಶಾಲೆಯಲ್ಲಿ ಮಕ್ಕಳ ಲೋಕ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆದ15ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತೆನೆ ತುಂಬಿದ ಭತ್ತದ ಕಣಜಗಳಾಗಬೇಕು. ಹೊರತು ಜಳ್ಳು ತುಂಬಿದ ಭತ್ತಗಳಾಗಬಾರದು. ವಿದ್ಯಾರ್ಥಿಗಳಲ್ಲಿ ಕೂಡಾ ನಾವು ಒಳ್ಳೆಯ ಗುಣ ನಡತೆ ಮಾನವೀಯ ಮೌಲ್ಯಗಳನ್ನು ನಿರೀಕ್ಷಿಸಬೇಕು. ಮೃದುವಾದ ಹೂ ಮನಸ್ಸಿನ ಮುಗ್ಧ ನಮಗೆ ಹಿರಿಯರ, ಅಧ್ಯಾಪಕರ ಮಾತುಗಳೇ ಶ್ರೀರಕ್ಷೆಯಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ವೀಕ್ಷಿತ ಅವರು ಪ್ರತಿಭಾ ಪ್ರದರ್ಶನ ಕ್ಕೆ ಮಕ್ಕಳ ಸಾಹಿತ್ಯ ಸಮ್ಮೇಳನದಂತ ಕಾರ್ಯಕ್ರಮಗಳು ಪ್ರೇರಣೆಯಾಗುತ್ತದೆ. ಸಾಹಿತ್ಯ ಪರಂಪರೆ ಮುಂದಿನ ಪೀಳಿಗೆಗೆ ದೊರಕಬೇಕು, ಆಂಗ್ಲಭಾಷೆಯ ಅವಲಂಬನೆ ಕಡಿಮೆಯಾಗಬೇಕು. ಸಾಹಿತ್ಯ ಸಮ್ಮೇಳನಗಳು ಮಕ್ಕಳ ಬಾಳಿನ ಜ್ಯೋತಿಯಾಗಿದೆ. ಏಕೀಕರಣ ಚಳುವಳಿಯು ಕನ್ನಡಿಗರಲ್ಲಿ ಆತ್ಮವಿಶ್ವಾಸ ಹಾಗೂ ಅನ್ಯೋನ್ಯತೆಯನ್ನು ತಂದು ಕೊಟ್ಟಿದೆ. ವಚನಗಳೂ ಕನ್ನಡಕ್ಕೆ ಶಕ್ತಿ ತಂದು ಕೊಟ್ಟಿದ್ದು, ಮಕ್ಕಳ ಪ್ರತಿಭೆ ಪ್ರದರ್ಶಿಸಲು ಪೂರಕವಾಗಿದೆ ಎಂದರು.

ಸುದಾನ ವಸತಿ ಶಾಲೆಯ ಸಹಶಿಕ್ಷಕಿ ಕವಿತಾ ಅಡೂರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಮಕ್ಕಳ ಸಾಹಿತ್ಯ ಸಮ್ಮೇಳನದಿಂದ ಕನ್ನಡದ ಕುರಿತಾದ ಆತಂಕ ದೂರವಾಗುತ್ತದೆ, ಮಕ್ಕಳ ಭಾಷೆಯ ಬೆಳವಣಿಗೆಗೆ ಮನೆಯ ಹೆತ್ತವರು ಪ್ರೇರಣೆ ನೀಡಬೇಕು. ಮಕ್ಕಳ ಮಾತನ್ನು ಕೇಳುವ ಮೂಲಕ ಮಕ್ಕಳ ಭಾಷೆಯ ಬೆಳವಣಿಗೆಗೆ ಕಾರಣರಾಗಬೇಕು ಎಂದ ಅವರು ಪರಿಸರ ತೆರೆದ ಪುಸ್ತಕ, ಅದನ್ನು ಓದುವ ರೀತಿಯನ್ನು ಶಿಕ್ಷಕರು ಹೇಳಿಕೊಡಬೇಕು ಎಂದರು.
ಕನ್ನಡ ಸಂಘದ ಅಧ್ಯಕ್ಷ ಅನಂತಕೃಷ್ಣ ಹೆಬ್ಬಾರ್ ಕನ್ನಡ ಧ್ವಜಾರೋಹಣಗೈದರು. ಸಾಹಿತಿ ವಿ.ಮಾ ಭಟ್ ಅಡ್ಯನಡ್ಕ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣಗೈದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ ಮೆರವಣಿಗೆಗೆ ಚಾಲನೆ ನೀಡಿದರು. ಮಕ್ಕಳ ಲೋಕದ ಕಾರ್ಯದರ್ಶಿ ಶಿವರಾಮ ಭಟ್ ಪೇಜಾವರ ಶ್ರೀಗಳಿಗೆ ನುಡಿನಮನ ಸಲ್ಲಿಸಿದರು.
ಕಾಸರಗೋಡು ಬೇಕೂರು ಜಿಎಸ್‌ಎಸ್ ಶಾಲೆಯ ಕಾವ್ಯ, ಸ್ಮರಣ ಸಂಚಿಕೆ ಸಂಪಾದಕ ರಮೇಶ್ ಎಂ. ಬಾಯಾರು, ಶಾಲಾ ಗೌರವಾಧ್ಯಕ್ಷ ಸುಬ್ರಾಯ ಪೈ, ಮುಖ್ಯ ಶಿಕ್ಷಕಿ ಪುಷ್ಪಾ ಹೆಚ್. ಉಪಸ್ಥಿತರಿದ್ದರು.
ಪ್ರತೀಕ್ಷಾ ಮತ್ತು ಬಳಗ ನುಡಿಗೀತೆ ಹಾಡಿದರು. ವಿಟ್ಲ ಜೇಸಿಐ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಭಿಲಾಷ್ ಸ್ವಾಗತಿಸಿದರು. ಮಕ್ಕಳ ಲೋಕದ ಅಧ್ಯಕ್ಷ ವಿಠಲ ಶೆಟ್ಟಿ ಪ್ರಸ್ತಾವಿಸಿದರು. ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪ್ರತೀಕ್ಷಾ ವಂದಿಸಿದರು. ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ಚೈತನ್ಯ ಪಕಳಕುಂಜ ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here