ವಿಟ್ಲ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳು ಚುರುಕುಗೊಂಡಿವೆ.ಸರಕಾರ ಬಂದು 3 ತಿಂಗಳೊಳಗೆ 43 ಗ್ರಾಮ, 1 ನಗರ ಸಭೆ, 1 ಪಟ್ಟಣ ಪಂಚಾಯಿತಿ ಹೊಂದಿರುವ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಈಗಾಗಲೇ 125 ಕೋ. ಅನುದಾನ ಮಂಜೂರುಗೊಂಡಿದೆ. ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮಗಳಿಗೆ ಬೇಡಿಕೆಗೆ ತಕ್ಕಂತೆ ಅನುದಾನ ಹಂಚಿಕೆ ಮಾಡಲಾಗಿದ್ದು, ವಿಟ್ಲ ಹೋಬಳಿ ವ್ಯಾಪ್ತಿಯ 12 ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೆ 65 ಕೋಟಿಗಿಂತಲೂ ಅಧಿಕ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಅವರು ವಿಟ್ಲ ನಿರೀಕ್ಷಣ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕ್ಷೇತ್ರಾಭಿವೃದ್ಧಿ ಅನುದಾನದ ವಿವರ ನೀಡಿದರು. ವಿಟ್ಲ ಪಟ್ಟಣ ಪಂಚಾಯಿತಿಗೆ ಎಸ್‌ಎಫ್‌ಸಿ, 14ನೇ ಹಣಕಾಸು ಆಯೋಗ ಹೀಗೆ ಬೇರೆಬೇರೆ ಮೂಲಗಳ ಮೂಲಕ ಒಟ್ಟು 1.67 ಕೋ ಅನುದಾನ ನೀಡಲಾಗಿದೆ. ಗ್ರಾಮೀಣ ಭಾಗದ ಕಾಲೊನಿ, ಒಳ ರಸ್ತೆಗಳು ಬಹುತೇಕ ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಕ್ಷೇತ್ರದ ಒಟ್ಟು 100 ಕಿ.ಮೀ ಗ್ರಾಮ ರಸ್ತೆಗಳನ್ನು ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವಣೆ ಮಾಡಲಾಗಿದೆ. ವಿಟ್ಲ ಪ.ಪಂ. ನೂತನ ಕಟ್ಟಡ, ವಿಟ್ಲ ಐಬಿ ಕಟ್ಟಡವನ್ನು ಮೇಲ್ದರ್ಜೆಗೇರಿಸುವ ಚಿಂತನೆ ನಡೆಸಲಾಗಿದೆ ಎಂದ ಅವರು ಬದನಾಜೆ-ಪರಿಯಾಲ್ತಡ್ಕ ರಸ್ತೆ ಅಭಿವೃದ್ಧಿಗೆ 15 ಕೋ. ಅನುದಾನ ಮಂಜೂರುಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು. ಧಾರ್ಮಿಕ ದತ್ತಿ ಇಲಾಖೆಯಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರದ ದೇಗುಲಗಳ ಅಭಿವೃದ್ಧಿಗೆ 60 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಉಷಾ ಕೃಷ್ಣಪ್ಪ, ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಮೋಹನದಾಸ್ ಉಕ್ಕುಡ, ಕಾರ್ಯದರ್ಶಿ ಉದಯ ಆಲಂಗಾರು, ವಿಟ್ಲ ಪ.ಪಂ. ಮಾಜಿ ಅಧ್ಯಕ್ಷ ಅರುಣ್ ವಿಟ್ಲ, ಪ.ಪಂ. ಸದಸ್ಯರಾದ ರಾಮದಾಸ ಶೆಣೈ, ಲೋಕನಾಥ ಶೆಟ್ಟಿ, ಪಕ್ಷದ ಪ್ರಮುಖರಾದ ಹರಿಪ್ರಸಾದ್ ಯಾದವ್, ಜಗದೀಶ ಪಾಣೆಮಜಲು, ಉಪಸ್ಥಿತರಿದ್ದರು.