ವಿಟ್ಲ: ಹದಗೆಟ್ಟ ರಸ್ತೆಯಿಂದ ಪ್ರತಿನಿತ್ಯ ತೊಂದರೆ ಪಡುತ್ತಿರುವುದನ್ನು ಮನಗಂಡ ವಿದ್ಯಾರ್ಥಿನಿ ತನ್ನ ಸಹಪಾಠಿಗಳ ಪ್ರೇರಣೆ ಮತ್ತು ಸಹಕಾರದಿಂದ ಸಂಬಂಧಪಟ್ಟ ಶಾಸಕರಿಗೆ ಮನವಿ ಸಲ್ಲಿಸಿ ರಸ್ತೆ ದುರಸ್ತಿಗೆ ಅನುದಾನ ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ವಿಟ್ಲ ಬಸವನಗುಡಿಯಲ್ಲಿರುವ ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಒಂಭತ್ತನೆ ತರಗತಿಯಲ್ಲಿ ಓದುತ್ತಿರುವ ಅನ್ವಿತ ಹತ್ತಾರು ವರ್ಷಗಳಿಂದ ದುರಸ್ತಿ ಕಾಣದೇ ಹದಗೆಟ್ಟ ರಸ್ತೆಯ ದುರಸ್ತಿಗಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಮೂಲಕ ಅನುದಾನ ಮಂಜೂರುಗೊಳಿಸಲು ಶಾಲೆಯ ಪರವಾಗಿ ಮನವಿ ಮಾಡಿಕೊಂಡಿದ್ದಳು. ವಿದ್ಯಾರ್ಥಿನಿಯ ಸಾಮಾಜಿಕ ಕಾಳಜಿಗೆ ತುರ್ತಾಗಿ ಸ್ಪಂದಿಸಿದ ಪುತ್ತೂರು ಶಾಸಕರು ಆಕೆಯ ಮನವಿಯನ್ನು ಪುರಸ್ಕರಿಸಿ ತಕ್ಷಣವೇ 10 ಲಕ್ಷ ರೂ. ಅನುದಾನವನ್ನು ಮಂಜೂರುಗೊಳಿಸಿದ್ದಾರೆ ಹಾಗೂ ತಿಂಗಳೊಳಗೆ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ವಿದ್ಯಾರ್ಥಿನಿಯ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾಗಿದೆ. ವಿದ್ಯಾರ್ಥಿನಿಯ ಸಾಮಾಜಿಕ ಪ್ರಜ್ಞೆ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಲಿ ಎಂದು ಶಾಲೆಯ ಆಡಳಿತ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಿನ್ಸಿಪಾಲ್, ವೈಸ್ ಪ್ರಿನ್ಸಿಪಾಲ್ ಹಾಗೂ ಎಲ್ಲಾ ಶಿಕ್ಷಕರು ಆಕೆಯನ್ನು ಅಭಿನಂದಿಸಿದ್ದಾರೆ.