ವಿಟ್ಲ: ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅಂಗ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ವತಿಯಿಂದ 2019-20 ನೇ ಸಾಲಿನ ಕ್ರಿಯಾ ಯೋಜನೆಯ ತಂತ್ರಜ್ಞಾನ ಪರಿಶೀಲನೆ ಅಂಗವಾಗಿ ಉಡುಪಿ ಮಲ್ಲಿಗೆ ಗಿಡ ಸವರುವಿಕೆ ಸಮಯದ ಕುರಿತು ತಂತ್ರಜ್ಞಾನ ಪರಿಶೀಲನೆ ಹಾಗೂ ಉಡುಪಿ ಮಲ್ಲಿಗೆಯ ವೈಜ್ಞಾನಿಕ ಕೃಷಿ ತರಬೇತಿ ಕಾರ್ಯಕ್ರಮವನ್ನು ಪೆರುವಾಯಿಯಲ್ಲಿ ನಡೆಸಲಾಯಿತು.
ತರಬೇತಿಯನ್ನು ಉದ್ಘಾಟಿಸಿದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಲ್ಫ್ ಡಿಸೋಜಾ, ವಿಜ್ಞಾನಿಗಳಿಂದ ರೈತರು ಕೃಷಿ ಸಂಬಂಧಿತ ಮಾಹಿತಿಗಳನ್ನು ಪಡೆದು ವೈಜ್ಞಾನಿಕವಾಗಿ ಮಲ್ಲಿಗೆ ಕೃಷಿ ಬೆಳೆದಾಗ ಕಡಿಮೆ ಭೂಮಿಯಲ್ಲಿ ಉತ್ತಮ ಆದಾಯ ಪಡೆಯಬಹುದು ಎಂದರು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ| ರಶ್ಮಿ ಮಾಹಿತಿ ನೀಡಿ ವಾಣಿಜ್ಯ ಹೂ ಬೆಳೆಗಳಲ್ಲಿ ಮಲ್ಲಿಗೆ ಮುಖ್ಯವಾದುದು. ಕರ್ನಾಕದಲ್ಲಿ ಹತ್ತಾರು ಬಗೆಯ ಮಲ್ಲಿಗೆ ಪ್ರಬೇಧಗಳು ಇದ್ದರೂ, ಕರಾವಳಿ ಪ್ರದೇಶಕ್ಕೆ ಉಡುಪಿ ಮಲ್ಲಿಗೆ ವರಪ್ರದವಾಗಿದೆ ಎಂದರು.
ಸಸ್ಯ ಸಂರಕ್ಷಣೆಯ ಬಗ್ಗೆ ವಿಜ್ಞಾನಿ ಡಾ| ಕೇದಾರನಾಥ್, ಮಲ್ಲಿಗೆ ಬೆಳೆಯಲ್ಲಿ ರೋಗ ಮತ್ತು ಕೀಟಗಳ ಹತೋಟಿ ಕ್ರಮಗಳು, ಸಮಗ್ರ ನಿರ್ವಹಣೆ, ಅತಿಯಾದ ಕೀಟ ಮತ್ತು ರೋಗನಾಶಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಲ್ಲಿಗೆ ಗಿಡಗಳ ಸವರುವಿಕೆಯ ಬಗ್ಗೆ ಮಾಹಿತಿ ನೀಡಿದರು.