ವಿಟ್ಲ: ಪ್ರತಿಯೊಂದು ವಿದ್ಯಾಸಂಸ್ಥೆಗಳು ಮಾನವ ಧರ್ಮವನ್ನು ಬೋಧಿಸುತ್ತವೆ. ಜೀವನದಲ್ಲಿ ಯಶಸ್ಸು ಮತ್ತು ಅಪಕೀರ್ತಿ ಎರಡೂ ನಮ್ಮ ಕೈಯಲ್ಲಿದೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಪರಿಸ್ಥಿತಿಯಲ್ಲಿ 500 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿರುವುದು ಶಾಲೆಯ ಹೆಗ್ಗಳಿಕೆ ಎಂದು ಮಂಗಳೂರು ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ.ಫಾ. ಆಂಟನಿ ಸೆರಾವೊ ತಿಳಿಸಿದರು.
ಅವರು ವಿಟ್ಲ ಸಂತ ರೀಟಾ ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮ ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಹೆಚ್ಚೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲನ್ನು ಓದಿಗೆ ಪೂರಕವಾಗಿ ಮಾತ್ರ ಬಳಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ನಿಟ್ಟೆ ಡೀಮ್ಡ್ ಟು ಬಿ ಯುನಿವರ್ಸಿಟಿ ಪ್ರೋಫೆಸರ್ ಡಾ. ಜೆಸಿಂತಾ ವೇಗಸ್ ಮಾತನಾಡಿ ಒಳ್ಳೆಯ ವಿದ್ಯಾರ್ಥಿಯಾಗಿರುವುದು ಜೀವನ ಪೂರಕವಾಗಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ವಾತಾವರಣ ದೊರೆತಾಗ ತಮ್ಮ ಗುರಿ ಸಾಧಿಸಬಹುದು. ದಯೆ, ಗೌರವ, ಶಿಸ್ತು, ಮಾನವೀಯತೆಯ ಬೇರುಗಳಿಂದ ಸದೃಢ ಸಾಮಾಜಿಕ ವ್ಯಕ್ತಿಯಾಗುತ್ತಾನೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸೈಂಟ್ ರೀಟಾ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಫಾ| ಸುನಿಲ್ ಪ್ರವೀಣ್ ಪಿಂಟೊ, ವಿಟ್ಲ ಚರ್ಚ್‌ನ ಪ್ರಧಾನ ಸೇವಕ ಅನೂಪ್ ಫೆರ್ನಾಂಡಿಸ್ ಮತ್ತು ಸಿಸ್ಟರ್ ಮರೀನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾ ಸಂಸ್ಥೆಯ ಜತೆಕಾರ್ಯದರ್ಶಿ ಹಾಗೂ ಸಂಚಾಲಕ ಫಾ| ಎರಿಕ್ ಕ್ರಾಸ್ತಾ ಸ್ವಾಗತಿಸಿದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಡಿಸೋಜಾ ವರದಿ ವಾಚಿಸಿದರು. ಶಿಕ್ಷಕಿ ಲಕ್ಷ್ಮೀ ವಂದಿಸಿದರು. ಶಿಕ್ಷಕಿಯರಾದ ಲೀನಾ ವೇಗಸ್ ಮತ್ತು ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭೆಯ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ನಾನಾ ಸಾಂಸ್ಕೃತಿಕ ವೈವಿಧ್ಯತೆಗಳು ಪ್ರದರ್ಶನಗೊಂಡವು.