ಉಡುಪಿ: ಇತೀಚೆಗಷ್ಟೇ ನಿಧನರಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಉತ್ತರಾಧಿಕಾರಿಯಾಗಿ ಅವರ ಶಿಷ್ಯ ಹಾಗೂ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥರು ಪೇಜಾವರ ಮಠದ ಸ್ವಾಮೀಜಿ ಯಾಗಿದ್ದಾರೆ. ಮಠದ ಸಂಪೂರ್ಣ ಆಡಳಿತವನ್ನು ಇನ್ನು ಅವರು ನಿರ್ವಹಿಸಲಿದ್ದಾರೆ.

ಶ್ರೀವಿಶ್ವೇಶತೀರ್ಥರು 1988ರಲ್ಲಿ ಶ್ರೀವಿಶ್ವಪ್ರಸನ್ನ ತೀರ್ಥರನ್ನು ತನ್ನ ಶಿಷ್ಯ ಹಾಗೂ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಅಧೋಕ್ಷಜ ತೀರ್ಥರ ಪರಂಪರೆಯಲ್ಲಿ 34ನೇ ಯತಿಯಾಗಿ ಸ್ವೀಕರಿಸಿದ್ದರು. ಕೃಷ್ಣ ಮಠದ ಸ್ಥಾಪಕರಾದ ಶ್ರಿಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಅಧೋಕ್ಷಜ ತೀರ್ಥರೂ ಒಬ್ಬರು. ಅವರಿಗೆ ತಾವು ಸ್ಥಾಪಿಸಿದ ಎಂಟು ಮಠಗಳ ಪೈಕಿ ಪೇಜಾವರ ಮಠದ ನೇತೃತ್ವವನ್ನು ಎಂಟು ನೂರು ವರ್ಷಗಳ ಹಿಂದೆ ನೀಡಿದ್ದರು.

1964ರ ಮಾ.3ರಂದು ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿ ಜನಿಸಿದ 55 ವರ್ಷ ಪ್ರಾಯದ ಶ್ರೀವಿಶ್ವಪ್ರಸನ್ನ ತೀರ್ಥರ ಪೂರ್ವಾಶ್ರಮದ ಹೆಸರು ದೇವದಾಸ ಭಟ್. ಕೃಷ್ಣ ಭಟ್ ಮತ್ತು ಯಮುನಾ ಎಂಬ ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ದೇವದಾಸ್ ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದಿದ್ದರು. ಅವರಿಗೆ 24ನೇ ವರ್ಷ ಪ್ರಾಯದಲ್ಲಿ ಸನ್ಯಾಸ ದೀಕ್ಷೆಯನ್ನು ನೀಡಿ ಶ್ರೀವಿಶ್ವಪ್ರಸನ್ನ ತೀರ್ಥರೆಂದು ನಾಮಕರಣ ಮಾಡಲಾಗಿತ್ತು.

ಶ್ರೀವಿಶ್ವಪ್ರಸನ್ನ ತೀರ್ಥರು ಅದಮಾರು ಗುರುಕುಲದಲ್ಲಿ ವೈದಿಕ ಅಧ್ಯಯನ ಮಾಡಿದ್ದಲ್ಲದೇ, ಉಡುಪಿಯ ಸಂಸ್ಕೃತ ಮಹಾ ವಿದ್ಯಾಲಯದಲ್ಲಿ ವೇದಾಂತ ವಿದ್ವತ್ ಅಧ್ಯಯನ ಕೈಗೊಂಡಿದ್ದರು. ಎಲ್ಲಾ ನಾಲ್ಕು ವೇದಗಳನ್ನೂ ಅವರು ಅರಿತವರಾಗಿದ್ದಾರೆ.

ಇದೀಗ ಪೇಜಾವರ ಮಠಾಧೀಶರಾಗಿರುವ ಶ್ರೀವಿಶ್ವಪ್ರಸನ್ನ ತೀರ್ಥರು ಬಹುಭಾಷಾ ಪಾರಂಗತರು. ಕನ್ನಡ, ತುಳು, ಸಂಸ್ಕೃತ, ಇಂಗ್ಲಿಷ್ ಭಾಷೆಯನ್ನಲ್ಲದೇ ಅವರು ತಮಿಳು, ತೆಲುಗು, ಮಲಯಾಳಂ ಭಾಷೆಯನ್ನು ಕೂಡಾ ಮಾತನಾಡಬಲ್ಲರು. ಪರಿಣಿತ ಯೋಗ ಪಟುವಾಗಿರುವ ಅವರು ಪ್ರತಿದಿನ ಗಂಟೆಗೂ ಅಧಿಕ ಯೋಗಾಸನಗಳನ್ನು ತಪ್ಪದೇ ಮಾಡುತ್ತಾರೆ. ಅಲ್ಲದೇ ಅವರು ಅತ್ಯುತ್ತಮ ಈಜುಪಟು ಸಹ ಆಗಿದ್ದಾರೆ.ಗೋರಕ್ಷಣೆಯಲ್ಲಿ ಅತೀವ ಆಸಕ್ತಿಯನ್ನು ಹೊಂದಿರುವ ಶ್ರೀ ನೀಲಾವರದಲ್ಲಿ ಸ್ಥಾಪಿಸಿರುವ ಗೋಶಾಲೆಯಲ್ಲಿ 2000ಕ್ಕೂ ಅಧಿಕ ಗೋವು ಗಳನ್ನು ಸಾಕುತಿದ್ದಾರೆ. ಅದೇ ರೀತಿ ಕೊಡವೂರಿನಲ್ಲೂ ಅವರು ಇನ್ನೊಂದು ಗೋಶಾಲೆಯನ್ನು ನಡೆಸುತಿದ್ದಾರೆ.

ಇದುವರೆಗೆ ಮಠದ ಸಂಪೂರ್ಣ ಜವಾಬ್ದಾರಿಯನ್ನು ಹಿರಿಯಶ್ರೀಗಳು ನಿಭಾಯಿಸುತಿದ್ದುದರಿಂದ ತನ್ನ ಪೂಜೆ, ಸಮಾಜಮುಖಿ ಕಾರ್ಯಕ್ರಮ, ಗೋಶಾಲೆ, ತಾನು ನಿರ್ವಹಿಸುತಿದ್ದ ಕೆಲವು ಶಾಲೆಗಳ ಜವಾಬ್ದಾರಿಯಲ್ಲೇ ತನ್ನನ್ನು ತೊಡಗಿಸಿಕೊಂಡಿದ್ದ ಶ್ರೀವಿಶ್ವಪ್ರಸನ್ನ ತೀರ್ಥರು ಇನ್ನು ಮುಂದೆ ಪೇಜಾವರ ಮಠದ ಸಮಸ್ತ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ.

ಎರಡು ವರ್ಷಗಳ ಹಿಂದೆ ಪಾಡಿಗಾರು ಶಾಲೆಯನ್ನು ದತ್ತು ಪಡೆದು ಅದನ್ನು ಅತ್ಯುತ್ತಮ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಯಾಗಿ ನಡೆಸುತಿದ್ದಾರೆ. ಅಲ್ಲದೇ ರಥಬೀದಿಯಲ್ಲಿರುವ ಪೇಜಾವರ ಮಠದ ಆವರಣದಲ್ಲೇ ಪ್ರಹ್ಲಾದ ಗುರುಕುಲ ಎಂಬ ಭಾರತೀಯ ಶಿಕ್ಷಣ ಪದ್ಧತಿಯ ಪಾಠಶಾಲೆಯನ್ನು ತೆರೆದು ಅಲ್ಲಿ ವೈದಿಕ ಹಾಗೂ ಸಾಮಾನ್ಯ ಶಿಕ್ಷಣವನ್ನು ನೀಡುತಿದ್ದಾರೆ. ಅಲ್ಲದೇ ನೀಲಾವರದಲ್ಲಿ ವಿಶೇಷ ಮಕ್ಕಳ ಶಾಲೆಯನ್ನೂ ನಡೆಸುತಿದ್ದಾರೆ. ಕೃಷಿಯಲ್ಲೂ ಅವರಿಗೆ ವಿಶೇಷ ಆಸಕ್ತಿ ಇದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here