ಬಂಟ್ವಾಳ: ಮಂಗಳೂರು ನಗರಕ್ಕೆ ನೀರು ಪೂರೈಸಲು ಜಿಲ್ಲಾ ಜೀವನದಿ ನೇತ್ರಾವತಿಗೆ ತುಂಬೆಯಲ್ಲಿ ನೂತನ ಡ್ಯಾಂ ನಿರ್ಮಿಸಿ ಈ ಬಾರಿ 7ಮೀ. ನೀರು ನಿಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಜರುಗಿಸಿ ಅಧಿಕಾರಿಗಳಿಗೆ ಮುಳುಗಡೆ ಪ್ರದೇಶದ ನಿಖರ ವರದಿಯನ್ನು ತಕ್ಷಣ ನೀಡುವಂತೆ ಆದೇಶಿಸಿದ್ದಾರೆ ವಾಸ್ತವದಲ್ಲಿ 2016ರಲ್ಲಿ ಆಗಿನ ಜಿಲ್ಲಾಧಿಕಾರಿ ಇಬ್ರಾಹಿಂ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತ ರೈತರ ಅಧಿಕಾರಿಗಳ ಜನಪ್ರತಿನಿಧಿಗಳ ಸಭೆ ನಡೆಸಿ ವರತೆ ಪ್ರದೇಶ ಸೇರಿಸಿ 7 ಪ್ಲಸ್ ಒಂದು 8 ಮೀಟರ್ ಗೆ ರೈತರ ಸಮಕ್ಷಮ ಸರ್ವೆ ನಡೆಸಿ ವರದಿ ನೀಡುವಂತೆ ಆದೇಶಿಸಿದ ಪ್ರಕಾರ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಜಂಟಿ ಸರ್ವೆ ಕಾರ್ಯ ನಡೆದಿರುತ್ತದೆ. ಈಗ ಪುನಃ ಅದೇ ಕಾರ್ಯಕ್ಕೆ ಸರಕಾರ ಹಣ ಖರ್ಚು ಮಾಡುವುದು ಜನರ ತೆರಿಗೆ ಹಣ ಪೋಲು ಮಾಡಿ ದುಂದುವೆಚ್ಚ ಮಾಡಿದಂತಾಗುತ್ತದೆ. ಹಿಂದಿನ ಸರ್ವೆಯನ್ನು ಆಧರಿಸಿ ರೈತರಿಗೆ ನ್ಯಾಯೋಚಿತವಾದ ಸೂಕ್ತ ಪರಿಹಾರವನ್ನು ನೀಡಿ ಸಮಯ ಹಾಗೂ ಹಣವನ್ನು ಉಳಿತಾಯ ಮಾಡಬಹುದು ಪೊನ್ನುರಾಜ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಬಂಟ್ವಾಳ ತಾಲೂಕಿ ನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರೈತರ ಜನಪ್ರತಿನಿಧಿಗಳ ಅಧಿಕಾರಿಗಳ ಸಭೆ ನಡೆಸಿ ರೈತರ ಜಮೀನಿಗೆ ನೀರು ನುಗ್ಗದಂತೆ ನೇತ್ರಾವತಿ ನದಿಯಲ್ಲಿ ನೀರು ಸಂಗ್ರಹಿಸಲಾಗುವುದು ಯಾವುದೇ ರೈತರಿಗೆ ಅನ್ಯಾಯವಾಗದಂತೆ ನೀರು ಸಂಗ್ರಹಿಸಲಾಗುವುದು ಎಂಬುದಾಗಿ ಭರವಸೆ ನೀಡಿದ್ದರು. ಆದರೆ ಇಂದಿಗೂ ಎಲ್ಲ ರೈತರಿಗೆ ಮುಳುಗಡೆ ಜಮೀನಿಗೆ ಸಂಬಂಧಿಸಿ ನ್ಯಾಯೋಚಿತ ಸೂಕ್ತ ಪರಿಹಾರ ಸಿಕ್ಕಿರುವುದಿಲ್ಲ ಜುಲೈ ತಿಂಗಳಲ್ಲಿ ನಗರ ಪಾಲಿಕೆಯ ಭೂಸ್ವಾಧೀನ ಅಧಿಕಾರಿ ಸಂತ್ರಸ್ತ ರೈತರ ಸಭೆಯನ್ನು ಬಂಟ್ವಾಳ ತಹಶೀಲ್ದಾರ ಕಚೇರಿಯಲ್ಲಿ ನಡೆಸಿ 7 ಮೀಟರ್ ನೀರು ನಿಲ್ಲಿಸುವ ಪ್ರಸ್ತಾವನೆ ಇಲ್ಲ ಪರಿಹಾರದ ಹಣವು ಇಲ್ಲ ಎಂಬುದಾಗಿ ಖಡಾಖಂಡಿತವಾಗಿ ತಿಳಿಸಿದ್ದರು. ತುಂಬೆ ಡ್ಯಾಂ ಸಂತ್ರಸ್ತ ರೈತರ ಜ್ವಲಂತ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಅಧಿಕಾರಿಗಳ ರೈತರ ಜನಪ್ರತಿನಿಧಿಗಳ ಜಂಟಿ ಸಭೆಯನ್ನು ನಡೆಸುವಂತೆ ಸಜಿಪಮುನ್ನೂರು ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಗಿದೆ ಅದು ಈ ತನಕ ಜಾರಿ ಆಗಿರುವುದಿಲ್ಲ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನು ಬಂಟ್ವಾಳ ಶಾಸಕರನ್ನು ಭೇಟಿ ಮಾಡಿದ ಹೋರಾಟ ಸಮಿತಿಯ ಪದಾಧಿಕಾರಿಗಳಿಗೆ ಡಿ.10 ತಾರೀಖಿನ ಒಳಗಡೆ ಜಂಟಿ ಸಭೆಯನ್ನು ನಡೆಸುವುದಾಗಿ ಖಚಿತ ಭರವಸೆ ನೀಡಿದ್ದರು ಅನ್ನದಾತನ ದೀರ್ಘಕಾಲೀನ ಈ ಸಮಸ್ಯೆ ಪರಿಹರಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಬಂಟ್ವಾಳ ತಾಲೂಕು ರೈತ ಸಂಘ ಹಸಿರು ಸೇನೆ ಅಧ್ಯಕ್ಷ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿ ಅಧ್ಯಕ್ಷಎಂ ಸುಬ್ರಮಣ್ಯ ಭಟ್ ಒತ್ತಾಯಿಸಿದ್ದಾರೆ.