Thursday, April 25, 2024

ಎಸ್.ಸಿ ಎಸ್.ಟಿ. ಕುಂದುಕೊರತೆ ಸಭೆ ಪ್ರಸ್ತಾಪಕ್ಕೆ ಸೀಮಿತವೇ: ದಲಿತ ಮುಖಂಡರ ಅಸಮಾಧಾನ

ಬಂಟ್ವಾಳ: ಪರಿಶಿಷ್ಟ ಜಾತಿ, ಪಂಗಡದ ಕುಂದು ಕೊರತೆಯ ವಿವರಣಾ ಸಭೆಯಲ್ಲಿ ಕೇವಲ ಸಮಸ್ಯೆಯ ಪ್ರಸ್ತಾಪ ಮತ್ತು ಚಾ ಕುಡಿಯಲು ಸೀಮಿತ ವೇ, ಇಲ್ಲಿ ಚರ್ಚೆ ಅಗುವ ಯಾವುದೇ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಿಗುತ್ತಿಲ್ಲ ಎಂದು ದಲಿತ ಮುಖಂಡರು ಗುಡುಗಿದರು. ಅವರು ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರ ಅಧ್ಯಕ್ಷತೆಯಲ್ಲಿ ಬಿಸಿರೋಡಿನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆದ ಎಸ್.ಸಿ. ಎಸ್.ಟಿ. ಸಭೆಯಲ್ಲಿ ಗಂಗಾಧರ ರಾಜ ಪಲ್ಲಮಜಲು ಮತ್ತು ವಿಶ್ವನಾಥ ಅವರು ವಿಷಯ ಪ್ರಸ್ತಾಪಿಸಿದರು. ತ್ರೈಮಾಸಿಕ ಸಭೆಯಲ್ಲಿ ಕೇವಲ ನಮ್ಮ ಸಮಸ್ಯೆಗಳನ್ನು ಮಾತ್ರ ಕೇಳಲಾಗುತ್ತದೆ, ಆದರೆ ಮುಂದಿನ ಕುಂದುಕೊರತೆ ಸಭೆಯವರೆಗೂ ಸಮಸ್ಯೆ ಪರಿಹಾರ ಅಗುವುದಿಲ್ಲ, ಪಾಲನೆಯೂ ಅಗುವುದಿಲ್ಲ. ಹೀಗಿರುವಾಗ ಸಭೆ ಯಾಕಾಗಿ ಎಂದು ಪ್ರಶ್ನಿಸಿದರು. ಅರಣ್ಯ ಇಲಾಖೆಯಿಂದ ಪರಿಶಿಷ್ಟ ಜಾತಿ ಪಂಗಡದವರಿಗೆ ಸರಕಾರದಿಂದ ಉಚಿತವಾಗಿ ಮಂಜೂರಾದ ಅಡುಗೆ ಅನಿಲ ಸಂಪರ್ಕಕ್ಕೆ ವಿತರಕರು ಹಣ ಪಡೆದುಕೊಳ್ಳುತ್ತಾರೆ ಎಂದು ವಿಶ್ವನಾಥ ಚೆಂಡ್ತಿಮಾರ್ ಆರೋಪ ವ್ಯಕ್ತಪಡಿಸಿದರು. ‌ಖಾಸಗಿ ಅಡುಗೆ ಅನಿಲ ವಿತರಕರು ಸಂಪರ್ಕ ಮಾಡುವ ವೇಳೆ ನಿಯಮ ಬಾಹಿರವಾಗಿ ಫಲಾನುಭವಿಗಳಿಂದ ಹಣ ಪಡೆದುಕೊಳ್ಳುತ್ತಿದ್ದಾರೆ, ತಾನು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದಾಗ ಹಣ ವಾಪಾಸು ನೀಡಿದ್ದಾರೆ, ಆದರೆ ಉಳಿದ ಎಲ್ಲಾ ಕುಟುಂಬಗಳ ಕೈಯಿಂದ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಅರಣ್ಯ ಇಲಾಖಾಧಿಕಾರಿ ಸುರೇಶ್ ಅವರು ಮಾತನಾಡಿ, ಈವರೆಗೆ ನಮ್ಮ ಗಮನಕ್ಕೆ ಬಂದಿಲ್ಲ, ಇಂತಹ ಪ್ರಕರಣಗಳು ಕಂಡು ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೇಳಿದರು.
ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾದ ಮನೆಗೆ ಹಣ ಪಾವತಿಯಾಗದೆ ಮನೆಯ ಕೆಲಸ ಅರ್ಧ ದಲ್ಲಿ ನಿಂತ ಘಟನೆ ಬಂಟ್ವಾಳ ತಾಲೂಕಿನ ಕನಪಾದೆ ಎಂಬಲ್ಲಿದೆ ಎಂದು ವಿಶ್ವನಾಥ ಚೆಂಡ್ತಿಮಾರ್ ಅವರು ಸಭೆಯ ಗಮನಕ್ಕೆ ತಂದಾಗ ಇದಕ್ಕೆ ಪ್ರತಿಕ್ರಿಯೆ ನೀಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಕರ್ನಾಟಕ ವಸತಿ ನಿಗಮ ಯೋಜನೆಯಡಿ ದ.ಕ. ಜಿಲ್ಲೆಯ ಲ್ಲಿ 14 ಕೋಟಿ ತಾಲೂಕಿನಲ್ಲಿ 2 ಕೋಟಿ ರೂ ಅನುದಾನ ಮಂಜೂರಾಗದೆ ಉಳಿದಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಸರಕಾರ ಮಟ್ಟದಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು. 94 ಸಿ.ಮತ್ತು ಸಿ.ಸಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಪ್ರಸ್ತುತ 1.50 ಸೆಂಟ್ಸ್ ಜಾಗವನ್ನು ನೀಡುತ್ತಿದ್ದು, ಅಂತಹ ಜಾಗದಲ್ಲಿ ಮನೆಕಟ್ಟಿ ವಾಸ ಮಾಡಲು ಸಾಧ್ಯವೇ, ಕನಿಷ್ಟ ಪಕ್ಷ 5 ಸೆಂಟ್ಸ್ ಜಾಗವನ್ನು ಮಂಜೂರು ಮಾಡುವಂತೆ ಗಂಗಾಧರ ಅವರು ತಹಶೀಲ್ದಾರ್ ರಶ್ಮಿ ಅವರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಪಿಟಿಸಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವಂತೆ ಚರ್ಚೆ ನಡೆಯಿತು.
ತಹಶೀಲ್ದಾರ್ ಕುರ್ಚಿಯಲ್ಲಿ ಕುಳಿತ ಬಳಿಕ ಸರಕಾರದ ಸುತ್ತೋಲೆಯ ಪ್ರಕಾರ ಕೆಲಸ ಮಾಡಬೇಕು, ಹೊರತು ಮನಸ್ಸಿಗೆ ಬಂದಂತೆ ಕೆಲಸ ಮಾಡಲು ಸಾಧ್ಯವಿಲ್ಲ, ಏನಿದ್ದರೂ ಸರಕಾರದ ಮಟ್ಟದಲ್ಲಿ ನಡೆಯಬೇಕು ಎಂದು ತಹಶೀಲ್ದಾರ್ ರಶ್ಮಿ. ಎಸ್.ಆರ್. ಹೇಳಿದ ಬಳಿಕ ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯುವಂತೆ ಹೇಳಿದರು.
ಪರಿಶಿಷ್ಟ ಜಾತಿ, ಪಂಗಡದವರಿಗೆ ಸೇರಿದ 25 ಮನೆಯಿರುವ ಪ್ರದೇಶದಲ್ಲಿ ಆಕ್ರಮವಾಗಿ ಕಪ್ಪು ಕಲ್ಲಿನ ಕೋರೆ ನಡೆಯುತ್ತಿದ್ದು, ಅ ಎಲ್ಲಾ ಮನೆಗಳು ಬಿರುಕು ಬಿಟ್ಟಿದೆ, ಆದರೆ ಇಷ್ಟು ವರ್ಷದಿಂದ ಅಕ್ರಮ ಕಲ್ಲಿನ ಕೋರೆಯನ್ನು ನಿಲ್ಲಿಸುವ ಕೆಲಸ ಯಾಕೆ ಆಡಳಿತ ಮಾಡಿಲ್ಲ ಎಂದು ಗಂಗಾಧರ ಅವರು ಸಭೆಯ ಅದ್ಯಕ್ಷ ರನ್ನು ಪ್ರಶ್ನಿಸಿದರು.
ಈ ಕೋರೆ ಅಕ್ರಮವಾಗಿದ್ದರೆ ಅದರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ರಶ್ಮಿ ಅವರು ಭರವಸೆ ನೀಡಿದರು.
ಸಮಾಜ ಕಲ್ಯಾಣ ಅಧಿಕಾರಿ ಒರ್ವರ ಬಗ್ಗೆ ದೂರು ನೀಡಿ ಎರಡು ವರ್ಷ ಸಂದರೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದ ಈ ಸಭೆಯಿಂದ ನಾವು ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ, ಕೇವಲ ಚಾ ಕುಡಿದು ಹೋಗಿದ್ದು ಬಿಟ್ಟರೆ ಯಾವುದೇ ಸಮಸ್ಯೆ ಗಳು ಪರಿಹಾರ ಅಗಿಲ್ಲ ಎಂದು ರಾಜ ಪಲ್ಲಮಜಲು ಅಧ್ಯಕ್ಷರಲ್ಲಿ ಕೇಳಿದರು. ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯವರು ಸಭೆಗೆ ಗೈರು ಹಾಜರಾದ ಬಗ್ಗೆ ಮುಂದಿನ ಸಭೆಗೆ ಸ್ಪಷ್ಟನೆ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಗಳು ಕೇಳಿ ಬಂದವು. ಈ ಸಭೆಯಲ್ಲಿ ತಾ.ಪಂ. ಇ.ಒ.ರಾಜಣ್ಣ, ಸಮಾಜಕಲ್ಯಾಣಧಿಕಾರಿ ಜಯಶ್ರೀ ಉಪಸ್ಥಿತರಿದ್ದರು.

 

 

More from the blog

ಲೋಕಸಭಾ ಚುನಾವಣೆ : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮಸ್ಟರಿಂಗ್ ಕಾರ್ಯ

ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕಾರ್ಯವು ಈ ದಿನ ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಐವರು ಮಾಸ್ಟರ್ ಟ್ರೈನರ್ ಗಳ ನೇತೃತ್ವದಲ್ಲಿ...

ಮತದಾನದಂದು ಫೋಟೋ ಕ್ಲಿಕ್ಕಿಸಿ.. 25 ಸಾವಿರ ರೂ. ಬಹುಮಾನ ಗೆಲ್ಲಿ

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇನ್ನು ಮತದಾನದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಅಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ನಾಳೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದ್ದು, ಸುಮಾರು 2,88,19,342 ಮತದಾರರು...

ಬಂಟ ಬ್ರಿಗೇಡ್ ಹೆಸರಿನಲ್ಲಿ ಕರಪತ್ರ ತಯಾರಿಸಿ ಅಪಪ್ರಚಾರ : ಪಣೋಲಿಬೈಲಿನಲ್ಲಿ ಸಜೀಪಮೂಡ ಬಿಜೆಪಿ ಕಾರ್ಯಕರ್ತರಿಂದ ಪ್ರಾರ್ಥನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದ್ದು ಹಿಂದುತ್ವದ ಭದ್ರಕೋಟೆಯನ್ನು ಚಿದ್ರಮಾಡುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಅಸ್ತಿತ್ವವೇ ಇಲ್ಲದೇ ಇರುವ ಬಂಟ ಬ್ರಿಗೇಡ್ ಎಂಬ ನಾಮದ ಅಡಿಯಲ್ಲಿ ಕರಪತ್ರ ತಯಾರಿಸಿ ಜಾತಿ ಜಾತಿಗಳ...

ಬಾಲಕಿ ಜೊತೆ ಅಸಭ್ಯ ವರ್ತನೆ : ಪ್ರಕರಣ ದಾಖಲು

ಬಂಟ್ವಾಳ: ಪೊಳಲಿಯಲ್ಲಿ ಬಾಲಕಿಯನ್ನು ಅಪ್ಪಿ ಹಿಡಿದು ಅನುಚಿತವಾಗಿ ವರ್ತಿಸಿದ ಘಟನೆಯು ಎ. ೨೪ರಂದು ನಡೆದಿದ್ದು, ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡಕಬೈಲು ನಿವಾಸಿ ಅಮೀನ್ ಯಾನೆ ಮೊಹಮ್ಮದ್ ಅಮೀನ್...