ಪುತ್ತೂರು: ಬೇರೆ ಬೇರೆ ಕಾಲಘಟ್ಟದಲ್ಲಿ ವಿಭಿನ್ನ ಅಭಿಪ್ರಾಯ, ನಿಲುವುಗಳು ದಾಖಲಾಗಿ ರಚನೆಯಾದ ಕೃತಿ ಮನುಸ್ಮೃತಿ. ಹಾಗಾಗಿ ಇದರಲ್ಲಿ‌ ಅನೇಕ ವಿರೋಧಾಭಾಸದ ಅಭಿಪ್ರಾಯಗಳ ಜೊತೆಗೆ ಮಾನವೀಯ ಅಂಶಗಳೂ ಬೆರೆತಿದೆ ಎಂದು ಖ್ಯಾತ ಅಂಕಣಕಾರ, ಚಿಂತಕ ಡಾ.ಬಿ.ಭಾಸ್ಕರ್ ರಾವ್ ಉಡುಪಿ ಹೇಳಿದರು.
ಬಹುವಚನಂ ಪುತ್ತೂರು ಇದರ ಆಯೋಜನೆಯಲ್ಲಿ ದರ್ಬೆ ವಿದ್ಯಾನಗರದ ಪದ್ಮಿನಿ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ” ಮನುಸ್ಮೃತಿ ಆಧುನಿಕ ಚಿಂತನೆಗಳು” ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ತಾನಿಂದು ಮನುಸ್ಮೃತಿ ಯ ಮಂಡನೆಗಾಗಿ ಅಥವಾ ಖಂಡನೆಗಾಗಿ‌ ಬಂದಿಲ್ಲ, 2500 ವರ್ಷಗಳ ಹಿಂದಿನ ಕೃತಿಯೊಂದರ ವಿಚಾರ ದರ್ಶನವನ್ನಷ್ಟೇ ನನ್ನ ಅಧ್ಯಯನದ ಆಧಾರದಲ್ಲಿ ಬಿಚ್ಚಿಡುತ್ತಿದ್ದೇನೆ ಎಂದು ಮಾತು ಆರಂಭಿಸಿದ ಅವರು, ಅದರೊಳಗಿನ ಹಲವು ವಿವಾದಿತ ವಿಚಾರಗಳಿಂದ ಅದು ನಮ್ಮ ನಡುವೆ ಜೈವಿಕ ಗ್ರಂಥವಾಗಿ ಉಳಿದಿಲ್ಲ ಎಂದರು. ಮನುಸ್ಮೃತಿ ಯನ್ನು ಸುಟ್ಟದ್ದೇ ಬಹುಚರ್ಚಿತ ವಿಷಯವಾಗಿತ್ತೇ ಹೊರತು, ಅದರೊಳಗಿನ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿದವರು ವಿರಳ.
ಆದರೆ ಯಾವುದೇ ಗ್ರಂಥಗಳಿಗೂ ಇದಮಿತ್ತಂ ಎನ್ನುವ ಅರ್ಥಗಳಿಲ್ಲ. ಆಯಾ ಕಾಲಕ್ಕೆ ತಕ್ಕಂತೆ ಅದು ಪ್ರಭುತ್ವದ ಮರ್ಜಿಗೆ ಅನುಕೂಲವಾಗಿ ನಾಶವಾಗಬಹುದು ಅಥವಾ ಮರುಸೃಷ್ಟಿ ಪಡೆದುಕೊಳ್ಳಬಹುದು ಎಂದರು. ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಮಾತುಗಳು,
ಪಾದದಲ್ಲಿ ಹುಟ್ಟಿದವರು ಎನ್ನುವ ತಕರಾರುಗಳ ಹಲವು ವಿರೋಧಾಭಾಸಗಳಿದ್ದ ಮನುಸ್ಮೃತಿ ಯಲ್ಲಿ ವರದಕ್ಷಿಣೆಗೆ ವಿರೋಧವಿತ್ತು, ಸ್ತ್ರೀ ಧನವನ್ನು ಬಳಸುವವ ನರಕಕ್ಕೆ ಹೋಗುತ್ತಾನೆ ಎನ್ನುವ ಸ್ತ್ರೀಪರವಾದ ಧೋರಣೆಗಳ ಜೊತೆಗೆ ಕೆಲವು ಸಾರ್ವಕಾಲಿಕ ಸತ್ಯ ಹಾಗೂ ಅತ್ಯದ್ಭುತ ಪ್ರತಿಮೆಗಳೂ ಇತ್ತು. ನಾಗರಿಕ ಸಮಾಜ, ಪ್ರಜಾಪ್ರಭುತ್ವ ಒಪ್ಪಿಕೊಳ್ಳಲಾಗದ ನಿಲುವುಗಳು, ಅತ್ಯಂತ ಆಶ್ಚರ್ಯ ಹುಟ್ಟಿಸುವ ವೈಜ್ಞಾನಿಕ ಚಿಂತನೆಗಳೂ ಇತ್ತು. ಇಂತಹಾ ಸಂದರ್ಭದಲ್ಲಿ ನಮ್ಮ ಅನುಭವಗಳ ಆಧಾರದಲ್ಲಿ ಮಾನವೀಯ ಬದುಕಿನೊಂದಿಗೆ ಬಾಳಿ ಜೀವನವನ್ನು ಸಾಕಾರಗೊಳಿಸುವ ಎಚ್ಚರ ನಮ್ಮಲ್ಲಿರಲಿ ಎಂದವರು ಅಭಿಪ್ರಾಯಿಸಿದರು.
‌‌‍‌‌‍ ಬಹುವಚನಂ ನ ಡಾ.ಶ್ರೀಶ ಕುಮಾರ್ ಪ್ರಸ್ತಾವನೆಗೈದರು. ಕು.ಪ್ರಿಯಂವದಾ ಪ್ರಾರ್ಥಿಸಿದರು. ರಂಗಕರ್ಮಿ ಐಕೆ ಬೊಳುವಾರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here