ಬಂಟ್ವಾಳ: ತನ್ನ ಶಾಸಕತ್ವದ ಅವಧಿಯಲ್ಲಿ ಗ್ರಾಮೀಣ ಪ್ರದೇಶವಾದ ನಯನಾಡಿನಲ್ಲಿ ಸರಕಾರಿ ಪ್ರೌಢಶಾಲೆ ಆರಂಭಿಸಿ ಪ್ರಸ್ತುತ ರಜತ ಮಹೋತ್ಸವ ಆಚರಿಸುತ್ತಿರುವುದು ನಮಗೆ ಮತ್ತು ಊರವರಿಗೆ ಹೆಮ್ಮೆಯ ವಿಷಯವಾಗಿದೆ. ಶಾಲೆ ಉತ್ತಮ ಶಿಕ್ಷಣ ನೀಡಿ ಉನ್ನತಿಗೇರಲು ಊರವರು ಹಾಗೂ ಶಿಕ್ಷಕ ವೃಂದ ಕಾರಣ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನಯನಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ರಜತ ಮಹೋತ್ಸವದ ಸಂಭ್ರಮ ಕಾರ್ಯಕ್ರಮದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಾಲೆಯ ಪ್ರಗತಿ ಗ್ರಾಮದ ಅಭಿವೃದ್ಧಿಯ ಲಕ್ಷಣವಾಗಿದೆ. ಗ್ರಾಮದ ಸಮಗ್ರ ವಿಕಸನಕ್ಕೆ ಶಾಲೆಯೊಂದಿಗೆ ಮೂಲಭೂತ ಸವಲತ್ತುಗಳ ವ್ಯವಸ್ಥೆಯಾಗಬೇಕು. ಸಮುದಾಯದ ಒಗ್ಗೂಡುವಿಕೆಯಿಂದ ಶಾಲೆ ಅಭಿವೃದ್ಧಿ ಸಾಧ್ಯವಾಗುತ್ತದೆ. ನಯನಾಡಿನ ಜನತೆಯ ಕಾಳಜಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತಾಗಿದೆ ಎಂದ ಅವರು, ಸಮೀಪದ ವಾಮದಪದವಿನಂತೆ ಇಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಯಾಗಿದ್ದಲ್ಲಿ ಶಾಲೆಗೆ ಮತ್ತು ಪದವಿ ಪೂರ್ವ ಕಾಲೇಜಿಗೆ ವಿದ್ಯಾರ್ಥಿಗಳ ಕೊರತೆಯಾಗುತ್ತಿರಲಿಲ್ಲ ಎಂದರು.
ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ, ಉದ್ಯಮಿ ಹರೀಂದ್ರ ಟಿ. ಪೈ ಅವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ತಾ.ಪಂ. ಸದಸ್ಯ ರಮೇಶ್ ಕುಡ್ಮೇರ್ ಅವರು ಮಾತನಾಡಿ, ಶಾಲೆಗೆ ಉತ್ತಮ ಕ್ರೀಡಾಂಗಣ ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಶ್ರೀ ಕ್ಷೇ.ಧ.ಗ್ರಾ. ಯೊಜನಾಧಿಕಾರಿ ಜಯಾನಂದ, ಪಿಲಾತಬೆಟ್ಟು ಗ್ರಾ.ಪಂ.ಸದಸ್ಯರಾದ ಲಕ್ಷ್ಮೀ ನಾರಾಯಣ ಹೆಗ್ಡೆ, ಸರೋಜಾ ಶೆಟ್ಟಿ, ಸುಮಿತ್ರಾ, ಶಾಲಾ ಸ್ಥಾಪಕಾಧ್ಯಕ್ಷ ವೆಂಕಪ್ಪ ಸಾಲ್ಯಾನ್, ಗುತ್ತಿಗೆದಾರ ಮೋಹನ್ ಶೆಟ್ಟಿ ನರ್ವಲ್ದಡ್ಡ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಪುಜಾರಿ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕಜಿಪಟ್ಣ , ಶಾಲಾಭಿವೃದ್ದಿ ಸಮಿತಿ, ಬೆಳ್ಳಿಹಬ್ಬ ಸಮಿತಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೆಳ್ಳಿರತ್ನ ಸ್ಮರಣ ಸಂಚಿಕೆಯನ್ನು ಬಿ. ರಮಾನಾಥ ರೈ ಅವರು ಬಿಡುಗಡೆಗೊಳಿಸಿದರು. ಈ ಹಿಂದೆ ಕರ್ತವ್ಯ ನಿರ್ವಹಿಸಿದ ಮುಖ್ಯ ಶಿಕ್ಷಕರು, ಶಿಕ್ಷಕರು, ಸಮಿತಿ ಕಾರ್ಯಧ್ಯಕ್ಷರನ್ನು ಅವರು ಸಮ್ಮಾನಿಸಿದರು.

ಮುಖ್ಯೋಪಾಧ್ಯಾಯ ಅಶೋಕ್ ಕುಮಾರ್ ಎ. ಸ್ವಾಗತಿಸಿ, ವರದಿ ವಾಚಿಸಿದರು.ಶಿಕ್ಷಕ ಹೇಮಣ್ಣ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶಾಲಾ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಕಲಾಶ್ರೀ ಕುಡ್ಲ ತಂಡದವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.

:

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here