ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳೂರಿನಲ್ಲಿ ನಡೆದ ಕೋಮುಗಲಭೆ ಪೂರ್ವನಿಯೋಜಿತ ಎಂದು ಸಾಬೀತಾಗಿದ್ದು, ಇದಕ್ಕೆ ನೇರ ಕಾರಣ ಕಾಂಗ್ರೆಸ್, ಎಸ್‍ಡಿಪಿಐ ಹಾಗೂ ಪಿಎಫ್‍ಐ ಎಂದು ಆರೋಪಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗಲಭೆಗೆ ಕುಮ್ಮಕ್ಕು ನೀಡಿದವರು ಯಾರು? ಪೊಲೀಸರ ಮೇಲೆ ಕಲ್ಲೆಸೆದವರು ಎಲ್ಲಿಯವರು? ಅವರ ಉದ್ದೇಶ ಏನು? ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಎಸ್‍ಡಿಪಿಐ, ಪಿಎಫ್‍ಐ ಹಾಗೂ ಕಾಂಗ್ರೆಸ್ ಇದರ ನೈತಿಕ ಹೊರೆಯನ್ನು ಹೊತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ನಡೆಸುವ ಮುನ್ನ ನಗರ ಪೊಲೀಸ್ ಆಯುಕ್ತರು ಎಲ್ಲ ಸಂಘಟನೆಗಳ ಮುಖಂಡರನ್ನು ಕರೆಸಿ ಶಾಂತಿಸಭೆ ನಡೆಸಿದ್ದರು. ಅವರ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದು ಏಕೆ ಎಂದು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ಕಿಡಿಗೇಡಿಗಳು ಅವರ ಮೇಲೆ ಹಲ್ಲೆ ನಡೆಸಿದಾಗ ಸುಮ್ಮನೆ ಕೂರಲು ಸಾಧ್ಯವೇ? ಗೂಂಡಾಗಳು ಮತ್ತು ಸಮಾಜಘಾತುಕ ಶಕ್ತಿಗಳೇ ಇದರ ಹಿಂದಿದ್ದಾರೆ ಎಂದು ಕಟೀಲು ಹೇಳಿದರು.

ಕಾಶ್ಮೀರದಲ್ಲಿ ಈ ಹಿಂದೆ ಸೈನಿಕರ ಮೇಲೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆಯುತ್ತಿದ್ದರು. ಈಗ ಅದೇ ಮಾದರಿಯಲ್ಲಿ ಮಂಗಳೂರಿನಲ್ಲೂ ಹೊರರಾಜ್ಯದವರು ಗಲಭೆ ನಡೆಸಿದ್ದಾರೆ ಎಂದು ದೂರಿದರು. ಕೋಮುಗಲಭೆಗೆ ಪದೇ ಪದೇ ಕುಮ್ಮಕ್ಕು ನೀಡುವ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧ ಮಾಡಬೇಕು. ದಾಂಧಲೆ ನಡೆಸಿದವರಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದಾರೆ. ಇದಕ್ಕೆ ಅವರು ಈಗ ಉತ್ತರ ನೀಡಬೇಕೆಂದು ಒತ್ತಾಯಿಸಿದರು.

ಮಾಜಿ ಸಚಿವ ಯು.ಟಿ.ಖಾದರ್ ಕಾಯ್ದೆ ಅನುಷ್ಠಾನಗೊಂಡರೆ ರಾಜ್ಯದಲ್ಲಿ ಬೆಂಕಿ ಹತ್ತಿ ಉರಿಯುತ್ತದೆ ಎಂದು ಹೇಳಿದ ಮರುದಿನವೇ ಗಲಭೆ ನಡೆದಿದೆ. ಗಲಭೆ ನಡೆಯುವ ಬಗ್ಗೆ ಅವರಿಗೆ ಮುಂಚಿತವಾಗಿಯೇ ತಿಳಿದಿತ್ತು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಇದು ಪೂರ್ವ ನಿಯೋಜಿತ ಕೃತ್ಯವಲ್ಲದೆ ಎಂದು ಪ್ರಶ್ನಿಸಿದರು. ಹೊರರಾಜ್ಯದಿಂದ ಬಂದು ಈ ಕೃತ್ಯ ನಡೆಸಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.ಸಿಸಿಟಿವಿಗಳನ್ನು ಮೊದಲೇ ಧ್ವಂಸಗೊಳಿಸಿದ್ದರ ಉದ್ದೇಶವನ್ನು ಎಲ್ಲರೂ ಅರಿಯಬೇಕು ಎಂದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here