ಬಂಟ್ವಾಳ: ಬಂಟ್ವಾಳ ತಾಲೂಕಿನ ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ’ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳ ಇದೇ ಡಿ. 7ರಂದು ನಡೆಯಲಿದೆ. ಇಲ್ಲಿನ ಶ್ರೀ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಈ ಕಂಬಳ ಕೂಟದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿ ಅಧ್ಯಕ್ಷ ನೋಣಾಲ್‌ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ತಿಳಿಸಿದ್ದಾರೆ.
ಇಲ್ಲಿನ ಕಾರಣಿಕ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಹೊಕ್ಕಾಡಿಗೋಳಿ ಕಂಬಳಕ್ಕೆ ವಿಶೇಷ ಧಾರ್ಮಿಕ ನಂಟು ಹೊಂದಿದ್ದು, ಡಿ.೭ರಂದು ಬೆಳಿಗ್ಗೆ ೮ ಗಂಟೆಗೆ ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಕಂಬಳ ಉದ್ಘಾಟಿಸಲಿದ್ದು, ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮೂಡುಬಿದ್ರೆ ಚೌಟರ ಅರಮನೆ ಕುಲದೀಪ್ ಎಂ., ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕೇಶ ಶೆಟ್ಟಿ ಮೊಯಿಲೊಟ್ಟು, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ, ಉದ್ಯಮಿ ಜಗತ್ಪಾಲ ಚೌಟ ಮತ್ತಿತರ ಗಣ್ಯರು ಭಾಗವಹಿಸುವರು.
ಈ ಬಾರಿ ಸುಮಾರು 125ಕ್ಕೂ ಮಿಕ್ಕಿ ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ ಸ್ಥಳೀಯ ಕೃಷಿಕರು ಮತ್ತು ಸಮಿತಿ ಪದಾಧಿಕಾರಿಗಳು ಕರೆ ಸಜ್ಜುಗೊಳಿಸಿದ್ದಾರೆ.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆಯಲ್ಲಿ ಅಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭೆ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್, ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹರೀಶ ಪೂಂಜ, ಬಿಜೆಪಿ ರಾಜ್ಯ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಹಾಸನ ಶಾಸಕ ಪ್ರೀತಂ ಗೌಡ, ಪ್ರೊ.ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ, ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಮಾಜಿ ಶಾಸಕರು ಭಾಗವಹಿಸಲಿದ್ದು, ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಹುಲಿಮೇರು, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ ಸುಂದರ ಶಾಂತಿ, ರಾಯಿ ಗ್ರಾ.ಪಂ.ಅಧ್ಯಕ್ಷ ಬಿ.ದಯಾನಂದ ಸಪಲ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲಕೃಷ್ಣ ಚೌಟ ಮತ್ತಿತರ ಗಣ್ಯರು ಬಹುಮಾನ ವಿತರಿಸುವರು.
ಕಂಬಳ ಕೂಟದಲ್ಲಿ ನೇಗಿಲು ಕಿರಿಯ ಮತ್ತು ಹಿರಿಯ, ಹಗ್ಗ ಕಿರಿಯ ಮತ್ತು ಹಿರಿಯ, ಕನೆಹಲಗೆ ಮತ್ತು ಅಡ್ಡಹಲಗೆ ವಿಭಾಗದಲ್ಲಿ ವಿಜೇತ ಕೋಣಗಳ ಮಾಲೀಕರಿಗೆ ತಲಾ ಒಂದು, ಅರ್ಧ ಮತ್ತು ಕಾಲು ಪವನ್ ಚಿನ್ನದ ಪದಕ ಬಹುಮಾನ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here