ವಿಟ್ಲ: ಮಕ್ಕಳನ್ನು ದೇವಿಗೆ ಸಾಂಕೇತಿಕವಾಗಿ ಹರಕೆ ರೂಪದಲ್ಲಿ ನೀಡುವ ವಿಶಿಷ್ಟ ನಂಬಿಕೆ, ಸಂಪ್ರದಾಯದ ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಿನ್ನೆ ರಾತ್ರಿ ಸಂಪನ್ನಗೊಂಡಿತು. ಸಹಸ್ರಾರು ಮಕ್ಕಳು ’ಕಜಂಜು’ ಜಾತ್ರೋತ್ಸವದಲ್ಲಿ ದೇವರ ಮುಂದೆ ಸಂಪ್ರದಾಯ ಪ್ರಕಾರ ಸಮರ್ಪಿಸಲ್ಪಟ್ಟರು.
ಸೋಮವಾರ ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದ ಬಳಿಕ, ಪಲ್ಲಕ್ಕಿ ಬಲಿ ಉತ್ಸವ ನಡೆಯಿತು. ಬಲಿ ಉತ್ಸವದ ನಂತರ ಪ್ರಧಾನ ದೇವಿ ಹಾಗೂ ಪರಿವಾರ ಶಕ್ತಿಗಳಿಗೆ ಪೂಜೆ ನೆರವೇರಿದ ನಂತರ ಕಜಂಬು ಹರಕೆಗೆ ಚಾಲನೆ ನೀಡಲಾಯಿತು.
ಜಳಕದ ಗುಂಡಿಯಲ್ಲಿ ಸ್ನಾನ ಮಾಡಿಸಿದ ಬಳಿಕ ಗರ್ಭಗುಡಿಯ ಮುಖದ್ವಾರದಲ್ಲಿ ಮಕ್ಕಳನ್ನು ದೇವರಿಗೆ ’ಕಜಂಬು ಹರಕೆ’ ಯ ಮೂಲಕ ಸಮರ್ಪಿಸಲಾಯಿತು. ಆ ಬಳಿಕ ದೇವಸ್ಥಾನದ ನಾಲ್ಕು ಮೂಲೆಗಳಲ್ಲಿ ಕುಳಿತಿರುವ ’ನಾಲ್ಪೊಳು’ ಎಂಬ ದೈವಮಾನಿಗಳಿಗೆ ಕೈ ಮುಷ್ಟಿ ನಗದು ಹರಕೆ ಸಲ್ಲಿಸಲಾಯಿತು.
ನಿನ್ನೆ ಜಿಲ್ಲೆಯಾದ್ಯಂತ, ಹಾಗೂ ಹೊರ ಜಿಲ್ಲೆಗಳಿಂದ ಹಾಗೂ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಹಸ್ರಾರು ಮಕ್ಕಳು ’ಕಜಂಬು’ ಹರಕೆಗೆ ಸಮರ್ಪಣೆಗೊಂಡರು. ಸುಮಾರು 6000 ಕ್ಕಿಂತಲೂ ಹೆಚ್ಚಿನ ಭಕ್ತರು ಈ ಹರಕೆ ಜಾತ್ರೋತ್ಸವದಲ್ಲಿ ಭಾಗವಹಿಸಿದ್ದರು. ಕಜಂಬು ಹರಕೆ ಸಂದಾಯವಾದ ಬಳಿಕ ದೈವ ಸ್ವರೂಪಳಾದ ಶ್ರೀ ಉಳ್ಳಾಲ್ತಿಗೆ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.