


ಕಡಬ: ಕೆಎಸ್ಆರ್ಟಿಸಿ ಬಸ್ ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆವೋರ್ವರು ಮೃತಪಟ್ಟು, ಅವರ ಪತಿ ಗಂಭೀರ ಗಾಯಗೊಂಡಿರುವ ಘಟನೆ ಕಡಬದ ಹಳೇ ಸ್ಟೇಷನ್ ಕ್ರಾಸ್ನಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಮೃತರನ್ನು ನೂಜಿಬಾಳ್ತಿಲ ಗ್ರಾಮದ ಪಳೆಯಮಜಲು ನಿವಾಸಿ ಜೂಲಿ ಥಾಮಸ್ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಎಂದು ತಿಳಿದುಬಂದಿದೆ. ಮೃತರು ಕಡಬದಲ್ಲಿ ನಡೆಯುತ್ತಿದ್ದ ಸಂಯುಕ್ತ ಕ್ರಿಸ್ಮಸ್ ಆಚರಣೆಯಲ್ಲಿ ಭಾಗವಹಿಸಲೆಂದು ತನ್ನ ಪತಿ ಹಾಗೂ ಮಗುವಿನೊಂದಿಗೆ ಸ್ಕೂಟರ್ ನಲ್ಲಿ ಬರುತ್ತಿದ್ದ ವೇಳೆ ಕಡಬ ಹಳೇ ಸ್ಟೇಷನ್ ಸಮೀಪ ಮುಖ್ಯ ರಸ್ತೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಅದೃಷ್ಟವಶಾತ್ ಮಗು ಅಪಾಯದಿಂದ ಪಾರಾಗಿದ್ದು, ಮಹಿಳೆಯ ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಗಾಯಗೊಂಡಿರುವ ಅವರ ಪತಿಯನ್ನು ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.


