ಹೈದರಾಬಾದ್ : ದೇಶವನ್ನೆ ತಲ್ಲಣಗೊಳಿಸಿದ್ದ ಪ್ರಿಯಾಂಕ ರೆಡ್ಡಿ (ದಿಶಾ) ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧಿಸಿದಂತೆ ನಾಲ್ವರು ಅರೋಪಿಗಳನ್ನು ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿದೆ.
ಆರಂಭಿಕ ವರದಿಗಳ ಪ್ರಕಾರ, ಬೆಳಗಿನ ಜಾವ 3:30 ರ ವೇಳೆ ಅತ್ಯಾಚಾರ, ಕೊಲೆ ನಡೆದ ಸ್ಥಳ ಪರಿಶೀಲನೆಗೆ ತೆರಳಿದ ವೇಳೆ ನಾಲ್ವರು ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.ಆರೋಪಿಗಳಾದ ಆರೀಫ್, ಶಿವ, ಚೆನ್ನ ಕೇಶವುಲು, ನವೀನ್ ನನ್ನು ಎನ್ ಕೌಂಟರ್ ಮಾಡಲಾಗಿದೆ. ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡದಿಂದ ಎನ್ ಕೌಂಟರ್ ನಡೆಸಲಾಗಿದೆ. ಇವರು ಮೂಲತಃ ಕರ್ನಾಟಕದ ಹುಬ್ಬಳ್ಳಿಯವರು.
26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರನ್ನು ಸುಟ್ಟು ಹಾಕಿದ ಸ್ಥಳದಲ್ಲೇ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಪಶುವೈದ್ಯೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ನಂತರ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇಶದಾದ್ಯಂತ ಪ್ರತಿಭಟನೆಗಳು ನಡೆದಿತ್ತು. ಕೆಲವೇ ಗಂಟೆಗಳಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.