ಚಿಕ್ಕಮಗಳೂರು : ವಿಶ್ವಹಿಂದೂ ಪರಿಷದ್ ಹಾಗೂ ಭಜರಂಗದಳದ ನೇತೃತ್ವದಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ದತ್ತಜಯಂತಿ ಆಚರಣೆಗೆ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
ಡಿಸೆಂಬರ್ 10ರಂದು ಅನಸೂಯ ಜಯಂತಿ, 11ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ 12ರಂದು 20 ಸಾವಿರಕ್ಕೂ ಅಧಿಕ ದತ್ತಭಕ್ತರು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಪಡೆದು ಹೋಮ-ಹವನ ನಡೆಸಲಿದ್ದಾರೆ. ಈ 3 ದಿನಗಳ ಕಾಲ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು ಜಿಲ್ಲಾದ್ಯಂತ 5100ಕ್ಕೂ ಅಧಿಕ ಪೊಲೀಸರು ಸರ್ಪಗಾವಲಿದ್ದಾರೆ.
ಇಂದು ಮೂರು ಸಾವಿರಕ್ಕೂ ಅಧಿಕ ಪೊಲೀಸರು ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದ್ದಾರೆ. ಬಂದೋಬಸ್ತ್ ಗಾಗಿ ಜಿಲ್ಲಾದ್ಯಂತ 35 ಚೆಕ್ ಪೋಸ್ಟ್, 48 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಹಾಗೂ 800ಕ್ಕೂ ಅಧಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮುಂಜಾಗೃತಾ ಕ್ರಮವಾಗಿ ಡಿಸೆಂಬರ್ 10 ರಿಂದ 12ರವರೆಗೆ ಮೂರು ದಿನಗಳ ಕಾಲ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಡಿಸೆಂಬರ್ 12ರಂದು ಚಿಕ್ಕಮಗಳೂರಿನ ಕೆ.ಎಂ.ರಸ್ತೆ, ಐ.ಜಿ. ರಸ್ತೆ, ಬಸವನಹಳ್ಳಿ ಮುಖ್ಯರಸ್ತೆ ಸೇರಿದಂತೆ ಆಲ್ದೂರು ಪಟ್ಟಣ, ಹಾಂದಿಯಿಂದ ವಸ್ತಾರೆವರೆಗೆ ಅಂಗಡಿ-ಮುಂಗಟ್ಟುಗಳನ್ನ ಮುಚ್ಚುವಂತೆ ಆದೇಶಿಸಲಾಗಿದೆ. ಡಿಸೆಂಬರ್ 10 ರಿಂದ 12ರವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಿಗಿರಿ, ದತ್ತಪೀಠ, ಗಾಳಿಕೆರೆ, ಮಾಣಿಕ್ಯಾಧಾರಕ್ಕೆ ಪ್ರವಾಸಿಗರನ್ನು ಸಂಪೂರ್ಣ ನಿಷೇಧಿಸಲಾಗಿದೆ.