ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕದ ವತಿಯಿಂದ ಪ್ರತೀ ವರ್ಷ ವಿತರಿಸುತ್ತಿರುವ ರಾಷ್ಟ್ರೀಯ ವಿದ್ಯಾರ್ಥಿ ವೇತನ ಅಭಿಯಾನದ ಪ್ರಯುಕ್ತ ಉನ್ನತ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಬುಧವಾರ ಕೈಕಂಬ- ಮಿತ್ತಬೈಲ್ ಮುಹಿಯುದ್ದೀನ್ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 180 ವಿದ್ಯಾರ್ಥಿಗಳಿಗೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಯಾಸಿರ್ ಹಸನ್ ಮಾತನಾಡಿ, ಉನ್ನತ ಶಿಕ್ಷಣಕ್ಕಾಗಿ ಪಿಎಫ್‌ಐಯು ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು, ದೇಶಾದ್ಯಂತ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯದಲ್ಲಿ ೩೫ ಲಕ್ಷ ರೂ. ವೆಚ್ಚದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗಿದೆ ಎಂದ ಅವರು, ವಿದ್ಯಾರ್ಥಿ ವೇತನದಿಂದ ಉನ್ನತ ಶಿಕ್ಷಣ ಪಡೆದು ಉದ್ಯೋಗದಲ್ಲಿರುವವರು ಸಮುದಾಯದ ಬಡವಿದ್ಯಾರ್ಥಿಗಳಿಗೆ ಬೆಂಬಲ, ಸಹಾಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಶಿಕ್ಷಣವು ಎಲ್ಲ ಕ್ಷೇತ್ರಗಳ ಅಡಿಪಾಯವಾಗಿದ್ದು, ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಪಡೆಯುವುದು ನಮ್ಮ ಗುರಿಯಾಗದೇ ಆರೋಗ್ಯ ಸಮಾಜ ನಿರ್ಮಾಣವೇ ನಮ್ಮ ಉದ್ದೇಶವಾಗಬೇಕು ಎಂದು ಹೇಳಿದರು.
ಮೊಬೈಲ್‌ನಿಂದಾಗಿ ಯುವಜನತೆ ಪುಸ್ತಕ ಓದುವ, ಬರೆಯುವ ಹವ್ಯಾಸದಿಂದ ದೂರವಾಗುತ್ತಿದೆ. ಯುವಜನತೆ ಮೊಬೈಲ್ ಮೂಲಕ ಯಾಂತ್ರೀಕ ಜೀವನವನ್ನು ಸಾಗಿಸುತ್ತಿದ್ದು, ಮೊಬೈಲ್‌ನಿಂದ ಜ್ಞಾನ ಸಂಪಾದನೆ ಸಾಧ್ಯ ಎನ್ನುವ ಭಾವನೆ ಅವರಲ್ಲಿದ್ದು, ಕಥೆ, ಕಾದಂಬರಿ, ಕವನ, ಪತ್ರಿಕೆಗಳನ್ನು ಹೆಚ್ಚೆಚ್ಚು ಓದುವ ಮೂಲಕ ಜ್ಞಾನ ಸಂಪಾದನೆಯೊಂದಿಗೆ ನಮ್ಮ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದು ಹೇಳಿದರು.
ಬಂಟ್ವಾಳ ತಾಲೂಕು ಅಧ್ಯಕ್ಷ ಅಬ್ದುಲ್ ಸಲೀಂ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಸಿಎಫ್‌ಐ ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್, ಬಂಟ್ವಳ ಜೆಎಂಎಫ್‌ಸಿ ವಕೀಲ ಮುಹಮ್ಮದ್ ಕಬೀರ್, ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ನ್ಯಾಷನಲ್ ವುಮೆನ್ಸ್ ಫ್ರಂಟ್ ನ ಅಧ್ಯಕ್ಷೆ ಝೀನತ್ ಫಿರೋಝ್, ಕೈಕಂಬ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಹಸೀನಾ ಉಪಸ್ಥಿತರಿದ್ದರು.
ಪಿಎಫ್‌ಐ ತಾಲೂಕು ಕಾರ್ಯದರ್ಶಿ ಶಬೀರ್ ತಲಪಾಡಿ ಸ್ವಾಗತಿಸಿದರು. ಸದಸ್ಯ ಮೊಯ್ದೀನ್ ಖಾದರ್ ವಂದಿಸಿದರು. ಬಿ.ಸಿ.ರೋಡ್ ವಲಯ ಸಮಿತಿ ಸದಸ್ಯ ಅಕ್ಬರ್ ಅಲಿ ಪೊನ್ನೋಡಿ ನಿರೂಪಿಸಿದರು.

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here