ಬಂಟ್ವಾಳ: ಅಕ್ರಮವಾಗಿ ಕಟ್ಟಿಗೆ ಸಾಗಿಸುತ್ತದ್ದ ಲಾರಿ ಸಮೇತ ಒರ್ವ ಆರೋಪಿಯನ್ನು ಬಂಟ್ವಾಳ ಅರಣ್ಯ ಇಲಾಖೆಯವರು ಬಂಧಿಸಿದ ಘಟನೆ ಬುಧವಾರ ರಾತ್ರಿ ವೇಳೆ ಬಿಸಿರೋಡಿನಲ್ಲಿ ನಡೆದಿದೆ.
ಅಣ್ಣ ತಮ್ಮಂದಿರಿಬ್ಬರು ಜತೆಯಾಗಿ ಅಕ್ರಮ ಮರ ಸಾಗಾಟ ವ್ಯವಹಾರ ಮಾಡುತ್ತಿದ್ದರು. ಆರೋಪಿ ಚಾಲಕ ಅಕ್ಬರ್ ಭಾಷಾ ಮಾವಿನಕಟ್ಟೆ ಪರಾರಿಯಾಗಿದ್ದು, ಇವನ ಸಹೋದರ ಇನ್ನೊರ್ವ ಅಪರಾಧಿ ಅಸಿಬ್ ಮಾವಿನಕಟ್ಟೆ ಎಂಬವನನ್ನು ಅರಣ್ಯ ಇಲಾಖೆಯವರು ಬಂಧಿಸಿ ಮಂಗಳೂರು ಕಾರಾಗೃಹಕ್ಕೆ ಕಳುಹಿಸಿದ್ದಾರೆ. ವಶಪಡಿಸಿಕೊಂಡ ಒಟ್ಟು ಸ್ವತ್ತಿನ ಅಂದಾಜು ಮೌಲ್ಯ ವಾಹನ ಸಮೇತ 2.10 ಲಕ್ಷ.
ಡಿ.18 ರಂದು ಬಂಟ್ವಾಳ- ಬಿ.ಸಿ.ರೋಡ್ ವೃತ್ತದ ಬಳಿ ಬೆಳ್ತಂಗಡಿ ಕಡೆಯಿಂದ ಮಂಗಳೂರಿಗೆ ಸಾಗಿಸುತ್ತಿರುವ ಅಕ್ರಮ ಕಟ್ಟಿಗೆ ಸಾಗಾಟದ ವಾಹನವನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಯವರ ತಂಡ ತಡೆದು ನಿಲ್ಲಿಸಿದಾಗ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ, ಜೊತೆಯಲ್ಲಿದ್ಧ ಸಹೋದರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಅಕ್ರಮ ಕಟ್ಟಿಗೆ ಸಾಗಾಟದ ಬಗ್ಗೆ ಮಾಹಿತಿ ದೊರಕಿದ್ದು ಈತನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ. ಸುರೇಶ್, ಉಪ ವಲಯ ಅರಣ್ಯಾಧಿಕಾರಿ ಪ್ರೀತಂ ಎಸ್., ಅರಣ್ಯ ರಕ್ಷಕರಾದ ಜಿತೇಶ್ ಪಿ., ವಿನಯ ಕುಮಾರ್, ರೇಖಾ ಹಾಗೂ ಚಾಲಕ ಜಯರಾಂ, ಪಾಲೊಂಡಿರುತ್ತಾರೆ. ಮುಂದಿನ ತನಿಖೆಯನ್ನು ಒ.ಸಿ.ಎಫ್- ಕರಿಕಾಲನ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್. ಶಂಕರೇಗೌಡ ನಡೆಸಲಿದ್ದಾರೆ.