ವಿಟ್ಲ: ನಮ್ಮೆಲ್ಲರ ಜೀವನ ಪ್ರದರ್ಶನಕ್ಕಾಗಿಯಲ್ಲ. ಪ್ರಭುದರ್ಶನಕ್ಕಾಗಿ ಜೀವನ ಎಂಬ ಭಾವ ನಮ್ಮೊಳಗಿರಬೇಕು. ಪ್ರತೀ ದಿನ ಒಂದು ಗಂಟೆ ಯೋಗಾಭ್ಯಾಸ ಮಾಡಬೇಕು. ಶರೀರ ಶಕ್ತವಾಗಿರಬೇಕು. ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿಯರು ಶಾಸ್ತ್ರಾಧ್ಯಯನ ಮಾಡಿ, ಪತಂಜಲಿ ಯೋಗ ಪೀಠದಲ್ಲಿ ಸಮರ್ಪಣೆ ಮಾಡಿದಲ್ಲಿ ಪುರಸ್ಕರಿಸಲಾಗುವುದು ಎಂದು ಪತಂಜಲಿ ಯೋಗ ಪೀಠದ ಯೋಗಗುರು ಶ್ರೀ ಬಾಬಾ ರಾಮ್‌ದೇವ್ ಹೇಳಿದರು.
ಅವರು ವಿಟ್ಲಪಡ್ನೂರು ಗ್ರಾಮದ ಮೂರುಕಜೆ ಮೈತ್ರೇಯೀ ಗುರುಕುಲಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದರು. ಸಂಸ್ಕೃತ ವ್ಯಾಕರಣದ ಮೂಲ ಗ್ರಂಥ ಅಭ್ಯಸಿಸಬೇಕು. ಬೌದ್ಧಿಕ ವಿಕಾಸದ ಜತೆ ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮದ ವಿಕಾಸವಾಗಬೇಕು. ಮನಸ್ಸಿನಲ್ಲಿ ದೃಢ ಸಂಕಲ್ಪವಿರಬೇಕು. ಗುರುಕುಲ ವಿಶ್ವವಿದ್ಯಾನಿಲಯಕ್ಕೆ ಸಹಕಾರವಿದೆ ಎಂದು ಹೇಳಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಽಶ, ಮೈತ್ರೇಯೀ ಗುರುಕುಲದ ಗೌರವಾಧ್ಯಕ್ಷ ಎನ್.ಕುಮಾರ್ ಮತ್ತು ಅಜೇಯ ವಿಶ್ವಸ್ಥ ಮಂಡಳಿ ಸದಸ್ಯ ಪಿ.ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಶೃತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಅನಂತ ಶರ್ಮ ವಂದಿಸಿದರು. ಇದೇ ಸಂದರ್ಭ ವಿದ್ಯಾರ್ಥಿನಿಯರ ಪ್ರತಿಭಾ ದರ್ಶನ ನಡೆಯಿತು.