ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ 36ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ-ಸ್ವಸ್ತಿಕ್ ಪ್ರೊ ಕಬಡ್ಡಿ ಉತ್ಸವ ನ. 16 ಮತ್ತು ನ. 17ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್ ಸ್ಥಾಪಕಾಧ್ಯಕ್ಷ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.
ಅವರು ಗುರುವಾರ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹೆಸರಿನಲ್ಲಿ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ವಿವಿಧ ಏಳು ವಿಭಾಗದಲ್ಲಿ ಪ್ರೊ ಮಾದರಿಯ ಮ್ಯಾಟ್ ಕಬಡ್ಡಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರೌಢ, ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ವಿಭಾಗ, ಮುಕ್ತ ವಿಭಾಗದಲ್ಲಿ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾಟ, ಅಂತಾ ರಾಜ್ಯ ಮಟ್ಟದ 60 ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದೆ. ಅಂತಾ ರಾಜ್ಯ ಮಟ್ಟದ 60 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ, ಹರಿಯಾಣ , ಗುಜರಾತ್, ಕೇರಳ ಮೊದಲಾದ ರಾಜ್ಯಗಳ ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ನ. 16 ರಂದು ಬೆಳಗ್ಗೆ ಪ್ರೌಢ ಮತ್ತು ಪಿಯು ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಕ್ರೀಡಾ ಜ್ಯೋತಿ ಉದ್ಘಾಟಿಸಲಿರುವರು. ಬೆಂಗಳೂರು ನ್ಯಾಯಾಧೀಶ ದಿನೇಶ್ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಲಿರುವರು. ಉದ್ಯಮಿ ಅಶ್ವತ್ ಹೆಗ್ಡೆ ಕ್ರೀಡಾಂಗಣ ಉದ್ಘಾಟಿಸಲಿರುವರು. ಸಂಜೆ ನಡೆಯಲಿರುವ 60 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟವನ್ನು ಸೌದಿ ಅರೆಬಿಯಾ ಉದ್ಯಮಿ ಮಹಮ್ಮದ್ ಷರೀಫ್ ಉದ್ಘಾಟಿಸಲಿರುವರು. ಮುಂಬಯಿ ಉದ್ಯಮಿ ಕಾಪು ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು.
ನ. 17ರಂದು ಬೆಳಗ್ಗೆ ಮುಕ್ತ ವಿಭಾಗದ ಕಬಡ್ಡಿ ಪಂದ್ಯಾಟವನ್ನು ಮುಂಬಯಿ ಉದ್ಯಮಿ ನಿತ್ಯಾನಂದ ಹೆಗ್ಡೆ ಮಾಲಾಡಿ ಅವರು ಉದ್ಘಾಟಿಸಲಿರುವರು. ಬೆಳ್ತಂಗಡಿ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ರಂಜನ್ ಗೌಡ ಅಧ್ಯಕ್ಷತೆ ವಹಿಸಲಿರುವರು. ಸುಧಾಕರ ಶೆಣೈ ಖಂಡಿಗ ಕ್ರೀಡಾಂಗಣ ಉದ್ಘಾಟಿಸಲಿರುವರು. ಸಂಜೆ ಸಮಾರೋಪದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಅಧ್ಯಕ್ಷತೆ ವಹಿಸಲಿರುವರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಶಸ್ತಿ ಪ್ರಧಾನ ಮಾಡಲಿರುವರು. ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಬಹುಮಾನ ವಿತರಿಸಲಿರುವರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ರಾಮಚಂದ್ರ ರಾವ್, ರೋಹಿನಾಥ ಪಾದೆ, ರೋನ್ಸ್ ಬಂಟ್ವಾಳ, ಹಸನಬ್ಬ ಚಾರ್ಮಾಡಿ, ಋತ್ವಿಕ್ ಅಲೆವೂರಾಯ ಅವರಿಗೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿ, ಪ್ರಭಾಕರ ಪೊಸಂದೋಡಿ, ಪ್ರದೀಪ್ ಕುಮಾರ್ ಶೆಟ್ಟಿ ಬೀಯಂತ್‌ಬೆಟ್ಟು, ಚಂದ್ರಹಾಸ ಬಳೆಂಜ, ತನ್ವಿತ್ ಕುಲಾಲ್ ಕೋಟೆಬಾಗಿಲು, ಅನನ್ಯಾ ಕಾವಳಕಟ್ಟೆ, ಅನ್ನಪೂರ್ಣ, ಶ್ರಾವ್ಯಾ ಅವರಿಗೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪುರಸ್ಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ,ಪದಾಧಿಕಾರಿಗಳಾದ ರಾಜೇಶ್ ಪಿ., ಸಂತೋಷ್ ಕುಮಾರ್ ಮೂರ್ಜೆ, ಕಾವಳಮೂಡೂರು ಗ್ರಾ.ಪಂ.ಸದಸ್ಯ ಮೋಹನ ಆಚಾರ್ಯ ಉಪಸ್ಥಿತರಿದ್ದರು.