ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಬೋರುಗುಡ್ಡೆ ಸರಕಾರಿ ಶಾಲೆಯ ಹಿಂಬದಿಯ ಗುಡ್ಡ ಜರಿದು ಶಾಲಾ ಕಟ್ಟಡದ ಮೇಲೆ ಬಿದ್ದಿದ್ದು, ಮಕ್ಕಳು ಜೀವಭಯದಿಂದ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ ಎಂದು ಕೊಳಕೆ ನಿವಾಸಿಗಳು ಆರೋಪಿಸಿದ್ದಾರೆ.
ಈ ಶಾಲೆಯಲ್ಲಿ 40ರಿಂದ 50 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಳೆಯಿಂದಾಗಿ ಶಾಲಾ ಹಿಂಬದಿಯ ಗುಡ್ಡ ಜರಿದು ಶಾಲೆಯ ಕಟ್ಟಡ ಗೋಡೆಗೆ ಬಿದ್ದ ಪರಿಣಾಮ ಗೋಡೆ ಬಿರುಕು ಬಿಟ್ಟಿದೆ. ತಿಂಗಳ ಹಿಂದೆ ಸಜೀಪಮೂಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾಲೂಕು ಮುಖ್ಯ ಕಾರ್ಯನಿರ್ವಾಹನ ಅಧಿಕಾರಿ ಹಾಗೂ ತಹಶೀಲ್ದಾರ್ ಭೇಟಿ ನೀಡಿ ಶಾಲೆಯ ಹಾನಿಗೊಳಗಾದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅದಲ್ಲದೆ, ಈ ಭಾಗದ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಕೊಳಕೆ ನಿವಾಸಿ ಝಕರಿಯ ಮಾಲಿಕ್ ಅವರು ದೂರಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ:
ವಾರದೊಳಗೆ ಮಣ್ಣು ತೆರವು, ಮಕ್ಕಳ ಸುರಕ್ಷಿತ ಕಾರ್ಯ ಮಾಡದೇ ಇದ್ದಲ್ಲಿ ಶಾಲೆಯ ಮಕ್ಕಳು, ಶಿಕ್ಷಕರು ಮತ್ತು ಪೋಷಕರ ಜೊತೆಗೂಡಿ ಶಿಕ್ಷಣ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರಾದ ಎಸ್.ಸಿದ್ದೀಕ್, ಶರೀಫ್ ಎಚ್ಚರಿಸಿದ್ದಾರೆ.