ತತ್ತರಿಸಿ ಒತ್ತರಿಸಿ ಬರುವ
ದುಃಖದುಂಡೆಗಳ ನುಂಗಿ
ನೀರು ಕುಡಿದು ತೇಗಿದ್ದೇ ಬಂತು
ಹೊಟ್ಟೆ ತುಂಬಲಿಲ್ಲ
ಕೆಟ್ಟುದನು ಸುಟ್ಟು
ಮೆಟ್ಟಿ ಮೂಲೆಗಟ್ಟುವುದೇ
ಮನದ ಗುರಿಯಾಯಿತು
ಎಲ್ಲರೆದುರು ಹಲ್ಲುಗಿಂಜಿ
ನಂಜು ನುಂಗಿದ ನಂಜುಂಡನಂತೆ
ಗಿರಿಗಿಟ್ಟೆಯಾದದ್ದೇ ಬಂತು
ಪಸೆಯಾರಲಿಲ್ಲ
ಬೆಟ್ಟದ ಕನಸುಗಳ
ನುಣ್ಣಗೆ ಬೋಳಿಸುವುದೇ
ತನುವ ಸಿರಿಯಾಯಿತು
ಹರಣಗೊಂಡೆದೆಯ ಜರ್ಜರಿತ
ಹರಿಣಗಳ ಗಾಯ ಒರೆಸಿ
ಮುದ್ದು ಸವರಿದ್ದೇ ಬಂತು
ಮುದಗೊಳ್ಳಲಿಲ್ಲ
ಹದ ಬೆದೆಯ ಬೆಂಬತ್ತಿ
ಮೋಂಬತ್ತಿಯಾಗುರಿವುದೇ
ಬದುಕ ನೆಲೆಯಾಯಿತು
ಭೋರ್ಗರೆವ ಅಡ್ಡಾದಿಡ್ಡಿ
ಮರ್ಮರಗಳ ಅಡ್ಡಗಟ್ಟಿ
ಅಣೆಕಟ್ಟುಗಳ ಕಟ್ಟಿದ್ದೇ ಬಂತು
ಗಟ್ಟಿಗೊಳ್ಳಲಿಲ್ಲ
ತೂಬುಗಳ ತೆರೆದು
ತೂರಿಬಿಟ್ಟ ನೀರೇ ಸೋರಿ
ಜೀವ ಸೆಲೆಯಾಯಿತು
ನೀ.ಶ್ರೀಶೈಲ ಹುಲ್ಲೂರು