ವಿಟ್ಲ: ಚಂದಳಿಕೆ ಯುವಕೇಸರಿ ಅಬೀರಿ-ಅತಿಕಾರಬೈಲು ಆಶ್ರಯದಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ೫ ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ಪ್ರೋ ಮಾದರಿಯ ಪುರುಷರ ಮ್ಯಾಟ್ ಕಬಡ್ಡಿ ಹಾಗೂ ಆಹ್ವಾನಿತ ಮಹಿಳಾ ತಂಡಗಳ ಕಬಡ್ಡಿ ಪಂದ್ಯಾಟ ಯುವ ಕೇಸರಿ ಟ್ರೋಫಿ ಮತ್ತು ಸನ್ಮಾನ ಕಾರ್ಯಕ್ರಮ ನ.24 ರಂದು ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಯುವಕೇಸರಿ ಅಬೀರಿ-ಅತಿಕಾರಬೈಲುನ ಅಧ್ಯಕ್ಷ ದಿವಾಕರ ಶೆಟ್ಟಿ ಅಬೀರಿ ತಿಳಿಸಿದರು.
ಅವರು ಗುರುವಾರ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಯುವಕೇಸರಿ ಅಬೀರಿ-ಅತಿಕಾರಬೈಲು ವತಿಯಿಂದ ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಒಂದು ವರ್ಷದಲ್ಲಿ ೧.೨೫ ಲಕ್ಷ ರೂ. ದತ್ತಿ ನಿಧಿ ನೀಡಲಾಗಿದೆ. ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಲಾಗುತ್ತಿದೆ. ನಿರಂತರ ಬಡವರ ಸೇವೆ ಮಾಡಲಾಗುತ್ತಿದೆ. ಎಂದರು.
ಕಬಡ್ಡಿ ಪಂದ್ಯಾಟ ವೇಳೆ ರಾತ್ರಿ ಸಿಡಿಮದ್ದು ಪ್ರದರ್ಶನ, ಸುಸಜ್ಜಿತ ಕ್ರೀಡಾಂಗಣ, ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ೯ ಗಂಟೆಗೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಿಂದ ವಿಟ್ಲ ರಸ್ತೆ ಮೂಲಕ ಟ್ರೋಫಿಯ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಆರು ಆಹ್ವಾನಿತ ಮಹಿಳೆಯರ ತಂಡಗಳ ಕಬಡ್ಡಿ ಪಂದ್ಯಾಟ ಕೂಡಾ ನಡೆಯಲಿದೆ. ಗಣ್ಯರಿಗೆ ಕುಳಿತುಕೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪುರುಷರ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 50,111 ನಗದು ಹಾಗೂ ಟ್ರೋಫಿ, ದ್ವಿತೀಯ 30,111, ತೃತೀಯ 10,111 ಹಾಗೂ ಚತುರ್ಥ ಬಹುಮಾನ ನೀಡಲಾಗುತ್ತದೆ. ಮಹಿಳಾ ವಿಜೇತ ಪ್ರಥಮ ಸ್ಥಾನ ಪಡೆದ ತಂಡಕ್ಕೆ ೫೦೦೧, ದ್ವಿತೀಯ ೩೦೦೧ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ 2001 ಹಾಗೂ ಚತುರ್ಥ ಬಹುಮಾನ ನೀಡಲಾಗುತ್ತದೆ ಎಂದರು.
ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕುಂಡಡ್ಕ ನೂಜಿ ಮನೆತನದ ಕೆ.ಟಿ ವೆಂಕಟೇಶ್ವರ ನೂಜಿ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ಉದ್ಯಮಿ ರಾಧಾಕೃಷ್ಣ ನಾಯಕ್ ಟ್ರೋಫಿ ಅನಾವರಣ ಮಾಡಲಿದ್ದಾರೆ. ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯುವಕೇಸರಿ ಅಬೀರಿ-ಅತಿಕಾರಬೈಲುನ ಕಾರ್ಯಾಧ್ಯಕ್ಷ ಸುಶಾಂತ್ ಸಾಲಿಯಾನ್ ಚಂದಳಿಕೆ, ಪ್ರಧಾನ ಕಾರ್ಯದರ್ಶಿ ಯೋಗೀಶ ಕೇಪುಳಗುಡ್ಡೆ, ಉಪಾಧ್ಯಕ್ಷ ಗಂಗಾಧರ ಪರನೀರು, ಸಂಚಾಲಕ ಪದ್ಮನಾಭ ಶೆಟ್ಟಿ ಚಪುಡಿಯಡ್ಕ, ಗೌರವ ಸಲಹೆಗಾರ ಈಶ್ವರ ಬಂಗೇರ ಅಬೀರಿ, ಸದಸ್ಯರಾದ ಪ್ರಶಾಂತ್ ಪೂಜಾರಿ ನೀರ್ಕಜೆ, ಲೋಕನಾಥ ಕುರುಂಬಳ ಉಪಸ್ಥಿತರಿದ್ದರು.