ಯಾದವ ಕುಲಾಲ್

ಬಿ.ಸಿ.ರೋಡ್ : ಬ್ರಹ್ಮರಕೂಟ್ಲು ಟೋಲ್ ಫ್ಲಾಜಾದಲ್ಲಿ ಡಿಸೆಂಬರ್ ೧ರಿಂದ ಫಾಸ್ಟ್ ಟ್ಯಾಗ್ ಸಿದ್ಧವಾಗಿದೆ. ನಿಖರವಾಗಿ ರೆಕಾರ್ಡ್ ಮಾಡುವ ೮ ಸಿಸಿ ಕ್ಯಾಮರಾ, ವಾಹನಗಳ ತಡೆಹಿಡಿಯಲು ಗೇಟ್, ಸ್ಕಾನ್ ಮಾಡಲು ತೀಕ್ಷ್ಣವಾದ ವಾಹನಗಳ ಸ್ಕಾನರ್, ಜನರಿಗೆ ಗೊತ್ತಾಗಲು ಧ್ವನಿವರ್ದಕದಲ್ಲಿ ವಿವಿಧ ಭಾಷೆಯೊಂದಿಗೆ ಆಗಾಗ ಎಚ್ಚರಿಸಲು ರೆಕಾರ್ಡ್ ಮಾಡಿರುವ ಶಬ್ದ. ವಾಹನ ಸಂಖ್ಯೆ, ದಿನಾಂಕ, ಸಮಯ ಹೀಗೆ ಎಲ್ಲವೂ ದಾಖಲಾಗಿರಲು ಫಾಸ್ಟ್ ಟ್ಯಾಗಿಂಗ್ ಸಜ್ಜಾಗಿದ್ದು ವಾಹನ ಸವಾರರಿಗೆ ಫಾಸ್ಟ್ ಟ್ಯಾಗ್ ಅಳವಡಿಸುವ ಬಗ್ಗೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು ದೇಶಾದ್ಯಂತ ಎಲ್ಲಾ ಟೋಲ್ ಕೇಂದ್ರಗಳಲ್ಲಿ ಅಳವಡಿಸಲಾಗುತ್ತಿದ್ದು ಅದರಂತೆ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿಯೂ ಕೂಡಾ ಸುವ್ಯವಸ್ಥಿತವಾಗಿ ವಾಹನ ಸವಾರರಿಂದ ಸುಂಕ ವಸೂಲಿ ಮಾಡಲು ನಿರ್ಮಾಣಗೊಂಡ ವಿಧಾನವಾಗಿದೆ.
ಆದರೆ ವಾಹನ ಸವಾರರು ನೀಡುವ ಸುಂಕಕ್ಕೆ ಅದೇ ರೀತಿ ರಸ್ತೆಯನ್ನಾಗಲೀ, ವಿದ್ಯುತ್ ದೀಪವನ್ನಾಗಲೀ, ಶೌಚಾಲಯವನ್ನಾಗಲೀ ಮಾಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಫಲವಾಗಿದೆ. ಟೋಲ್‌ಗೇಟ್ ಬಳಿ ಯು ಟರ್ನ್ ಬಳಿ ವಿದ್ಯುತ್ ದೀಪ ಅಗತ್ಯವಾಗಿ ಬೇಕಿತ್ತು. ಆದರೆ ಎಲ್ಲೋ ಮೂಲೆಯಲ್ಲಿ ಒಂದು ದೀಪ ಉರಿಯುತ್ತಿದೆ. ಟೋಲ್ ಬಳಿಯ ಎಲ್ಲಾ ವಿದ್ಯುತ್ ಕಂಬಗಳು ಕೇವಲ ಕಂಬಗಳಾಗಿಯೇ ಉಳಿದಿದೆ. ಅದರಲ್ಲಿ ಬೆಳಕು ನೀಡುವ ಬಲ್ಬ್‌ಗಳೇ ಇಲ್ಲ. ರಸ್ತೆಯು ಕೂಡಾ ಅಲ್ಲಲ್ಲಿ ಕಿತ್ತು ಹೋಗಿದ್ದು ಕೇವಲ ಕಾಟಾಚಾರಕ್ಕೆ ಒಂದು ಬದಿಯಲ್ಲಿ ಡಾಮರ್ ತೇಪೆ ಹಾಕಿದ್ದಾರೆ.

ಹೊಸ ರಸ್ತೆ ಇನ್ನೂ ಬಂದಿಲ್ಲ : ವಾಹನ ದಟ್ಟಣೆಯನ್ನು ತಪ್ಪಿಸಲು ಹಾಗೂ ತುರ್ತು ವಾಹನಗಳು ಸಂಚರಿಸಲು ಹೊಸ ರಸ್ತೆ ಹಾಗೂ ಟೋಲ್ ಬೂತ್ ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಜ್ಜಾಗಿ ವರ್ಷ ಎರಡು ಸಂದರೂ ಇನ್ನೂ ಅದು ಪೂರ್ಣವಾಗುವ ಸಾಧ್ಯತೆ ಇಲ್ಲ. ಪ್ರಾರಂಭದಲ್ಲಿ ಮೆಸ್ಕಾಂನವರ ಕಂಬಗಳು ಅಡ್ಡಿಯಾಗಿದ್ದು ಈಗ ಹೆಚ್ಚಿನ ಕಡೆ ಅದರ ತೆರವು ನಡೆದಿದ್ದೂ ಇನ್ನೂ ರಸ್ತೆಯ ಕಾಮಗಾರಿ ಮುಂದುವರಿಸುವ ಗೋಜಿಗೇ ಹೋಗಿಲ್ಲ. ಈ ರಸ್ತೆಯಲ್ಲಿ ಸಂಚರಿಸುವವರಿಗೆ ,ಸುಂಕ ನೀಡುವವರಿಗೆ ಮಾತ್ರ ಇಲ್ಲಿನ ರಸ್ತೆ ದುರಾವಸ್ಥೆಯ ಸಮಸ್ಯೆಗಳು ಗೋಚರಿಸುತ್ತದೆ.ರಸ್ತೆಯ ಅವ್ಯವಸ್ಥೆಯಿಂದ ಲಕ್ಷಗಟ್ಟಲೆ ಹಣಖರ್ಚು ಮಾಡಿ ಖರೀದಿಸಿದ ವಾಹನಗಳ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ.

ಕಾರ್ಮಿಕರ ಪರದಾಟ : ವಾಹನ ಸವಾರರಿಗೆ ರಸ್ತೆಯಲ್ಲಿ ಹೊರಳಾಡಿಕೊಂಡು ಹೋಗುವ ಪರಿಸ್ಥಿತಿಯಾದರೆ, ಗುತ್ತಿಗೆಯಲ್ಲಿ ಸುಂಕ ವಸೂಲಿ ಮಾಡುವ ಕಾರ್ಮಿಕರಿಗೆ ದಿನನಿತ್ಯ ಬಹಿರ್ದೆಸೆಗೆ ಶೌಚಾಲಯಕ್ಕಾಗಿ ದೂರದ ಬಿ.ಸಿ.ರೋಡಿಗೋ ಅಥವಾ ತುಂಬೆ, ಫರಂಗಿಪೇಟೆಗೋ ಓಡಬೇಕಾಗುತ್ತದೆ. ತಮ್ಮ ನಿತ್ಯ ಜೀವನ ನಡೆಸಲು ಒಂದು ಕೆಲಸದ ಅನಿವಾರ್ಯ ಇದ್ದುದರಿಂದ ಆ ಕಾರ್ಮಿಕರು ಇದ್ದ ಸಮಸ್ಯೆಯನ್ನು ನುಂಗಿಕೊಂಡು, ಮಳೆ, ಬಿಸಿ, ಧೂಳು ಲೆಕ್ಕಿಸದೆ ವಾಹನ ಸವಾರರ ಸುಂಕ ಪಡೆದು ಯಜಮಾನರಿಗೆ ಪಾವತಿಸುತ್ತಾರೆ. ಟೋಲ್ ಬೂತ್‌ಗೂ ಸರಿಯಾದ ಭದ್ರತೆ ಇಲ್ಲ. ಅದಕ್ಕೆ ಪೈಂಟ್ ಬಳಿಯದೆ ಎಷ್ಟು ವರ್ಷಗಳಾಯಿತೋ.. ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡುವುದಿಲ್ಲ.. ವಸೂಲಿ ಮಾಡುವ ಕಂಪ್ಯೂಟರ್ ಕೇಂದ್ರವೇ ದುರವಸ್ಥೆಯಿಂದ ಕೂಡಿದೆ. ನೆಲಕ್ಕೆ ಹಾಕಿರುವ ಮ್ಯಾಟ್ ಸವೆದುಹೋಗಿದೆ. ಟೋಲ್ ಬೂತ್ ದುರಾವಸ್ಥೆಯಲ್ಲಿದ್ದರೂ ವಸೂಲಿ ಮಾತ್ರ ಕ್ರಮಬದ್ಧವಾಗಿ ನಡೆಯುತ್ತಿದೆ.

ಇಷ್ಟೊಂದು ಅವ್ಯವಸ್ಥೆಯ ನಡುವೆಯೂ ಸುಂಕ ವಸೂಲಿಗೆ ಫಾಸ್ಟ್ ಟ್ಯಾಗ್ ಸಿದ್ಧವಾಗುತ್ತಿದೆ. ಆದರೆ ಫಾಸ್ ಟ್ಯಾಗ್ ಮುಗಿದಿದ್ದು ಇನ್ನೂ ಅದರ ಪೂರೈಕೆಯಾಗಿಲ್ಲ. ಹಾಗಾಗಿ ಕೆಲವು ವಾಹನಗಳಿಗೆ ಟ್ಯಾಗ್ ಹಾಕಲು ಸಾಧ್ಯವಾಗಲಿಲ್ಲ. ಡಿಸೆಂಬರ್ ೧ರಿಂದ ಈ ಫಾಸ್‌ಟ್ಯಾಗ್ ಚಾರ್ಜ್ ಆಗುವುದರಿಂದ ನಂತರ ಟ್ಯಾಗ್ ಹಾಕಬೇಕಾದರೆ ಹಣ ಖರ್ಚಾಗುತ್ತದೆ. ಟೋಲ್ ಪ್ಲಾಝಾದಲ್ಲಿ ಅದನ್ನು ಉಚಿತವಾಗಿ ನೀಡುತ್ತಿದ್ದು ಟ್ಯಾಗ್ ಮುಗಿದಿರುವ ಕಾರಣ ೨ ದಿನಗಳ ನಂತರ ಅದನ್ನು ನೀಡುವುದೆಂದು ಹೇಳುತ್ತಾ ಇದ್ದಾರೆ. ಫಾಸ್ಟ್‌ಟ್ಯಾಗ್ ಯೋಜನೆ ಮಾಡುತ್ತಿದ್ದರೂ ರಸ್ತೆ ಮಾತ್ರ ಸರಿಯಾಗದೆ ಯಾವುದೂ ತ್ವರಿತವಾಗಿ ಆಗುವುದಿಲ್ಲ ಎಂಬುದೇ ಜನರ ಚಿಂತೆ.

**********

ಎಲ್ಲ ಕಡೆ ಟೋಲ್ ಗೇಟ್ ವ್ಯವಸ್ಥೆ ಇರುವಂತೆ ಬ್ರಹ್ಮರಕೂಟ್ಲುವಿನಲ್ಲಿ ಇಲ್ಲ. ಯಾವುದೇ ವ್ಯವಸ್ಥೆ ಇಲ್ಲದೆ ಫಾಸ್ಟ್‌ಟ್ಯಾಗ್ ಅಳವಡಿಕೆ ಮಾಡಿ ಆ ಮೂಲಕ ಟೋಲ್ ವಸೂಲಿ ಮಾಡಲು ಯೋಜನೆ ಹಾಕಿರುವುದು ನಿಜಕ್ಕೂ ವಿಪರ್ಯಾಸ. ಕೇವಲ ಸುಂಕ ವಸೂಲಿಯನ್ನು ಮಾತ್ರ ಗುರಿಯಾಗಿಟ್ಟುಕೊಂಡಿರುವುದು ನಿಜಕ್ಕೂ ನಿರಾಶಾದಾಯಕ ಬೆಳವಣಿಗೆಯಾಗಿದೆ. ಸುಂಕ ನೀಡುವುದಕ್ಕೆ ನಮಗೆ ಬೇಸರವಿಲ್ಲ. ಆದರೆ ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಬೇಕಾದದ್ದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಾಗಿದೆ.
– ಡಾ| ಬಾಲಕೃಷ್ಣ ಕುಮಾರ್, ಬಿ.ಸಿ.ರೋಡ್

************

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here