ಬಂಟ್ವಾಳ: ಸರಕಾರದ ಮಾನದಂಡಗಳನ್ನು ಮೀರಿ ಬಿ.ಪಿ.ಎಲ್.ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಎಪಿಎಲ್ ಪರಿವರ್ತಿಸುವ ಸಂದರ್ಭ ಇನ್ನು ಮುಂದೆ ದಂಡ ಪಾವತಿಸಬೇಕಾಗಿಲ್ಲ ಎಂದು ಮಂಗಳೂರು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಆದೇಶ ಬಂದಿರುವುದಾಗಿ ಬಂಟ್ವಾಳ ಆಹಾರ ಶಾಖೆಯ ಶಿರಸ್ತೇದಾರ ಶ್ರೀನಿವಾಸ್ ಅವರು ಮಾಹಿತಿ ನೀಡಿದ್ದಾರೆ.
ಸರಕಾರದ ಆದೇಶದಂತೆ ಅನರ್ಹ ಬಿ.ಪಿ.ಎಲ್ ಕಾರ್ಡು ಗಳ ಪತ್ತೆ ಹಚ್ಚಿ ದಂಡ ವಸೂಲಿ ಮಾಡುವ ಕಾರ್ಯಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದ್ದು ಜನರ ಆತಂಕ ದೂರವಾಗಿದೆ.
ಬಿ.ಪಿ.ಎಲ್ ನಿಂದ ಎ.ಪಿ.ಎಲ್ ಗೆ ಪರಿವರ್ತಿಸುವ ಸಂದರ್ಭದಲ್ಲಿ ಸರಕಾರದ ನಿಗದಿಪಡಿಸಿದ ರೀತಿಯಲ್ಲಿ ದಂಡ ಕಟ್ಟಬೇಕಾಗಿತ್ತು ಆದರೆ ಅನರ್ಹ ಬಿ.ಪಿ.ಎಲ್ ಕಾರ್ಡ್ ಗಳನ್ನು ರದ್ದು ಮಾಡಿ ದಂಡ ವಸೂಲಿ ಮಾಡುವುದು ಬೇಡ ಎಂಬ ಮೌಖಿಕ ಆದೇಶವೊಂದು ಬಂದಿದೆ.
ಸರಕಾರ ಅನರ್ಹ ಕಾರ್ಡ್ ಗಳನ್ನು ಸ್ವಯಂ ರದ್ದುಗೊಳಿಸಲು ಸೆ.30 ರವರೆಗೆ ಸಮಯ ನೀಡಿತ್ತು. ಆ ಸಂದರ್ಭದಲ್ಲಿ ಕೆಲವರು ದಂಡ ರಹಿತವಾಗಿ ಕಾರ್ಡ್ ಗಳನ್ನು ಪರಿವರ್ತನೆ ಮಾಡಿದ್ದರು.
ಸರಕಾರದ ಗಡುವು ಮುಗಿದ ಬಳಿಕ ನ. 4 ರವರಗೆ ಸುಮಾರು 672 ಕುಟುಂಬ ಗಳ ಕಾರ್ಡ್ ರದ್ದುಗೊಳಿಸಿ ಸುಮಾರು 5,24,224 ರೂ ದಂಡ ವಸೂಲಿ ಮಾಡಿತ್ತು.
ಇದೀಗ ದಂಡರಹಿತವಾಗಿ ಕಾರ್ಡ್ ಗಳನ್ನು ಪರಿವರ್ತನೆ ಮಾಡಲು ಅವಕಾಶ ನೀಡಿರುವುದರಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಶಾಸಕರ ಮನವಿಗೆ ಸ್ಪಂದಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಶಶಿಕಲಾ ಜೊಲ್ಲೆ: ಸರಕಾರದ ಆದೇಶದಂತೆ ಬಿ.ಪಿ.ಎಲ್ ಕಾರ್ಡ್ ದಾರು ಎ.ಪಿ.ಎಲ್ ಗೆ ಬದಲಾಯಿಸುವ ಸಮಯದಲ್ಲಿ ದಂಡ ವಿಧಿಸುವ ಕ್ರಮ ಸರಿಯಲ್ಲ, ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ದಂಡ ವಸೂಲಿ ಕ್ರಮವನ್ನು ಕೈಬಿಡುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಆಹಾರ ಮತ್ತು ನಾಗರಿಕ ಸತಬರಾಜು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನಿವಿ ಮಾಡಿದ್ದರು.
ಅವರ ಮನವಿಗೆ ಸ್ಪಂದಿಸಿದ ಶಶಿಕಲಾ ಜೊಲ್ಲೆ ಅವರು ಬಿ.ಪಿ.ಎಲ್ ಕಾರ್ಡ್ ಗಳನ್ನು ಎ.ಪಿ.ಎಲ್. ಗೆ ಪರಿವರ್ತಿಸುವ ವೇಳೆ ದಂಡ ವಸೂಲಿ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಅದೇಶ ಮಾಡಿದ್ದಾರೆ.
ಅದಕ್ಕೂ ಮೊದಲು ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಅವರಿಗೂ ಮನವಿ ಮಾಡಿದ್ದರು.
ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರಕಾರಿ ಕಾರ್ಯದರ್ಶಿ ಮಂಜುಳಾ, ದ.ಕ.ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಅವರ ಗಮನಕ್ಕೆ ಈ ವಿಚಾರವನ್ನು ತಂದಿದ್ದು ಕೈಬಿಡುವಂತೆ ಆಗ್ರಹಿಸಿದ್ದರು.
ಮನವಿಗೆ ಸ್ಪಂದಿಸಿದ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ದ.ಕ.ಜಿಲ್ಲಾಧಿಕಾರಿವರಿಗೆ ದಂಡ ವಸೂಲಿ ಕೈಬಿಡುವಂತೆ ನಿರ್ದೇಶನ ನೀಡಿದ್ದಾರೆ. ಇದರ ಮೌಖಿಕ ಆದೇಶ ಎಲ್ಲಾ ತಾಲೂಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.