Thursday, April 11, 2024

ನವೆಂಬರ್ ೨೦ರಂದು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಶತಮಾನೋತ್ತರ ಬೆಳ್ಳಿಹಬ್ಬದ ಆಚರಣೆಯ ಸಮಾರೋಪ ಸಮಾರಂಭ

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿದೆ ಬಂಟ್ವಾಳ ತಾಲೂಕುಮಾಣಿ ಗ್ರಾಮದ ಸೂರಿಕುಮೇರು.ಹೆದ್ದಾರಿಯಿಂದ ೬೦೦ ಮೀಟರ್ ದೂರದ ಪ್ರಾಕೃತಿಕವಾಗಿ ಹಸಿರು ಪ್ರದೇಶದಿಂದ ಕೂಡಿದಸುಂದರ ಪರಿಸರದಲ್ಲಿದೆ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು.

ಸುಮಾರು ೧೨೫ ವರುಷಗಳ ಹಿಂದೆ ಸ್ಥಾಪನೆಗೊಂಡಅತೀ ಪುರಾತನ ದೇವಾಲಯ ಇಂದು ಹಲವಾರುಅಭಿವೃದ್ದಿ ಕಾರ್‍ಯಗಳನ್ನು ಕಂಡಿದ್ದು ಶತಮಾನೊತ್ತರಬೆಳ್ಳಿಮಹೋತ್ಸವದ ಆಚರಣೆ ಯಲ್ಲಿದೆ.
ಕಳೆದ ೧೨೫ ವರುಷಗಳಿಂದ ಈ ದೇವಾಲಯದ ಅಭಿವೃದ್ದಿಗಾಗಿ ಹಲವಾರು ಧರ್ಮಗುರುಗಳು ತಮ್ಮ ಉದಾರ ಸೇವಾ ಮನೋಭಾವದಿಂದ ತೊಡಗಿಸಿಕೊಂಡು ಚರ್ಚ್‌ನ ಪ್ರಗತಿಯನ್ನೂ, ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ
.

ಇದು ಇಲ್ಲಿನ ಇತಿಹಾಸ

೧೮೯೩ ರಲ್ಲಿ ಮೊಗರ್ನಾಡ್ ದೇವಾಲಯದಿಂದ
ಬೇರ್ಪಟ್ಟು ಅದೇ ವರ್ಷ ಸೆಪ್ಟೆಂಬರ್ ೪ ರಂದು ಮಂಗಳೂರು ಧರ್ಮ
ಪ್ರಾಂತ್ಯದ ಆಗಿನ ಧರ್ಮಧ್ಯಕ್ಷರಾದ ಅತೀ ವಂದನೀಯ ಡಾ.ನಿಕೊಲಸ್ ಮರಿಯಾ ಪಗಾನಿಯವರ ಆದೇಶದಂತೆ ಈ ಚರ್ಚ್‌ನ ಸ್ಥಾಪನಾ ಧರ್ಮಗುರುಗಳಾಗಿ ವಂ.ಫಾದರ್ ಕಾಂಬಿಲಸ್ ರೇಗೋ ಸೇವೆಯನ್ನು ಆರಂಭಿಸಿದರು. ಮುಂದೆ ೧೮೯೬ರಲ್ಲಿ ಬರಿಮಾರು ಗ್ರಾಮದಲ್ಲಿ ದೇವಾಲಯ ಆರಂಭಿಸಲಾಯಿತು. ಈ ಹಂತದಲ್ಲಿ ಪುತ್ತೂರಿನ ಧರ್ಮಗುರುಗಳಾಗಿದ್ದ ವಂ.ಫಾದರ್ ಸೆಬಾಸ್ಟಿಯನ್ ನೊರೊನ್ಹಾ ರವರನ್ನು ಈ ಚರ್ಚ್‌ನ ಖಾಯಂ ಧರ್ಮಗುರುಗಳನ್ನಾಗಿ ನಿಯೋಜಿಸುವಂತೆ ಭಕ್ತಾದಿಗಳು ಮನವಿ ಮಾಡಿದ ಮೇರೆಗೆ ಅವರನ್ನು ಈ ಚರ್ಚ್ ನ ಧರ್ಮಗುರುಗಳಾಗಿ ನೇಮಕ ಮಾಡಲಾಯಿತು.
೧೯೦೩ ರಲ್ಲಿ ಬರಿಮಾರು ದೇವಾಲಯದ ವಠಾರದಲ್ಲಿ ಶಾಲೆಯನ್ನು ಆರಂಭಿಸಲಾಗಿದ್ದು, ಬಳಿಕ ಫಾದರ್ ಗ್ರೆಗರಿ ಡಿಸೋಜ, ಫಾದರ್ ಡೆನಿಸ್ ಲೂವಿಸ್ ರವರು ಇಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಬಳಿಕ ಈ ಚರ್ಚ್‌ನ ಧರ್ಮಗುರುಗಳಾಗಿ ಬಂದ ವಂ.ಫಾದರ್ ದಾವಿದ್ ಕುವೆಲ್ಲೋ ರವರು ಚರ್ಚ್ ಹಾಗೂ ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವುದರ ಜೊತೆಗೆ
ಅಭಿವೃದ್ಧಿಗೆ ಹೊಸ ಮುನ್ನುಡಿಯನ್ನು ಬರೆದರು.

ಬೊರಿಮಾರ್ ಚರ್ಚ್ ಸೂರಿಕುಮೇರು ಗೆ ಬಂತು
ಸುಮಾರು ೮೫ ವರ್ಷಗಳ ಹಿಂದೆ ಸೈಂಟ್ ಜೋಸೆಫ್ ಚರ್ಚ್ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದಿಂದ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ಎಂಬಲ್ಲಿಗೆ ಸ್ಥಳಾಂತರಗೊಂಡಿತ್ತು. ಆಗಿನ ಧರ್ಮ ಗುರುಗಳಾಗಿದ್ದ ವಂ.ಫಾದರ್ ಲಿಯೋ ಕರ್ವಾಲೋ ರವರ ಮುತುವರ್ಜಿಯಲ್ಲಿ ಈ ಚರ್ಚ್ ನಿರ್ಮಾಣವಾಗಿತ್ತು. ಮಂಗಳೂರು ಧರ್ಮಪ್ರಾಂತ್ಯದ ಆಗಿನ ಬಿಷಪ್ ಅತೀ
ವಂದನೀಯ ಡಾ.ವಿಕ್ಟರ್ ಫೆರ್ನಾಂಡೀಸ್ ರವರು ೧೯೩೪ ರ ನವೆಂಬರ್ ೨೦ ರಂದು ಈ ಚರ್ಚ್ ನ ಉದ್ಘಾಟನೆಯನ್ನು ನೆರವೇರಿಸಿ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂದು ಅಧಿಕೃತವಾಗಿ ಘೋಷಿಸಿದ್ದರು.
ಕಂದಾಯ ಇಲಾಖೆಯ ದಾಖಲೆಯಲ್ಲಿಯೂ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂದು ದಾಖಲಾಗಿದ್ದರೂ, ಸೈಂಟ್ ಜೋಸೆಫ್ ಚರ್ಚ್ ಬೊರಿಮಾರ್ ಎಂದೇ ಕರೆಯಲಾಗುತ್ತಿತ್ತು.
೧೨೫ನೇ ವರ್ಷಾಚರಣೆಯ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಈ ಚರ್ಚ್ ಮುಂದಿನ ದಿನಗಳಲ್ಲಿ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು ಎಂಬ ಹೆಸರಿನಲ್ಲೇ ಮೇಳೈಸಲಿದೆ.
ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದ ಸವಿನೆನಪಿಗೆ ಅತ್ಯಾಕರ್ಷಕವಾಗಿ ವಿನೂತನ ಶೈಲಿಯಲ್ಲಿ ನಿರ್ಮಿಸಲಾದ ಚರ್ಚ್‌ನ ಪ್ರವೇಶ ದ್ವಾರದಲ್ಲಿಯೂ ಸೈಂಟ್ ಜೋಸೆಫ್ ಚರ್ಚ್ ಸೂರಿಕುಮೇರು
ಎಂದು ಬರೆಯಲಾಗಿದೆ. ಈ ನೂತನ ಪ್ರವೇಶ ದ್ವಾರವನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನಾ ರವರು ೨೦೧೯ ನವೆಂಬರ್ ೨೦ರಂದು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ.
ಬರಿಮಾರುವಿನಲ್ಲಿದ್ದ ಈ ಚರ್ಚ್ ಸೂರಿಕುಮೇರುಗೆ ಸ್ಥಳಾಂತರಗೊಂಡು ಉದ್ಘಾಟನೆಗೊಂಡ ವರ್ಷವೇ ಇಲ್ಲಿ ಬೆಥನಿ ಧರ್ಮಭಗಿನಿಯರ ಕಾನ್ವೆಂಟನ್ನು ಆರಂಭಿಸಲಾಯಿತು. ಮುಂದೆ ೧೯೩೮ ರಿಂದ ಫಾದರ್ ಅಲ್ಫೋನ್ಸೋ ಕಾಸ್ಟೆಲಿನೋ, ಫಾದರ್ ರೋಬರ್ಟ್ ಗೋವಿಯಸ್, ಫಾದರ್ ವಿಲಿಯಂ ವೇಗಸ್, ಫಾದರ್ ರೊಸಾರಿಯೋ ಫೆರ್ನಾಂಡಿಸ್, ಫಾದರ್ ವಿಕ್ಟರ್ ಮೆಂಡೋನ್ಸಾ, ಫಾದರ್ ಅಂಬ್ರೋಸ್ ಅರಾನ್ಹಾ ರವರು ಕಾರ್ಯನಿರ್ವಹಿಸಿ ಚರ್ಚ್ ನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು.
೧೯೭೨ರಿಂದ ೧೯೭೭ರವರೆಗೆ ಈ ಚರ್ಚ್ ನಲ್ಲಿ ಸೇವೆಯನ್ನು ನೀಡಿದ ಫಾ| ಮ್ಯಾಕ್ಸಿಮ್ ಫುಡ್ತಾದೊರವರು ತಮ್ಮ
ಆಧ್ಯಾತ್ಮಿಕ ಮನೋಭಾವ ಹಾಗೂ ನಗುಮುಖದ ಸೇವೆಯೊಂದಿಗೆ ಎಲ್ಲಾ ಜಾತಿಮತ ಧರ್ಮದವರೊಂದಿಗೆ ಬೆರೆತು ದೇವಾಲಯದ ಅಭಿವೃದ್ದಿಗಾಗಿ ಹಾಗೂ ಚರ್ಚ್ ಆದಾಯ ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು. ಧರ್ಮಗುರುಗಳ ನಿವಾಸ, ಹಲವಾರು ಸಂಘ ಸಂಸ್ಥೆಗಳ ಸ್ಥಾಪನೆ, ವೆದಿ ಸೇವಕರ ಸೊಡಾಲಿಟಿ, ೧೯೭೫ರಲ್ಲಿ ಕಥೊಲಿಕ್ ಯುವಕ ಸಂಘ ಸ್ಥಾಪಿಸಿ ಚರ್ಚ್ ಇತಿಹಾಸಕ್ಕೆ ಹೊಸತನವನ್ನು ತುಂಬಿದರು. ೧೯೭೭ರಲ್ಲಿ ಫಾ| ಲಾರೆನ್ಸ್ ಮಾರ್ಟಿಸ್‌ರವರು ಯಾವುದೇ ಪದವಿ ಮತ್ತು ಗೌರವಕ್ಕೆ ಆಶಿಸದೆ ಹಲವಾರು ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಿದರು. ಚರ್ಚ್ ನ ಸಹಯೋಗದಲ್ಲಿಯೇ ಸಾಮಾಜಿಕ ನಾಟಕಗಳು, ಯುವ ಫೆಸ್ತ್ ವಿವಧ್ ಕಾರ್ಯಕ್ರಮಗಳನ್ನು ಆಯೋಜಿಸಿದರು. ಇವರ ಅವಧಿಯಲ್ಲೇ ಮಂಗಳೂರು ಸಿಓಡಿಪಿ ಸಹಯೋಗದೊಂದಿಗೆ ಚರ್ಚ್ ವ್ಯಾಪ್ತಿಯ ೨೫ಕ್ಕೂ ಮಿಕ್ಕಿ ಕುಟುಂಬಗಳಿಗೆ ಹೊಸಮನೆಯನ್ನು ಕಟ್ಟಿಕೊಡಲಾಗಿತ್ತು. ತಾಯಿ ಮತ್ತು ಮಕ್ಕಳ ಪಾಲನಾ ಶಿಕ್ಷಣ ಕೇಂದ್ರ(ಒಅಊ) ಸ್ಥಾಪನೆ, ದೇವಾಲಯದಲ್ಲಿ ವಿದ್ಯುತ್ ವ್ಯವಸ್ಥೆ, ಬೆಂಚುಗಳು, ಧ್ವನಿವರ್ಧಕದ ಅಳವಡಿಕೆ, ೧೯೮೩-೮೪ರಲ್ಲಿ ನೂತನ ಗಂಟಾ ಗೋಪುರವನ್ನು ಇಲ್ಲಿ ನಿರ್ಮಿಸಲಾಯಿತು.

೧೯೮೪ ರಿಂದ ಫಾ| ಆರ್ಚಿಬಾಲ್ಡ್ ಆಲ್ಬುಕರ್ಕ್ ರವರು ಈ ದೇವಾಲಯದ ಧರ್ಮಗುರುಗಳಾಗಿ
ಅತ್ಯಂತ ಚುರುಕುತನದಿಂದ ತೊಡಗಿಸಿಕೊಂಡರು. ದೇವಾಲಯದ ವ್ಯಾಪ್ತಿಯಲ್ಲಿರುವ ಎಲ್ಲಾ ಕುಟುಂಬ
ಗಳು ಪ್ರತಿಯೊಂದು ಕಾರ್‍ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಿದ ಇವರು, ಹಲವಾರು ಆಧ್ಯಾತ್ಮಿಕ
ಶಿಬಿರಗಳನ್ನು ಆಯೋಜಿಸಿ ಗಮನ ಸೆಳೆದರು. ಮಕ್ಕಳಿಗೆ ಕ್ರೈಸ್ತ ಧಾರ್ಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದರು.
ಜನರೇಟರ್ ಹಾಗೂ ಫ್ಯಾನಿ ನ ವ್ಯವಸ್ಥೆ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ಒದಗಿಸಲು ಸಿ.ಒ.ಡಿ.ಪಿ ನೆರವಿನೊಂದಿಗೆ ನಿಧಿ ಸ್ಥಾಪನೆಯ ಮೂಲಕ ಬಡವರಿಗೆ ಆಶಾಕಿರಣವಾದರು.
ಶತಮಾನೋತ್ಸವ ಆಚರಣೆ.. ೧೯೯೩ರಲ್ಲಿ ಚರ್ಚ್ ಧರ್ಮಗುರುಗಳಾಗಿದ್ದ ಫಾದರ್ ಪೀಟರ್
ಫೆರ್ನಾಂಡಿಸ್ ರವರ ಸೇವಾವಧಿಯಲ್ಲಿ ಚರ್ಚ್ ಶತಮಾನೋತ್ಸವ ವನ್ನು ಹಾಗೂ ಸಂತ ಜೋಸೆಫ್ ಮಾಧ್ಯಮಿಕ ಶಾಲೆಯ ೧೦೦ವರ್ಷಗಳ ಸಂಭ್ರಮಾಚರಣೆಯನ್ನೂ ನೆರವೇರಿಸಲಾಗಿತ್ತು.
೧೯೯೮ರಿಂದ ೨೦೦೫ ರವರೆಗೆ ಕಾರ್ಯನಿರ್ವಹಿಸಿದ ಫಾದರ್ ಮೈಕಲ್ ಮಾರ್ಷಲ್ ಡಿ’ಸಿಲ್ವಾ ಇವರು, ಸೈಂಟ್ ಜೋಸೆಫ್ ಮಾಧ್ಯಮಿಕ ಶಾಲೆಗೆ ನೂತನ ಕಟ್ಟಡದ ನಿರ್ಮಾಣದ ಜೊತೆಗೆ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಗೊಳಿಸಿದರು. ೨೦೦೫-೨೦೦೬ರಲ್ಲಿ ಫಾ.ಓಸ್ವಲ್ಡ್ ಮೊಂತೆರೋ ರವರು ಚರ್ಚ್ ಮೇಲ್ಛಾವಣಿಯನ್ನು ದುರಸ್ತಿಗೊಳಿಸಿದರು. ೨೦೦೬ ರಿಂದ ೨೦೧೩ರ ತನಕ ಧರ್ಮಗುರುಗಳಾಗಿದ್ದ ಫಾದರ್ ಜೆರಾಲ್ಡ್ ಫ್ರಾನ್ಸಿಸ್ ಪಿಂಟೋ ರವರು ದೇವಾಲಯದ ಆದಾಯಕ್ಕಾಗಿ ಹಾಗೂ ಪರಿಸರ ಕಾಳಜಿಯೊಂದಿಗೆ ಚರ್ಚ್ ಜಮೀನಿನಲ್ಲಿ ರಬ್ಬರ್ ಗಿಡಗಳನ್ನು ನೆಟ್ಟು ರಬ್ಬರ್ ತೋಟ ನಿರ್ಮಿಸಿದರು.
೨೦೧೩ ರಲ್ಲಿ ಫಾದರ್ ನವೀನ್ ಪಿಂಟೋರವರು ಒಂದು ತಿಂಗಳ ಸೇವೆ ಸಲ್ಲಿಸಿ, ಉನ್ನತ ಶಿಕ್ಷಣಕ್ಕಾಗಿ ನಿರ್ಗಮಿಸಿದರು.
೨೦೧೩ ರಿಂದ ೨೦೧೮ ರವರೆಗೆ ಫಾದರ್ ಮೆಲ್ವಿನ್ ನೊರೋನ್ಹಾ ರವರು ಇಲ್ಲಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸುತ್ತಾ, ಪ್ರತೀ ತಿಂಗಳ ಮೊದಲ ಭಾನುವಾರ ರಿಟ್ರೀಟ್ ಪ್ರಾರ್ಥನೆ ನೆರವೇರಿಸಿ, ಸುಮಾರು ೬೦ವಾರಗಳು ನಿರಂತರವಾಗಿ ಧ್ಯಾನ, ಆರಾಧನೆಯಿಂದ ದೇವಾಲಯ ವ್ಯಾಪ್ತಿಯ ಕುಟುಂಬಗಳು ಆಧ್ಯಾತ್ಮಿಕ ವಾಗಿ ಬಲಗೊಳ್ಳಲು ಹಾಗೂ ಕುಟುಂಬಗಳ ನಡುವೆ ಇರುವ ವೈಮನಸ್ಸುಗಳನ್ನು ದೂರ ಮಾಡಲು ಇದು ಸಹಕಾರಿಯಾಯಿತಲ್ಲದೆ,ಎಲ್ಲಾ ಜಾತಿಯ ಜನರು ಒಟ್ಟಾಗಿ ಬೆರೆಯುವ ಸಂದೇಶ ನೀಡಿತು. ಮಾತ್ರವಲ್ಲದೆ ಇವರ ಶ್ರಮ ಚರ್ಚ್ ನ ಶತಮಾನೋತ್ತರ ಬೆಳ್ಳಿಹಬ್ಬದ ಕಾರ್ಯಗಳಿಗೂ ಪ್ರೇರಣೆಯಾಯಿತು.
ಜೊತೆಗೆ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯನ್ನೂ ಆರಂಭಿಸಿದ ಕೀರ್ತಿ ಯೂ ಇವರಿಗೆ ಸಲ್ಲುತ್ತದೆ.

ಪಪ್ಪಾಯಿ ಫಾದರ್ ಬಂದರು..

೨೦೧೮ ರಿಂದ ಚರ್ಚ್ ನ ಧರ್ಮಗುರುಗಳಾಗಿ ನಿಯುಕ್ತಿ ಹೊಂದಿದ ವಂದನೀಯ ಫಾದರ್ ಗ್ರೆಗರಿ ಪಿರೇರಾ ರವರು ಚರ್ಚ್‌ನ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಚರ್ಚ್ ನ ಜಮೀನಿನಲ್ಲಿ ಕೃಷಿಕ್ರಾಂತಿಯನ್ನೇ ನಡೆಸುವ ಮೂಲಕ ರಾಜ್ಯಕ್ಕೆ ಪ್ರೇರಣೆಯಾಗಿ ನಿಂತಿದ್ದಾರೆ. ಕೇವಲ ರಬ್ಬರ್‌ಗಿಡ ಹಾಗೂ ತರಗೆಲೆಗಳು ಇರುವ ಪ್ರದೇಶವನ್ನು ಪಪ್ಪಾಯಿ, ಕೃಷಿ, ಸುವರ್ಣ ಗೆಡ್ಡೆ, ನುಗ್ಗೆ, ಅರಿವೆ ಸೊಪ್ಪು, ಕುಂಬಳಕಾಯಿ ಬಳ್ಳಿ, ಗೆಣಸು ಇನ್ನಿತರ ತರಾಕಾರಿಗಳನ್ನು ಬೆಳೆಸಿ ಸಾವಯವ ಕೃಷಿಯ ಮೂಲಕ ಗಮನ ಸೆಳೆದಿದ್ದಾರೆ.
ಇಂದು ಈ ಜಮೀನಿನಲ್ಲಿ ೪೦೦ಕ್ಕೂ ಅಧಿಕ ಪಪ್ಪಾಯಿ ಗಿಡಗಳು, ೧೨೦ ನುಗ್ಗೆ ಮರ, ಸುಮಾರು ೧೦೦೦ ಸುವರ್ಣ ಗೆಡ್ಡೆಗಳು ಬೆಳೆಯುತ್ತಿವೆ. ಕೃಷಿ ಕಾರ್‍ಯವೂ ದೇವರ ಪೂಜೆಯಷ್ಟೇ ಪವಿತ್ರ ಅಂದುಕೊಂಡಿರುವ ಇವರು
ಬಿಡುವಿನ ಹೊತ್ತಿನಲ್ಲಿ ತೋಟಕ್ಕಿಳಿದು ಕೆಲಸ ಮಾಡುತ್ತಾರೆ.
ಇವರ ಕೃಷಿಕಾರ್ಯದಿಂದ ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರಲ್ಲಿ ಕೃಷಿ ಅಭಿರುಚಿ ಹೆಚ್ಚಾಗಿದೆಯಲ್ಲದೆ, ಆಸುಪಾಸಿನ ಗ್ರಾಮಗಳ ಕೃಷಿಚಟುವಟಿಕೆಗಳಿಗೂ ಇವರು ಪರೋಕ್ಷ ಉತ್ತೇಜನ ನೀಡಿದ್ದಾರೆ.
ನಾರಂಪಾಡಿಯಲ್ಲಿದ್ದಾಗ ಕುಂಬಳಕಾಯಿ ಫಾದರ್, ಬೆಳ್ವೆಯಲ್ಲಿ ಅಡಿಕೆ ಫಾದರ್ ಎಂದು ಚಿರಪರಿಚಿತರಾಗಿದ್ದ ಇವರು ಸೂರಿಕುಮೇರು ವಿಗೆ ಬಂದ ಬಳಿಕ ಪಪ್ಪಾಯಿ ಫಾದರ್ ಆಗಿ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲಿಪಾದೆಯಲ್ಲಿ ಬಡ ಮಕ್ಕಳಿಗಾಗಿ ಶಾಲೆಯನ್ನೂ ಆರಂಭಿಸಿದ ಕೀರ್ತಿ ಕೂಡ ಇವರದು.
ದೇವಾಲಯದ ಆವರಣದಲ್ಲಿ ಬೆಳೆದ ಸಾವಯವ ಕೃಷಿಗೆ ಬಹಳಷ್ಟು ಬೇಡಿಕೆ ಇದ್ದು ಮಂಗಳೂರಿನ ಫಾದರ್ ಮುಲ್ಲರ್ ಆಸ್ವತ್ರೆ, ಧರ್ಮ ಗುರುಗಳ ತರಬೇತಿ ಕೇಂದ್ರ, ಜೆಪ್ಪು ಸೆಮಿನರಿ, ಸ್ಥಳೀಯವಾಗಿಯೂ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇದ್ದು ಮಾರುಕಟ್ಟೆ ದರದಿಂದಲೂ ಕಡಿಮೆ ಬೆಲೆ ಇರುವುದರಿಂದ ಹೆಚ್ಚಿನ ಆಸಕ್ತಿಯಲ್ಲಿ ಖರೀದಿಸುತ್ತಿದ್ದಾರೆ.
ಚರ್ಚ್ ಪಾಲನಾ ಸಮಿತಿಯ ಸಹಕಾರದೊಂದಿಗೆ ಪ್ರಸ್ತುತ ಚರ್ಚ್ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು ದೇವಾಲಯ ವ್ಯಾಪ್ತಿಯ ೧೫೨ ಕುಟುಂಬಗಳು ಒಟ್ಟು ಸೇರಿ ಇಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಚರ್ಚ್ ನ ಶತಮಾನೋತ್ತರ ಬೆಳ್ಳಿಹಬ್ಬದ ಕಾರ್ಯಕ್ರಮಗಳಿಂದ ತೊಡಗಿ, ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ನಡೆಸಲಾಗಿದ್ದು ಎಲ್ಲಾ ಕಾರ್ಯಗಳಿಗೆ ಚರ್ಚ್ ವ್ಯಾಪ್ತಿಯ ಕುಟುಂಬಗಳ ತನು ಮನ ಧನದ ಸಹಕಾರದಿಂದಲೇ ನಡೆದಿರುವುದು ಹೊಸ ಇತಿಹಾಸವನ್ನೇ ನಿರ್ಮಿಸಿದಂತಿದೆ.
ಎಲ್ಲಾ ಧರ್ಮಗುರುಗಳ ಅವಿರತ ಶ್ರಮ, ಶ್ರದ್ಧೆ, ಮಾನವೀಯತೆಯ ಆಶಯಗಳು, ಸಮಾಜಮುಖೀ ಚಿಂತನೆಗಳಿಂದಾಗಿ ಇಂದು ಸೂರಿಕುಮೇರು ವಿನ ಸೈಂಟ್ ಜೋಸೆಫ್ ಚರ್ಚ್ ಶತಮಾನೋತ್ತರ ಬೆಳ್ಳಿಹಬ್ಬಕ್ಕೆ ತೆರೆದುಕೊಳ್ಳಲು ನೆರವಾಗಿದ್ದು, ಈ ಸಂಭ್ರಮದ ಸವಿ ನೆನಪಿಗಾಗಿ ೨೦೧೮ ಸೆಪ್ಟೆಂಬರ್ ೪ ರಿಂದ ತಿಂಗಳಿಗೊಂದರಂತೆ ವರ್ಷವಿಡೀ ಕಾರ್ಯಕ್ರಮಗಳನ್ನು ಆಯೋಜಿಸಿ ಶತಮಾನೋತ್ತರ ಬೆಳ್ಳಿ ಹಬ್ಬಕ್ಕೆ ಮತ್ತಷ್ಟು ಅರ್ಥತುಂಬಿದ್ದಾರೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆರ್ಚ್ ಭಿಷಪ್ ಸಹಿತ ವಿವಿಧ ಪ್ರಾಂತ್ಯಗಳ ಧರ್ಮಾಧ್ಯಕ್ಷರ ಭಾಗವಹಿಸುವಿಕೆಯೊಂದಿಗೆ ನಡೆದ ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆ ಇತರ ಧಾರ್ಮಿಕ ಕೇಂದ್ರಗಳಿಗೂ ಆದರ್ಶಪ್ರಾಯವಾಗಿದೆ.
೨೦೧೯ ನವೆಂಬರ್ ೨೦ರಂದು ನಡೆಯುವ ಶತಮಾನೋತ್ತರ ಬೆಳ್ಳಿಹಬ್ಬದ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ಡಾನಾ ರವರು ಭಾಗವಹಿಸಿ, ವಿಶೇಷ ಬಲಿಪೂಜೆಯನ್ನು ನಡೆಸಿ, ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಧರ್ಮಪ್ರಾಂತ್ಯದ ಅತಿವಂದನೀಯ ಬಿಷಪ್ ಡಾ. ಗೀವರ್ಗೀಸ್ ಮಾರ್ ಮಕಾರಿಸ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಅತಿ ವಂದನೀಯ ಬಿಷಪ್ ಡಾ.ಲಾರೆನ್ಸ್ ಮುಖಾಝಿ, ಮೊಗರ್ನಾಡು ಚರ್ಚ್‌ನ ಧರ್ಮಗುರು ಡಾ. ಮಾರ್ಕ್ ಕೆಸ್ಟಲಿನೋ ಸಹಿತ ಅನೇಕ ಧರ್ಮಗುರುಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಕಲ್ವಾರಿ ಪರ್ವತದ ೧೪ ಶಿಲುಬೆ ಯಾತ್ರೆ, ಕಾಂಕ್ರೀಟು ರಸ್ತೆ, ನೀರಿನ ಸೌಲಭ್ಯ, ಸೋಲಾರ್ ಲೈಟ್, ಸಿಸಿ ಕ್ಯಾಮೆರಾ ಹಾಗೂ ದ್ವನಿವರ್ಧಕದ ಉದ್ಘಾಟನೆಯೂ ನಡೆಯಲಿದೆ. ೧೧.೩೦ಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಕಾಂಕ್ರೀಟು ರಸ್ತೆಯನ್ನು ಉದ್ಘಾಟಿಸಲಿದ್ದಾರೆ.

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...