ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆ ಇದರ ವತಿಯಿಂದ ನಿವೃತ್ತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಮತ್ತು ಸರಕಾರಿ ನೌಕರರಿಗೆ ಕಾನೂನು ಮಾಹಿತಿ ಕಾರ್ಯಾಗಾರ ಹಾಗೂ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಶನಿವಾರ ಬಿ.ಸಿ.ರೋಡಿನ ಸರಕಾರಿ ನೌಕರರ ಭವನದಲ್ಲಿ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯ ನಾಯಕರಿಗಿಂತ ಹೆಚ್ಚಿನ ಜವಾಬ್ದಾರಿ ಸರಕಾರಿ ನೌಕರರ ಮೇಲಿದೆ. ಇಂತಹ ಸಂದರ್ಭದಲ್ಲಿ ಸರಕಾರಿ ನೌಕರರಿಗೆ ಒತ್ತಡ ಹೇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾದಂತೆ ಎಂದು ಹೇಳಿದರು.
ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದ ಅವರು, ನಿಮ್ಮ ಸೇವೆ ನಿರಂತರವಾಗಲಿ ಎಂದು ಹೇಳಿದರು. ಕಾನೂನು ಜೊತೆಯಾಗಿ ಮಾನವಿಯತೆಯನ್ನು ಬೆಳೆಸಿಕೊಂಡಾಗ ಉತ್ತಮ, ಪ್ರಮಾಣಿಕ ಸೇವೆ ನೀಡಲು ಸಾಧ್ಯ ಎಂದರು.
ತಹಶೀಲ್ದಾರ್ ರಶ್ಮಿ. ಎಸ್.ಅರ್.ಮಾತನಾಡಿ ಸಂಘಟನೆಯಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ, ಒಗ್ಗಟ್ಟಿನಿಂದ ಸರಕಾರಿ ನೌಕರರು ಕೆಲಸ ಮಾಡಲು ಅವರು ತಿಳಿಸಿದರು. ಕಚೇರಿಗೆ ಬರುವ ಪ್ರತಿಯೊಬ್ಬರನ್ನು ಗೌರವದಿಂದ ಕಂಡು ಅವರ ಕೆಲಸ ಮಾಡುವಂತೆ ಅವರು ತಿಳಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮಕ್ಕೆ ಶುಭಕೋರಿದರು. ಪ್ರವೀಣ್ ರಾವ್ ಅವರು ಕಾನೂನು ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಸರಕಾರಿ ನೌಕಕರ ಸಂಘದ ತಾಲೂಕು ಅಧ್ಯಕ್ಷ ಉಮನಾಥ ರೈಮೇರಾವು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಇಒ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಗಾಯತ್ರಿ ಕಂಬಳಿ, ಪಿಂಚಣಿದಾರ ಸಂಘದ ಅಧ್ಯಕ್ಷ ಲೋಕನಾಥ್ ಶೆಟ್ಟಿ, ವೈದ್ಯರಾದ ಡಾ. ಸುರೇಂದ್ರ ನಾಯ್ಕ್, ರಾಧಾಕೃಷ್ಣ ಭಟ್, ಜನಾರ್ದನ್, ಶಮಂತ್ ಕುಮಾರ್, ಉಪಸ್ಥಿತರಿದ್ದರು.
ಪದಾಧಿಕಾರಿಗಳಾದ ಸಂತೋಷ್ ಕುಮಾರ್, ಜೆ. ಜನಾರ್ದನ್, ಬಸಯ್ಯ ಅಲಿಮಟ್ಟಿ, ಮಂಜುನಾಥ್ ಕೆ.ಎಚ್., ರಮೇಶ್ ನಾಯ್ಕ್ ರಾಯಿ ಹಾಜರಿದ್ದರು. ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಪ್ರಸ್ತಾವಿಸಿ, ಸ್ವಾಗತಿಸಿದರು. ನಿವೃತ್ತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.