ಬಂಟ್ವಾಳ: ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರು ತಕರಾರು ಮಾಡಿ ದಂಡ ಕಟ್ಟುವಾಗ ಯೋಚನೆ ಮಾಡುತ್ತಾರೆ. ಆದರೆ, ತಮ್ಮ ಜೀವದ ಬಗ್ಗೆ ಯಾಕೆ ಯೋಚನೆ ಮಾಡಲ್ಲ ಎಂದು ಬಂಟ್ವಾಳ ಉಪವಿಭಾಗದ ಎಎಸ್ಪಿ ಸೈದುಲು ಅಡಾವತ್ ಪ್ರಶ್ನಿಸಿದ್ದಾರೆ.
ಅವರು ಬಿ.ಸಿ.ರೋಡಿನ ಕೈಕಂಬ ಜಂಕ್ಷನ್‌ನಲ್ಲಿ ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್ ಬಿ.ಸಿ.ರೋಡ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಹಾಗೂ ಬಂಟ್ವಾಳ ಟ್ರಾಫಿಕ್ ಪೊಲೀಸ್ ಇಲಾಖೆಯ ಜಂಟಿ ಆಶ್ರಯದಲ್ಲಿ “ಸಡಕ್ ಸುರಕ್ಷಾ ಜೀವನ್ ರಕ್ಷಾ” ಶೀರ್ಷಿಕೆಯಡಿ ರಸ್ತೆ ಸುರಕ್ಷತೆ ಜಾಗೃತಿ 2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ರಸ್ತೆ ನಿಯಮ ಉಲ್ಲಂಘನೆ ಮಾಡಿದವರಿಗೆ ಟ್ರಾಫಿಕ್ ಪೊಲೀಸ್ ದಂಡ ವಿಧಿಸುವಾಗ ಪೊಲೀಸರದ್ದೇ ತಪ್ಪೆಂದು ಬಿಂಬಿಸಿ ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸುವುದು ಸರಿಯಲ್ಲ. ಪೊಲೀಸರು ತಪ್ಪು ಮಾಡಿದ್ದೇ ಆಗಿದ್ದಲ್ಲಿ ಅದು ತಪ್ಪೇ. ನಿಯಮ ಉಲ್ಲಂಘನೆ ಮಾಡಿದವರಿಗೆ ಅವರ ಸುರಕ್ಷತೆಗಾಗಿ ದಂಡ ವಿಧಿಸಲಾಗುತ್ತಿದೆಯೇ ಹೊರತು ಸರಕಾರಕ್ಕೆ ಆದಾಯವನ್ನು ಮಾಡುವುದಲ್ಲ ಎಂದ ಅವರು ಡೈಮಂಡ್ ಸ್ಕೂಲ್ ಇಂತಹ ಕಾರ್ಯ ಶ್ಲಾಘನೀಯ. ತಾಲೂಕಿನ ಎಲ್ಲ ಶಾಲೆಗಳಲ್ಲಿ ರಸ್ತೆ ಸುರಕ್ಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ರಸ್ತೆ ಸುರಕ್ಷತೆಯ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿ ಕಳುಹಿಸುವ ಹಿತದೃಷ್ಠಿಯಿಂದ ಶಿಕ್ಷಣ ಇಲಾಖೆಯಿಂದ ಶಾಲಾ, ಪ್ರಯೋಗಾಲಯ, ತಾಂತ್ರಿಕ, ರಸ್ತೆ ಸುರಕ್ಷೆಯಂತಹ ಯೋಜನೆಯನ್ನು ರೂಪಿಸಲಾಗಿದ್ದು, ಪ್ರತೀ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ನಡೆಸಲಾಗುವುದು ಎಂದು ಹೆಳಿದರು.
ಕಾರ್ಯಕ್ರಮ ಸಂಯೋಜಕ ಗಿರೀಶ್ ಕಾಮತ್ ರಸ್ತೆ ಸುರಕ್ಷತೆಯ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಡೈಮಂಡ್ ಎಜುಕೇಷನಲ್ ಟ್ರಸ್ಟ್‌ನ ಗೌರವ ಸಲಹೆಗಾರ ಹಾಜಿ ಮುಹಮ್ಮದ್ ಬಾವ, ಬಂಟ್ವಾಳ ಟ್ರಾಫಿಕ್ ಎಸ್ಸೈ ರಾಮ ನಾಯ್ಕ್, ಡೈಮಂಡ್ ಸ್ಕೂಲ್ ಕವಿತಾ ಸಾಲ್ಯಾನ್ ಉಪಸ್ಥಿತರಿದ್ದರು. ಡೈಮಂಡ್ ಎಜುಕೇಷನಲ್ ಟ್ರಸ್ಟ್‌ನ ಸನಾ ಅಲ್ತಾಫ್ ಪ್ರಸ್ತಾವಿಸಿ, ಸ್ವಾಗತಿಸಿದರು.
ನಿಯಮ ಉಲ್ಲಂಘಿಸಿದ ಚಾಲಕರಿಗೆ ಡೈಮಂಡ್ ಶಾಲೆಯ ಪುಟಾಣಿಗಳು ರಸ್ತೆ ಸುರಕ್ಷತೆಯ ಕರಪತ್ರಗಳು ಮತ್ತು ಗುಲಾಬಿಗಳನ್ನು ವಿತರಿಸಿ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿ ನೋಡುವರ ಗಮನ ಸೆಳೆದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here