ಬಂಟ್ವಾಳ : ತಾಲೂಕಿನ ಮಣಿನಾಲ್ಕೂರು ಗ್ರಾಮದಲ್ಲಿ ನೇತ್ರಾವತಿ ನದಿಗೆ ಅಜಿಲಮೊಗರು -ಕಡೇಶಿವಾಲಯಕ್ಕೆ ಸಂಪರ್ಕದ ಸೌಹಾರ್ದ ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಇತ್ತ ಸಂಗಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಕರ್ಪೆ ಗ್ರಾಮದಲ್ಲಿ ಹರಿಯುವ ಫಲ್ಗುಣಿ ನದಿಗೆ ಸುಮಾರು 30 ಕೋ.ರೂ. ವೆಚ್ಚದಲ್ಲಿ ಬೃಹತ್ ಅಣೆಕಟ್ಟು – ಮೇಲ್ಸೇತುವೆ ನಿರ್ಮಾಣವಾಗಲಿದೆ.
ಕರ್ಪೆ ಗ್ರಾಮದ ದೋಟದಿಂದ ಮಂಗಳೂರು ತಾಲೂಕಿನ ಕಿಲೆಂಜಾರು ದೊಡ್ಡಳಿಕೆ-ಕುಪ್ಪೆ ಪದವು ಸಂಪರ್ಕಕ್ಕೆ ಪಶ್ಚಿಮ ವಾಹಿನಿ ಯೋಜನೆಯಡಿ ಈ ಅಣೆಕಟ್ಟು ಸಹಿತ ಮೇಲ್ಸೇತುವೆ ನಿರ್ಮಾಣವಾಗಲಿದ್ದು, ಈಗಾಗಲೇ ಕರ್ಪೆ ದೋಟ ಬಳಿ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ ದೊರೆತಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಮುಂದಿನ ಎಪ್ರಿಲ್ ತಿಂಗಳ ಅಂತ್ಯಕ್ಕೆ ಫಲ್ಗುಣಿ ನದಿಗೆ ಅಣೆಕಟ್ಟು ಸಹಿತ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಜನರ ಅನುಕೂಲಕ್ಕೆ ಒದಗಲಿದೆ.
5.5 ಮೀ. ಅಗಲಕ್ಕೆ ವಿಸ್ತರಣೆಯಾದ ಮೇಲ್ಸೇತುವೆ: ಈ ಭಾಗದ ಬಹುಕಾಲದ ಬೇಡಿಕೆಯಲ್ಲಿ ಒಂದಾಗಿರುವ ಅಣೆಕಟ್ಟು, ಮೇಲ್ಸೇತುವೆಗೆ ಈ ಹಿಂದೆ ಪ್ರಸ್ತಾಪವಾದಂತೆ 3.5 ಮೀ. ಅಗಲದ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಕೂಲವಾಗುವಂತೆ ಈ ಅಣೆಕಟ್ಟು ಮೇಲ್ಸೇತುವೆಗೆ 15 ಕೋ.ರೂ. ಮಂಜುರಾತಿಯಾಗಿತ್ತು. ಬಳಿಕ ಘನ ವಾಹನಗಳು ಕೂಡಾ ಈ ಸೇತುವೆಯಿಂದ ಸಂಚರಿಸಬೇಕೆಂಬ ಗ್ರಾಮಸ್ಥರ ಹಾಗೂ ಪರವೂರಿನ ಜನರ ಬೇಡಿಕೆಗೆ ಸಂಗಬೆಟ್ಟು ತಾ.ಪಂ.ಕ್ಷೇತ್ರದ ಸದಸ್ಯ ಪ್ರಭಾಕರ ಪ್ರಭು ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಬಂಟ್ವಾಳ ಶಾಸಕ ಯು.ರಾಜೇಶ್ ನಾಕ್ ಅವರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವರಿಕೆ ಮಾಡಿದ್ದರು. ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಅವರು ಬಸ್, ಲಾರಿ ಸಹಿತ ಘನವಾಹನಗಳು ಕೂಡಾ ಈ ಮೇಲ್ಸೇತುವೆಯಲ್ಲಿ ಹಾದು ಹೋಗುವ ನಿಟ್ಟಿನಲ್ಲಿ 3.5 ಮೀ.ನಿಂದ 5.5 ಮೀ. ಅಗಲಕ್ಕೆ ವಿಸ್ತರಿಸಿ ಹೆಚ್ಚುವರಿಯಾಗಿ ಮತ್ತೆ 15 ಕೋ.ರೂ. ಅನುದಾನವನ್ನು ಮಂಜೂರುಗೊಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಸನಿಹ: ಈ ಮೇಲ್ಸೇತುವೆಯಿಂದ ಸುತ್ತ ಮುತ್ತಲಿನ ಪ್ರದೇಶದ ಜನರಿಗೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಅತ್ಯಂತ ಸನಿಹವಾಗಲಿದೆ. ಸಿದ್ದಕಟ್ಟೆ, ವೇಣೂರು, ಪೂಂಜ, ಕುಕ್ಕಿಪಾಡಿ, ಮಾವಿನಕಟ್ಟೆ, ವಾಮದಪದವು, ನಯನಾಡು, ಅಣ್ಣಳಿಕೆ, ಅರಳ, ರಾಯಿ,ಕೊಲ, ಪಂಜಿಕಲ್ಲು ಪರಿಸರದವರು ಈ ಸಂಪರ್ಕ ರಸ್ತೆಯಿಂದ ಕುಪ್ಪೆದವು, ಗಂಜಿ ಮಠ, ಕೈಕಂಬ, ಬಜ್ಪೆ, ಕಟೀಲು ಮೊದಲಾದ ಕಡೆ ಮತ್ತು ಅ ಭಾಗದ ಜನರು ಬಂಟ್ವಾಳ, ಸಿದ್ದಕಟ್ಟೆ, ವೇಣೂರು, ವಾಮದಪದವು ಮೊದಲಾದೆಡೆ ಸಂಪರ್ಕಿಸಲು ಅನುಕೂಲವಾಗಲಿದೆ.ಹಾಗೆಯೇ ಅಣೆಕಟ್ಟು ನಿರ್ಮಾಣದಿಂದ ಈ ಭಾಗದ ಕೃಷಿಕರಿಗೆ ಮತ್ತು ಪುಚ್ಚೆಮೊಗರುವಿನಲ್ಲಿ ನಿರ್ಮಾಣವಾದ ಸಂಗಬೆಟ್ಟು ಬಹುಗ್ರಾಮ ಯೋಜನೆಗೆ ಉಪಯುಕ್ತವಾಗಲಿದೆ.
52 ಪಿಲ್ಲರ್: ಕರ್ಪೆ ದೋಟದಿಂದ ದೊಡ್ಡಳಿಕೆ ಸಂಪರ್ಕಿಸುವ ಈ ನೂತನ ಅಣೆಕಟ್ಟು ಮತ್ತು ಮೇಲ್ಸೇತುವೆ ಸುಮಾರು 375 ಮೀ. ಉದ್ದ, 5.5 ಅಗಲ ಹೊಂದಲಿದೆ. ಸುಮಾರು 52 ಪಿಲ್ಲರ್‌ಗಳು ಮೇಲ್ಸೇತುವೆಯನ್ನು ಆಧರಿಸಲಿದೆ. ಈಗಾಗಲೇ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕುಂದಾಪುರ ಮೂಲದ ಗುತ್ತಿಗೆದಾರರೊಬ್ಬರು ಕಾಮಗಾರಿವಹಿಸಿಕೊಂಡಿದ್ದು, ಮೊದಲ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

——————————————–
3.5 ಮೀ ಅಗಲದ ಕೇವಲ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿದ್ದ ಈ ಮೇಲ್ಸೇತುವೆ ಗ್ರಾಮಸ್ಥರ ಹಾಗೂ ಪರವೂರಿನ ಜನರ ಬೇಡಿಕೆಗನುಗುಣವಾಗಿ ಘನ ವಾಹನಗಳಿಗೆ ಸಂಚರಿಸಲು 5.5. ಮೀ. ಅಗಲಕ್ಕೆ ವಿಸ್ತರಿಸಲು ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ, ಈ ಹಿಂದೆ ಪ್ರಸ್ತಾವನೆಯಲ್ಲಿದ್ದ 15 ಕೋ.ರೂ.ನ ಈ ಅನುದಾನವನ್ನು 30ಕೋ.ರೂ.ಗೆ ಏರಿಸಿ ಕಾಮಗಾರಿಯನ್ನು ತಕ್ಷಣ ಆರಂಭಿಸಲು ಆದೇಶಿಸಿದ್ದಾರೆ. ಈ ಅನುದಾನ ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಗೆ ಬಿಡುಗಡೆಗೊಂಡ ಅತ್ಯಧಿಕ ಮೊತ್ತದ ಅನುದಾನವಾಗಿದೆ. ಈ ಸೇತುವೆ ನಿರ್ಮಾಣದಿಂದ ವಿಮಾನ ನಿಲ್ದಾಣಕ್ಕೆ ಸಾಗಲು ಹತ್ತಿರವಾಗಲಿದೆ.
-ರಾಜೇಶ್ ನಾಯ್ಕ್ ಉಳಿಪ್ಪಾಡಿ, ಶಾಸಕರು, ಬಂಟ್ವಾಳ.
———————————————————
ಕರ್ಪೆ ದೋಟದಿಂದ ದೊಡ್ಡಳಿಕೆಗೆ ನಿರ್ಮಾಣವಾಗುವ ಬೃಹತ್ ಅಣೆಕಟ್ಟು ಸಹಿತ ಸಂಪರ್ಕ ಸೇತುವೆಯಿಂದ ಸಿದ್ದಕಟ್ಟೆ ಪರಿಸರದ ಹಲವಾರು ಗ್ರಾಮದ ಜನರಿಗೆ ಪ್ರಯೋಜನವಾಗಲಿದೆ. ಇದು ಇಲ್ಲಿನ ಜನರ ಬಹುಕಾಲದ ಬೇಡಿಕೆಯೂ ಆಗಿದ್ದು, ಮುಖ್ಯಮಂತ್ರಿಯವರು ಶಾಸಕ ರಾಜೇಶ್ ನಾಯ್ಕ್ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮನವಿಯನ್ನು ಪುರಸ್ಕರಿಸಿ, ಘನ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆಯನ್ನು ವಿಸ್ತರಿಸಿ ಹೆಚ್ಚುವರಿ ಅನುದಾನವನ್ನು ಮಂಜೂರುಗೊಳಿಸಿ ಶೀಘ್ರವಾಗಿ ಕಾಮಗಾರಿ ಆರಂಭ ಗೊಳಿಸಲು ಆದೇಶಿಸಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ.
-ಪ್ರಭಾಕರ ಪ್ರಭು, ತಾ. ಪಂ. ಸದಸ್ಯ, ಸಂಗಬೆಟ್ಟು ಕ್ಷೇತ್ರ
———————————————————–

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here