ವಿಟ್ಲ: ಮನೆ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಸಿಗುತ್ತಿಲ್ಲ. ಮೂಡಾದ ಅನುಮತಿಯನ್ನು ಪಡೆಯಲು ನಾಗರಿಕರು ಮಂಗಳೂರು ತನಕ ಸುತ್ತಾಡುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜವಿಲ್ಲ. ಈ ನಡುವೆ ಸಾಮಾನ್ಯ ಸಭೆಯಲ್ಲಿ ತೆರಿಗೆ ಪರಿಷ್ಕರಣೆ ಮಾಡಬೇಕು ಎನ್ನುವ ಸುತ್ತೋಲೆ ಬಂದಿದೆ. ಮನೆ, ಹಾಗೂ ಕಟ್ಟಡಕ್ಕೆ ಪರವಾನಿಗೆ ನೀಡಲಾಗುವುದಿಲ್ಲವೆಂದಾದಲ್ಲಿ ತೆರಿಗೆ ಪರಿಷ್ಕರಣೆಗೆ ಆತುರವೇನು ಎಂದು ವಿಟ್ಲ ಪ.ಪಂ.ಸದಸ್ಯರು ಒಕ್ಕೊರಲಿನಿಂದ ಪ್ರಶ್ನಿಸಿದರು.
ಅವರು ಗುರುವಾರ ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೆರಿಗೆ ಹೆಚ್ಚಳ ಮಾಡುವ ವಿಚಾರಕ್ಕೆ ಸಂಬಂಧಿಸಿ ಚರ್ಚೆ ನಡೆಸಿದರು. ಅಧ್ಯಕ್ಷೆ ದಮಯಂತಿ ಅಧ್ಯಕ್ಷತೆ ವಹಿಸಿದ್ದರು. ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಮಾಲಿನಿ ಅವರು ಕಳೆದ ಮೂರು ವರ್ಷಗಳಿಂದ ತೆರಿಗೆ ಪರಿಷ್ಕರಣೆ ಮಾಡಲಿಲ್ಲ. ಪ.ಪಂ.ಆಗಿ ನಾಲ್ಕು ವರ್ಷಗಳಾದವು. ಪ್ರತೀ ಮೂರು ವರ್ಷಕ್ಕೊಮ್ಮೆ ತೆರಿಗೆ ಪರಿಷ್ಕರಣೆ ನಡೆಸುವ ನಿಯಮವಿದೆ ಎಂದರು.
ಆಗ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರೆಲ್ಲರೂ ತೀವ್ರವಾಗಿ ವಿರೋಧಿಸಿದರು. ಪ.ಪಂ.ನಲ್ಲಿ ಎಷ್ಟು ಹೊಸ ಮನೆಗಳು ಅಥವಾ ಕಟ್ಟಡಗಳಾಗುತ್ತಿವೆ ? ಮೂಡಾದ ಅನುಮತಿ ಪಡೆಯಲು ಬಡ ಹಾಗೂ ಮಧ್ಯಮ ವರ್ಗದವರಿಗೆ ಸಾಧ್ಯವಾಗುತ್ತಿಲ್ಲ. ಅವರ ಬೇಡಿಕೆಗಳೆಲ್ಲವನ್ನೂ ಪೂರೈಸಲಾಗುತ್ತಿಲ್ಲ. ಬದಲಾಗಿ ಸೂಕ್ತವಾಗಿ ವಿಟ್ಲದ ನಾಗರಿಕರಿಗೆ ಸ್ಪಂದಿಸುವ ಕಾರ್ಯ ಯೋಜನೆಗಳನ್ನು ರೂಪಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಗಬ್ಬು ವಾಸನೆ ಬರುತ್ತಿರುವ ಮೀನು ಮಾರುಕಟ್ಟೆ :
ಇದೇ ಸಂದರ್ಭ ಮೀನು ಮಾರುಕಟ್ಟೆಯ ವಿಷಯವನ್ನು ಮಂಡನೆ ಮಾಡಿದಾಗಲೂ ಗೊಂದಲವುಂಟಾಯಿತು. ಬೊಬ್ಬೆಕೇರಿ ಕಟ್ಟೆಯಿಂದ ದೇವಸ್ಥಾನಕ್ಕೆ ತೆರಳುವ ಮಾರ್ಗದ ಬದಿಯಲ್ಲಿ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣವಾಗಲಿಲ್ಲ. ರಸ್ತೆಯಲ್ಲೇ ವಾಹನಗಳು ನಿಂತು ಮೀನು ಮಾರಾಟ ಮಾಡಲಾಗುತ್ತಿದೆ. ವಾಹನ ಚಾಲಕರಿಗೆ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಮೀನು ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸಂತೆ ನಡೆಯುವ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿಗೆ ಯಾರೂ ತೆರಳುತ್ತಿಲ್ಲ, ಅಲ್ಲಿ ವ್ಯಾಪಾರ ನಡೆಸುತ್ತಿಲ್ಲ ಎಂಬ ಬಿಜೆಪಿ ಸದಸ್ಯರ ಅಭಿಪ್ರಾಯಕ್ಕೆ ವಿರೋಧ ವ್ಯಕ್ತವಾಯಿತು. ಕಾಂಗ್ರೆಸ್ ಸದಸ್ಯರು ನಾಗರಿಕರೇ ರಸ್ತೆಯಲ್ಲಿ ನಿಲ್ಲುತ್ತಾರೆ. ಮೀನುಗಾರರಿಗೆ ಯಾವುದೇ ತೊಂದರೆಯಾಗಬಾರದು ಎಂದರು. ಈ ನಡುವೆ ಎರಡೂ ಪಕ್ಷದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಗೊಂದಲದ ವಾತಾವರಣದಲ್ಲಿ ಯಾರಿಗೆ ಯಾರು ಏನು ಹೇಳುತ್ತಿದ್ದಾರೆಂದೇ ಅರ್ಥವಾಗಲಿಲ್ಲ.
ಜನರ ಅಗತ್ಯಕ್ಕೆ ಮಾಡಿದ ಸ್ಥಾಯಿ ಸಮಿತಿ ನಿರ್ಣಯಕ್ಕೂ ಅನುದಾನ ಬಿಡುಗಡೆ ಮಾಡಲು ಸಮಸ್ಯೆ ಏನು ? ಎಂದು ಸದಸ್ಯ ಶ್ರೀಕೃಷ್ಣ ವಿಟ್ಲ ಪ್ರಶ್ನಿಸಿ, ೫ ಸಾವಿರ ರೂ.ಗಳನ್ನು ಎರಡು ಬಾರಿ ನಮೂದಿಸಲಾಗಿದೆ. ಅದನ್ನು ಪರಿಷ್ಕರಿಸಬೇಕು ಎಂದು ಹೇಳಲಾಗಿತ್ತು. ಆದರೆ ಪರಿಷ್ಕರಿಸಲಿಲ್ಲ. ಅದಕ್ಕೆ ಕಾರಣ ಕೊಡಬೇಕು. ಆಮೇಲೆ ಪ.ಪಂ.ನ ಜಾಗದ ಬಗ್ಗೆ ಇರುವ ನ್ಯಾಯಾಲಯದ ಖರ್ಚು ೩೦೦೦೦/- ರೂ.ಗಳೆಂದು ನಮೂದಿಸಲಾಗಿದೆ. ಅದರ ವಿವರ ಎಲ್ಲಿದೆ ಎಂದು ಪ್ರಶ್ನಿಸಿದರು.
ಮುಖ್ಯಾಧಿಕಾರಿ ಮಾಲಿನಿ ಅವರು ಅದರ ದಾಖಲೆಯನ್ನು ಪರಿಷ್ಕರಿಸುತ್ತೇವೆ. ಅವುಗಳನ್ನು ಕಚೇರಿಯಲ್ಲಿ ನೋಡಬಹುದು ಮತ್ತು ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದರು.
ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ, ಪ.ಪಂ.ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ರಾಮದಾಸ ಶೆಣೈ, ರವಿಪ್ರಕಾಶ್, ಮಂಜುನಾಥ ಕಲ್ಲಕಟ್ಟ, ಲೋಕನಾಥ ಶೆಟ್ಟಿ ಕೊಲ್ಯ, ಚಂದ್ರಕಾಂತಿ ಶೆಟ್ಟಿ, ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ, ಸುನಿತಾ ಕೋಟ್ಯಾನ್, ಗೀತಾ ಪುರಂದರ, ಲತಾ ಅಶೋಕ್, ಸಂಧ್ಯಾ ಮೋಹನ್, ಇಂದಿರಾ ಅಡ್ಡಾಳಿ, ಅಬ್ಬೋಕರೆ ವಿ., ಎಂಜಿನಿಯರ್ ಶ್ರೀಧರ್, ರತ್ನಾ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here