ವಿಟ್ಲ : ವಿಟ್ಲ ಪೇಟೆಯ ವಿಟ್ಲ ಪುತ್ತೂರು ರಸ್ತೆಯ ಬದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಚಂದ್ರನಾಥ ಸ್ವಾಮಿಯ ಬಸದಿಯ ಭೂಮಿಯನ್ನು ಅತಿಕ್ರಮಣಕ್ಕೆ ಯತ್ನಿಸಲಾಗುತ್ತಿದೆ. ಮಾತ್ರವಲ್ಲ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಕಾಮಗಾರಿ ಆರಂಭಿಸಲಾಗಿದೆ. ನ್ಯಾಯಾಲಯದಲ್ಲಿ ಇದಕ್ಕೆ ಸಂಬಂಧಪಟ್ಟ ವ್ಯಾಜ್ಯ ನಡೆಯುತ್ತಿರುವುದರಿಂದ ಈ ಕಾಮಗಾರಿ ಮುಂದುವರಿಸುವುದಕ್ಕೆ ವಿರೋಧವಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮಕೈಗೊಳ್ಳಬೇಕಾಗಿ ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಬಂಟ್ವಾಳ ತಹಶೀಲ್ದಾರ್, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಹಾಗೂ ವಿಟ್ಲ ಪಟ್ಟಣ ಪಂಚಾಯಿತಿಗೆ ಈ ಮನವಿಯ ಪ್ರತಿಯನ್ನು ಕಳುಹಿಸಲಾಗಿದೆ. ಮನವಿಯಲ್ಲಿ ಹೀಗಿದೆ. ಕೆಲವು ವರ್ಷಗಳ ಹಿಂದೆ ಅನ್ಯಧರ್ಮೀಯ ವ್ಯಕ್ತಿಯೊಬ್ಬರು ಬಸದಿಯ ಅರ್ಚಕರನ್ನು ದುರುಪಯೋಗಪಡಿಸಿಕೊಂಡು ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ತಾತ್ಕಾಲಿಕ ಕಟ್ಟಡವನ್ನು ನಿರ್ಮಿಸಿ ವ್ಯಾಪಾರವನ್ನೂ ನಡೆಸುತ್ತಿದ್ದರು. ಬಸದಿಯ ಆಡಳಿತ ಮಂಡಳಿಯ ಗಮನಕ್ಕೆ ಬಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಪ್ರಸ್ತುತ ಇನ್ನೊಬ್ಬರು ಈ ಸ್ಥಳವನ್ನು ಲೀಸ್‌ಗೆ ಪಡೆದುಕೊಂಡಿದ್ದೇವೆ ಎಂದು ವಿಟ್ಲ ಪಟ್ಟಣ ಪಂಚಾಯಿತಿಯಿಂದ ಪರವಾನಿಗೆ ಪಡೆಯದೇ ಜೇಸಿಬಿ ಮೂಲಕ ಭೂಮಿಯನ್ನು ಅಗೆದು, ಕಟ್ಟಡ ನಿರ್ಮಿಸಲು ಆರಂಭಿಸಿದ್ದರು. ಕಪ್ಪುಕಲ್ಲನ್ನು ಒಡೆಯಲು ಸ್ಫೋಟಕ ಬಳಸಿ, ಸ್ಫೋಟಗೊಂಡಾಗ ಕಲ್ಲು ಹತ್ತಿರದ ಮನೆಗಳಿಗೆ, ವ್ಯಾಪಾರಿಗಳ ಮೇಲೆ ಬಿದ್ದು ದೂರು ನೀಡಿದ್ದರು. ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ತೋಡಿದ ಅಡಿಪಾಯದಿಂದ ಬೃಹತ್ ಕೆರೆ ನಿರ್ಮಾಣವಾಗಿತ್ತು. ಇದು ವಿಟ್ಲದ ಜನತೆಯಲ್ಲಿ ಭಯದ ವಾತಾವರಣವನ್ನುಂಟು ಮಾಡಿತ್ತು.
ಕಳೆದ ವರ್ಷವೂ ಜೆಸಿಬಿ ಮೂಲಕ ಮಾಡಿದ ಬೃಹದಾಕಾರದ ಹೊಂಡದ ಪರಿಣಾಮ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡ ಕುಸಿದು ಬೀಳುವ ಸನ್ನಿವೇಶವುಂಟಾಗಿತ್ತು. ಲೋಕೋಪಯೋಗಿ ಇಲಾಖೆಯ ಅಕಾರಿಗಳು ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಆದುದರಿಂದ ಅನಧಿಕೃತವಾದ ಈ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ವಿಹಿಂಪ ಮನವಿ ಸಲ್ಲಿಸಿ, ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಯವರಲ್ಲಿ ಆಗ್ರಹಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here