ಜೀವನದಲ್ಲಿ ಇತರರಿಗೆ ತೊಂದರೆ ಕೊಡದೇ, ನಾಲ್ಕು ಜನರಿಗೆ ಹಿತವಾಗುವ ಕಾರ್ಯವನ್ನು ಸಮಾಜ ಒಂದಲ್ಲ ಒಂದು ದಿನ ಗುರುತಿಸಿ ಗೌರವಿಸುತ್ತದೆ. ನೂರಾರು ಜನರ ಸಮಕ್ಷಮದಲ್ಲಿ ಸಿಗುವ ಇಂತಹ ಗೌರವದ ಕ್ಷಣ ಅವಿಸ್ಮರಣೀಯವಾಗಿರುತ್ತದೆ ಎಂದು ಕ್ಯಾಂಪ್ಕೋ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಅವರು ಪುಣಚ ಕಲ್ಪವೃಕ್ಷ ಫ್ರೆಂಡ್ಸ್, ಆದರ್ಶ ಫ್ರೆಂಡ್ಸ್ ವತಿಯಿಂದ ಪುಣಚ ಶ್ರೀಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ಪರಿಯಾಲ್ತಡ್ಕದಲ್ಲಿ ನಡೆದ ೩೭ನೇ ಶಾರದೋತ್ಸವದ ಸಂದರ್ಭದಲ್ಲಿ ತಾ.ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಹಾಗೂ ಮೂವರು ಸಾಧಕರನ್ನು ಸನ್ಮಾನಿಸಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಶ್ಮೀರದಲ್ಲಿದ್ದ 370ನೇ ವಿಧಿ ರದ್ದತಿ ದೇಶ ಸ್ವಾತಂತ್ರ್ಯ ಬಳಿಕ ದೇಶದಲ್ಲಾದ ಗುರುತರ ಮೈಲಿಗಲ್ಲು. ಭಾರತ ಜಗತ್ತಿನ ನಡುವೆ ಸದೃಢವಾಗಿ ಬೆಳೆಯುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ವಿಟ್ಲ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಅರುಣ್ ವಿಟ್ಲ, ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ರಮೇಶ್ ನಾಯ್ಕ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಈ ಸಾಲಿನ ತಾ.ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಪುಣಚ ದೇವಿನಗರ ಶ್ರೀದೇವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಗಂಗಮ್ಮ ಮತ್ತು ತಾ.ಮಟ್ಟದ ಉತ್ತಮ ಸಾಧಕ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಭಾಸ್ಕರ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ದೈವ ನರ್ತಕ ಮೋನಪ್ಪ ಅಜಿಲ ಸಂಕೇಶ, ಪುಣಚ ಅಂಚೆಪಾಲಕ ತೀರ್ಥಾನಂದ ಬಾಳೆಕುಮೇರಿ, ಹಿರಿಯ ದರ್ಜಿ ಬಾಬು ಗೌಡ ಗುರ್ಮೆ ಅವರಿಗೆ ಗ್ರಾಮ ಗೌರವ ನೀಡಲಾಯಿತು.
ರಾಮಕೃಷ್ಣ ಮೂಡಂಬೈಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿತೀಶ್ ದೇವಿನಗರ ವಂದಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಸ್ಥಾಪನೆಗೊಂಎ ಪುಣಚ ಕಲ್ಪವೃಕ್ಷ ಫ್ರೆಂಡ್ಸ್ ಸಂಘಟನೆ ಉದ್ಘಾಟನೆಗೊಂಡಿತು.
ಸಭೆಯ ಬಳಿಕ ಮಂಗಳೂರಿನ ಸುಸ್ವರ ಸಂಗೀತ ಬಳಗದವರಿಂದ ಗಾಯನ, ನೃತ್ಯ, ಹಾಸ್ಯ ತುಣುಕುಗಳ ವೈವಿಧ್ಯಮಯ ರಸಮಂಜರಿ ಪ್ರದರ್ಶನಗೊಂಡಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here