ವಿಟ್ಲ: ಕ್ಯಾಂಪ್ಕೋ ಸಹಕಾರಿ ಸಂಸ್ಥೆಯ ಮಾಜಿ ಅಧ್ಯಕ್ಷ, ಕೆಪಿಎಸ್‌ಸಿ ಮಾಜಿ ಸದಸ್ಯ ಎಸ್. ಆರ್. ರಂಗಮೂರ್ತಿ, ಕ್ಯಾಂಪ್ಕೋ ಸಂಸ್ಥೆಯ ಹಾಲಿ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅವರ ಮಾತೃಶ್ರೀ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಪುಣಚ ದಿ. ರಮೇಶ್ವಂದ್ರ ನಾಯಕ್ ಅವರ ಧರ್ಮಪತ್ನಿ ವನಿತಾದೇವಿ ಎಸ್.ಆರ್.(೮೩) ಅವರು ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತುರ್ತು ಪರಿಸ್ಥಿಯ ಸಮಯದಲ್ಲಿ ಪತಿ ಬಂಧನಕ್ಕೊಳಗಾಗಿದ್ದರೂ, ಊರಲ್ಲಿ ಎದುರಾದ ಪರಿಸ್ಥಿತಿಗಳನ್ನು ದಿಟ್ಟತನದಿಂದ ನಿಭಾಯಿಸಿದ ವನಿತಾದೇವಿ, ಮಕ್ಕಳನ್ನೂ ಸಹ ರಾಷ್ಟ್ರ ಕಾರ್ಯಗಳನ್ನು ಮಾಡಲು ಪ್ರೇರೇಪಿಸಿದ್ದರು.ಸಂಘದ ಬಗ್ಗೆ ಒಲವುಳ್ಳ, ಸಂಘದ ಕಾರ್ಯ ಮಾಡುತ್ತಿದ್ದ ಕಾರ್ಯಕರ್ತರಿಗೆ ಆಶ್ರಯ ನೀಡಿದ್ದರು. ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.
ಅಂತಿಮದರ್ಶನ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಡಾ. ಪಿ.ವಾಮನ ಶೆಣೈ, ಸಹಕಾರ ಭಾರತಿ ಪ್ರಮುಖರಾದ ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಪದ್ಮನಾಭ ಕೊಂಕೋಡಿ, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಪುತ್ತೂರು ಶಾಸಕ ಸಂಜೀವ ಮಠಂದೂರು ಸಹಿತ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು. ಪುಣಚದಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನಡೆಲಾಯಿತು.