Wednesday, April 17, 2024

ರಜತ ಸಂಭ್ರಮದ ಸಿದ್ಧತೆಯಲ್ಲಿ ಸಂಚಯಗಿರಿ-ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ

ಬಂಟ್ವಾಳ: ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ಸಂಚಯಗಿರಿ-ಬಂಟ್ವಾಳ ಈ ಅವಳಿ ಸಂಸ್ಥೆಗಳು ಇದೀಗ ರಜತ ಸಂಭ್ರಮದ ಸಿದ್ಧತೆಯಲ್ಲಿದ್ದು, ಇದರ ಭಾಗವಾಗಿ ಅ. 12ರಂದು ಬೆಳಿಗ್ಗೆ 11ಕ್ಕೆ “ಮೌಖಿಕ ಇತಿಹಾಸ ದಾಖಲೀಕರಣ ಕಾರ್ಯಾಗಾರ”ವು ಕೇಂದ್ರದ ಸಭಾಭವನದಲ್ಲಿ ನಡೆಯಲಿದೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಂ ಪೂಜಾರಿ ತಿಳಿಸಿದ್ದಾರೆ.

ಅವರು ಗುರುವಾರ ಸಂಜೆ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತನ್ನ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದ.ಕ. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ವಾಸುದೇವ ಕಾಮತ್ ಅವರು ಕಾರ್ಯಾಗಾರವನ್ನು ಉದ್ಘಾಟಿಸುವರು. ಕನ್ನಡ ಮತ್ತು ತುಳು ಭಾಷಾ ಸಂಸ್ಕೃತಿಕ ಯುಎಇ ರಾಯಬಾರಿ ಸರ್ವೋತ್ತಮ ಶೆಟ್ಟಿ ಹಾಗೂ ಖಾಸಗಿ ಸುದ್ದಿ ವಾಹಿನಿಯ ಪ್ರವೀಣ್ ತಾವ್ರೋ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಕಾರ್ಯಾಗಾರದಲ್ಲಿರುವ ನಡೆಯುವ ಮೌಖಿಕ ಇತಿಹಾಸವನ್ನು ದಾಖಲಿಸಿ, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳುವ ಚಿಂತನೆಯಿದ್ದು, ಇದಕ್ಕೆ ಪೂರಕವಾಗಿ ಅ. ೧೨ರಂದು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ಎಂಬ ಅವಳಿ ಸಂಸ್ಥೆಗಳು ಬಂಟ್ವಾಳದ ಸಂಚಯಗಿರಿಯಲ್ಲಿ 21 ಜನವರಿ 1995ರಂದು ಅಸ್ತಿತ್ವಕ್ಕೆ ಬಂದು ಇದೀಗ ರಜತ ಸಂಭ್ರಮದ ಸಿದ್ಧತೆಯಲ್ಲಿದೆ. ಕೇಂದ್ರವು ನಿರಂತರವಾಗಿ ಸ್ಥಳೀಯ ಚರಿತ್ರೆ, ಜನಪದ ಸಾಹಿತ್ಯ-ಸಂಸ್ಕೃತಿ, ಪ್ರಾದೇಶಿಕ ಅಧ್ಯಯನ ಹಾಗೂ ಭೌತಿಕ ಸಂಸ್ಕೃತಿಯ ಕುರಿತು ಸತತವಾದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. ಇದೀಗ ಕೇಂದ್ರವು ರಾಣಿ ಅಬ್ಬಕ್ಕಳ ಬದುಕಿನ ಸಮಗ್ರ ಚಿತ್ರಣವನ್ನು ನೀಡುವ ರಾಣಿ ಅಬ್ಬಕ್ಕ ಕಲಾ ಗ್ಯಾಲರಿ, ಕರಾವಳಿ ಕರ್ನಾಟಕದ ಪ್ರಾದೇಶಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ತುಳು ಬದುಕು ವಸ್ತು ಸಂಗ್ರಹಾಲಯ, ತುಳು ನಾಡು ನುಡಿಯ ಅಧ್ಯಯನಕ್ಕೆ ಪೂರಕವಾದ ಎಸ್.ಯು. ಪಣಿಯಾಡಿ ಗ್ರಂಥಾಲಯ ಮತ್ತು ನಾಣ್ಯ ಶಾಸ್ತ್ರ ವಿಭಾಗವನ್ನು ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
1995ರಿಂದ ನಿರಂತರವಾಗಿ ೨೫ ವರ್ಷದಿಂದ ವಿಚಾರ ಗೋಷ್ಠಿ, ಕಾರ್ಯಾಗಾರ, ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಇತಿಹಾಸ ನಿವೇಶನ ದರ್ಶನ, ವಸ್ತು ಸಂಗ್ರಾಹಕರ ಸಮಾವೇಶ, ಪುಸ್ತಕ ಪ್ರಕಟಣೆ, ಸ್ಮಾರಕಗಳ ಸಂರಕ್ಷಣೆ, ಪರಂಪರೆ ಉಳಿಸಿ ಕಾರ್ಯಕ್ರಮ, ಕಣ್ಮರೆಯಾಗುತ್ತಿರುವ ತುಳು ಬದುಕಿನ ವಸ್ತು ಪ್ರದರ್ಶನ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಇದೀಗ ದೇಶ ವಿದೇಶದ ಅಧ್ಯಯನಾಸಕ್ತ ವಿದ್ವಾಂಸರು, ಸಂಶೋಧಕರು, ವಿದ್ಯಾರ್ಥಿಗಳು ನಿರಂತರವಾಗಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ವಿಶಿಷ್ಟ ಸಂಸ್ಕೃತಿ ಗ್ರಾಮ ನಿರ್ಮಾಣದ ಕಾರ್ಯಕ್ಕೆ ಚಾಲನೆ:
ಬೆಳ್ಳಿ ಸಂಭ್ರಮದ ಸಂದರ್ಭದಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಕೇಂದ್ರವು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುತ್ತದೆ. ಇದೀಗ ಮುಖ್ಯವಾಗಿ ರಾಣಿ ಅಬ್ಬಕ್ಕನ ಬದುಕನ್ನು ಪ್ರತಿಬಿಂಬಿಸುವ ರಾಷ್ಟ್ರದ ಏಕೈಕ ಕಲಾ ಗ್ಯಾಲರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಗ್ಯಾಲರಿಗೆ ಹೊಸ ರೂಪವನ್ನು ನೀಡುವ ಸಲುವಾಗಿ ಚಿತ್ರಕಲಾ ಶಿಬಿರವೊಂದು ಆಯೋಜನೆ ಗೊಳ್ಳಲಿದೆ. ಬೆಳ್ಳಿ ಸಂಚಿ ಎಂಬ ಸಂಸ್ಮರಣಾ ಗ್ರಂಥವೊಂದು ಸಿದ್ಧಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗಾಗಿ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವ ಉದ್ದೇಶವಿದೆ. ಅಲ್ಲದೆ ಕೇಂದ್ರದ ದೀರ್ಘಕಾಲದ ಕನಸಾದ ವಿಶಿಷ್ಟ ಸಂಸ್ಕೃತಿ ಗ್ರಾಮವೊಂದರ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡುವ ಉದ್ದೇಶವನ್ನು ಕೇಂದ್ರವು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.
‘ಪುಸ್ತಕ ಬಿಕ್ಷೆ’ ಎಂಬ ಅಭಿಯಾನ:
ಇದೀಗ ಕೇಂದ್ರದ ರಜತ ಸಂಭ್ರಮಾಚರಣೆಗೆ ಚಾಲನೆ ನೀಡಿ ‘ಪುಸ್ತಕ ಬಿಕ್ಷೆ’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ತಮ್ಮಲ್ಲಿ ಹೆಚ್ಚುವರಿಯಾಗಿರುವ ಹಳೆಯ ಅಥವಾ ಹೊಸ ಪುಸ್ತಕಗಳನ್ನು/ ಸಂಶೋಧನ ಗ್ರಂಥಗಳನ್ನು/ ದಾಖಲಾತಿಗಳನ್ನು/ಕಡತಗಳನ್ನು ಅಥವಾ ಇನ್ನಿತರೆ ಆಕರಗಳನ್ನು (ನಾಡು ನುಡಿಗೆ ಸಂಬಂಧಪಟ್ಟ ಯಾವುದೇ ಭಾಷೆಯ ಪುಸ್ತಕಗಳನ್ನು) ಅಧ್ಯಯನ ಕೇಂದ್ರಕ್ಕೆ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಸಂಚಯಗಿರಿ, ಅಂಚೆ ಕಛೇರಿ ರಸ್ತೆ, ಬಿ.ಸಿ ರೋಡು, ಬಂಟ್ವಾಳ, ದ.ಕ, ೫೭೪೨೧೯. ದೂರವಾಣಿ: ೯೪೪೯೧೬೫೭೬೨, ೯೪೮೦೪೮೬೩೯೮ ಅನ್ನು ಸಂಕಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತುಕಾರಾಂ ಅವರ ಪತ್ನಿ ಡಾ. ಆಶಾಲತಾ ಎಸ್. ಸುವರ್ಣ, ಕಾಸರಗೋಡು ಜಿಲ್ಲಾ ಇತಿಹಾಸ ಉಪನ್ಯಾಸಕ ಸಂಘದ ಸಂಚಾಲಕ ಪ್ರೊ. ರಾಜೇಂದ್ರ ರೈ, ಬಂಟ್ವಾಳದ ಪ್ರಭಾರ ಪ್ರಾಂಶುಪಾಲ ಪ್ರೊ. ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಪ್ರಭು ಬಂಟ್ವಾಳ್ಕರ್, ನಿವೃತ್ತ ಶಿಕ್ಷಕರಾದ ಮಹಾಬಲೇಶ್ವರ ಹೆಬ್ಬಾರ್, ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು.

More from the blog

ಬಂಟ್ವಾಳದ ನರಿಕೊಂಬು ಗ್ರಾಮದಲ್ಲಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

2024 ರ ಎ. 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಎಂಬ...

ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ಆತ್ಮಹತ್ಯೆ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಮಹಿಳೆಯೊಬ್ಬರು ತಂದೆ ಹಾಗೂ ಪುತ್ರಿಯ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು‌ ನಡೆದಿದೆ. ಕುಮ್ಡೇಲು ನಿವಾಸಿ ಉಮೇಶ್ ಬೆಳ್ಚಡರ ಪತ್ನಿ...

ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡ ಕ್ಷೇತ್ರದ ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ನೇಮಕ

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ಅವರನ್ನು ನೇಮಕ ಮಾಡಲಾಗಿದೆ.    

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...