ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಂದ್ರಭಾಗ ಬಿ.ಸಿ.ರೋಡನ್ನು ಸುಂದರ ಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಸುಮಾರು 15 ಕೋ.ರೂ.ವೆಚ್ಚದಲ್ಲಿ ನಾರಾಯಣ ಗುರು ವೃತ್ತದಿಂದ ಕೈಕಂಬದವರೆಗೆ ಬಿ.ಸಿ.ರೋಡು ನಗರ ಸುಂದರೀಕರಣ ಯೋಜನೆ ಕೈಗೆತ್ತಿಕೊಂಡಿದ್ದು, ಇದೀಗ ಯೋಜನೆಯ ನೀಲನಕಾಶೆ ಸಿದ್ಧಗೊಂಡಿದೆ.
ಅ.21ರಂದು ಯೋಜನೆಗೆ ಚಾಲನೆ ದೊರಕಲಿದ್ದು, ಜತೆಗೆ ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು ಸಂಸದ ನಳಿನ್‌ಕುಮಾರ್ ಕಟೀಲು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಜತೆ ಚರ್ಚೆಯನ್ನೂ ನಡೆಸಿದ್ದಾರೆ. ಹೀಗಾಗಿ ಸುಂದರೀಕರಣ ಕಾರ್ಯವು ಯಾವ ರೀತಿಯಲ್ಲಿ ನಡೆಯಲಿದೆ ಎಂಬುದನ್ನು ನೀಲನಕಾಶೆ ವಿವರಿಸುತ್ತದೆ.
ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿ ಸರ್ಕಲ್ ನಿರ್ಮಾಣ, ಫ್ಲೈ ಓವರ್‌ನ ತಳಭಾಗಕ್ಕೆ ಇಂಟರ್‌ಲಾಕ್ ಅಳವಡಿಕೆ, ಅತ್ಯಾಧುನಿಕ ಶೈಲಿಯ ಶೌಚಾಲಯಗಳು, ಸರ್ವೀಸ್ ರಸ್ತೆಗಳ ಅಭಿವೃದ್ಧಿ, ಅನಧಿಕೃತ ನಿರ್ಮಾಣಗಳ ತೆರವು, ಬೀದಿದೀಪಗಳ ಅಳವಡಿಕೆ, ಗಾರ್ಡನ್ ನಿರ್ಮಾಣ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಈ ಯೋಜನೆಯು ಒಳಗೊಂಡಿರುತ್ತದೆ.
ಇಡೀ ನಗರವನ್ನು ಒಳಗೊಂಡಂತೆ ಸಿಸಿ ಕ್ಯಾಮರಾ ಸೌಕರ್ಯಗಳ ಮೂಲಕ ಕಾನೂನು ಚೌಕಟ್ಟು ಮೀರುವವರ ನಿಯಂತ್ರಣಕ್ಕೆ ಯೋಜನೆ ನೆರವಾಗಲಿದೆ. ಅಭಿವೃದ್ಧಿಯ ವ್ಯಾಪ್ತಿಯಲ್ಲಿ 5 ಕಡೆಗಳಲ್ಲಿ ಬಸ್ ಬೇ ಸೌಕರ್ಯ, ದ್ವಿಚಕ್ರ, ಆಟೊ ಪಾಕಿಂಗ್ ವ್ಯವಸ್ಥೆಗಳು ಒಳಗೊಂಡಿರುತ್ತದೆ.
ನಗರ ಸುಂದರೀಕರಣ ಯೋಜನೆಯ ಕುರಿತು ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಜತೆಗೆ ಜಿಲ್ಲೆಯ ಹಲವು ಕಾರ್ಪೊರೇಟ್ ಸಂಸ್ಥೆಗಳು ಆರ್ಥಿಕ ನೆರವನ್ನೂ ನೀಡಲು ಮುಂದಾಗಿದೆ. ಜತೆಗೆ ರಾಜ್ಯ ಮುಖ್ಯಮಂತ್ರಿ ಬಿಎಸ್‌ವೈ ಅವರು 5 ಕೋ.ರೂ.ಗಳ ವಿಶೇಷ ಅನುದಾನದ ಬಿಡುಗಡೆಗೂ ಆದೇಶಿಸಿದ್ದಾರೆ ಎಂದು ಶಾಸಕರು ವಿವರಿಸಿದ್ದಾರೆ.
ಅ.21ರಂದು ಯೋಜನೆಗೆ ಚಾಲನೆ:
ಬಿ.ಸಿ.ರೋಡು ನಗರವನ್ನು ಸುಂದರಗೊಳಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ನಗರ ಸುಂದರೀಕರಣ ಯೋಜನೆಗೆ ಅ. ೨೧ರಂದು ಚಾಲನೆ ದೊರಕಲಿದ್ದು, ಅದೇ ದಿನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯ ಕಾರ್ಯಕ್ರಮವೂ ನಡೆಯಲಿದೆ. ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಪಾಲ್ಗೊಳ್ಳಲಿದ್ದಾರೆ.
ರಾಜೇಶ್ ನಾಕ್ ಉಳಿಪ್ಪಾಡಿಗುತ್ತು
ಶಾಸಕರು, ಬಂಟ್ವಾಳ
ಅ.21: ಶಿಲಾನ್ಯಾಸ ಸಮಾರಂಭ
ಬಂಟ್ವಾಳ, ಅ. ೧೫: ಬಿ.ಸಿ.ರೋಡು ಸುಂದರೀಕರಣ ಯೋಜನೆಯ ಶಿಲಾನ್ಯಾಸ ಸಮಾರಂಭ ಅ. 21ರಂದು ಬೆಳಗ್ಗೆ 10ಕ್ಕೆ ಬಿ.ಸಿ.ರೋಡು ಮೇಲ್ಸೆತುವೆಯ ತಳಭಾಗದಲ್ಲಿ ನಡೆಯಲಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶಿಲಾನ್ಯಾಸ ನೆರವೇರಿಸಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಸಂಸದ ನಳಿನ್‌ಕುಮಾರ್ ಕಟೀಲು ಅವರು ಭಾಗವಹಿಸಲಿದ್ದಾರೆ.