ಬಂಟ್ವಾಳ: ಸರಕಾರದ ಆದೇಶವಿದೆ ಎಂದು ಪುರಸಭೆಯು ಪ್ಲಾಸ್ಟಿಕ್ ಕೈ ಚೀಲಗಳನ್ನು ಬ್ಯಾನ್ ಮಾಡುತ್ತಿದ್ದು, ಅದರ ಬದಲಾಗಿ ವ್ಯಾಪಾರಿಗಳು ಪರ್ಯಾಯವಾಗಿ ಯಾವುದನ್ನು ಉಪಯೋಗಿಸಲಿ ಎಂಬುದನ್ನು ಕೂಡ ತಿಳಿಸಬೇಕು ಎಂದು ಪುರಸಭಾ ವ್ಯಾಪ್ತಿಯ ವ್ಯಾಪಾರಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿದರು.
ಬಂಟ್ವಾಳ ಪುರಸಭೆಯು ಸೋಮವಾರ ಬಿ.ಸಿ.ರೋಡಿನಲ್ಲಿರುವ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಫ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸರಕಾರದ ಆದೇಶವನ್ನು ಜಾರಿಗೆ ತರುವ ಕುರಿತು ಪುರಸಭಾ ಅಧಿಕಾರಿಗಳು ತಿಳಿಸಿದಾಗ, ಅಧಿಕಾರಿಗಳ ವಿರುದ್ಧ ಏಕಾಏಕಿ ಆಕ್ರೋಶ ವ್ಯಕ್ತಪಡಿಸಿದರು.


ಫ್ಲಾಸ್ಟಿಕ್ ನೀಡುವ ವ್ಯಾಪಾರಿಗಳಿಗೆ ಬದಲು ಅದನ್ನು ಉಪಯೋಗಿಸುವವರ ವಿರುದ್ಧವೂ ಕ್ರಮಕೈಗೊಳ್ಳಿ ಎಂದು ವ್ಯಾಪಾರಿಗಳು ಸಲಹೆ ನೀಡಿದಾಗ, ಪುರಸಭಾ ಎಂಜಿನಿಯರ್ ಯಾಸ್ಮಿನ್ ಸುಲ್ತಾನ ಅವರು ಇಬ್ಬರ ವಿರುದ್ಧವೂ ಕ್ರಮಕೈಗೊಳ್ಳುತ್ತೇನೆ ಎಂದರು. ನಮ್ಮ ಗ್ರಾಹಕರು ಕೇಳಿದಾಗ ಇಲ್ಲ ಎನ್ನಲು ಆಗುವುದಿಲ್ಲ, ಅವರಲ್ಲಿ ನಿರ್ದಾಕ್ಷಿಣ್ಯವಾಗಿ ಮಾತನಾಡಿದರೆ ನಾವು ವ್ಯಾಪಾರವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಪುರಸಭಾ ವ್ಯಾಪ್ತಿಯಲ್ಲಿ ಕಸದ ಬುಟ್ಟಿಗಳನ್ನು ತೆಗೆದಿರುವುದರಿಂದ ಪ್ಲಾಸ್ಟಿಕ್ ಸಮಸ್ಯೆ ಸೃಷ್ಟಿಯಾಗಿದೆ. ಹೀಗಾಗಿ ಮತ್ತೆ ಕಸದ ಬುಟ್ಟಿಗಳನ್ನು ಅಳವಡಿಸಿದರೆ ಸಮಸ್ಯೆ ಹತೋಟಿಗೆ ಬರುತ್ತದೆ ಎಂದು ವ್ಯಾಪಾರಿಗಳು ಸಲಹೆ ನೀಡಿದಾಗ, ಪುರಸಭಾ ಕಂದಾಯಾಧಿಕಾರಿ ಶಿವ ನಾಯ್ಕ ಅವರು ಕಸದ ಬುಟ್ಟಿಗಳನ್ನು ಅಳವಡಿಸದಂತೆ ಸರಕಾರದ ಆದೇಶದ ಕುರಿತು ಸ್ಪಷ್ಟಪಡಿಸಿದರು.
ಕಸ ವಿಲೇವಾರಿ ಸಮರ್ಪಕವಾಗಿ ಆಗದೇ ಇರುವ ಕುರಿತು ಕೂಡ ಆಕ್ರೋಶಗಳು ಕೇಳಿಬಂತು. ದಂಡ ವಿಧಿಸುವುದಾದರೆ ಎಲ್ಲರ ವಿರುದ್ಧವೂ ವಿಧಿಸಬೇಕು. ಒಂದೆರಡು ವ್ಯಾಪಾರಿಗಳಿಗೆ ಮಾತ್ರ ಅಲ್ಲ. ಜತೆಗೆ ಪ್ಲಾಸ್ಟಿಕ್ ಪುನರ್ ಬಳಕೆಯ ಘಟನೆಗಳನ್ನು ಆರಂಭಿಸುವಂತೆ ಸಲಹೆ ನೀಡಿದರು.
ಪ್ಲಾಸ್ಟಿಕ್ ದುಷ್ಪರಿಣಾಮದ ಕುರಿತು ಪರಿಸರವಾದಿ ಪ್ರೋ| ರಾಜಮಣಿ ರಾಮಕುಂಜ ಅವರು ಮಾತನಾಡಿ, ಪ್ಲಾಸ್ಟಿಕ್ ಬೇಕೋ-ಬೇಡವೋ ಸಂದಿಗ್ದ ಕಾಲಘಟ್ಟವಿದ್ದು, ಅದರ ದುಷ್ಪರಿಣಾಮದ ಕುರಿತು ಎಲ್ಲರೂ ಅರಿತುಕೊಳ್ಳಬೇಕಿದೆ. ಒಮ್ಮೆ ಪ್ಲಾಸ್ಟಿಕ್‌ನ ಅಂಶಗಳನ್ನು ನಮ್ಮ ದೇಹವನ್ನು ಸೇರಿಕೊಂಡರೆ ಮತ್ತೆ ಅದು ಹೊರಗೆ ಹೋಗುವುದಿಲ್ಲ. ಕ್ಯಾನ್ಸರ್ ಖಾಯಿಲೆಗೆ 75 ಶೇ. ಪ್ಲಾಸ್ಟಿಕ್ ಅಂಶಗಳೇ ಕಾರಣವಾಗಿದೆ ಎಂದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಮೆಲ್ಕಾರ್, ವೈದ್ಯ ಡಾ| ವಸಂತ ಬಾಳಿಗಾ, ವರ್ತಕರ ಪ್ರತಿನಿಧಿ ಶ್ರೀನಿವಾಸ ಬಾಳಿಗಾ, ದಾಮೋದರ ಬಿ.ಎಂ., ಪುರಸಭಾ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಉಪಸ್ಥಿತರಿದ್ದರು. ಪುರಸಭೆಯ ಸಿಬಂದಿ ಉಮಾವತಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here