ಉಜಿರೆ: ಅರಣ್ಯ ನಾಶ ಹಾಗೂ ಕಾಡಿನಲ್ಲಿ ಆಹಾರದ ಕೊರತೆಯಿಂದ ಅನಿವಾರ್ಯವಾಗಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತವೆ. ಪ್ರಾಕೃತಿಕ ಅಸಮತೋಲನದಿಂದಾಗಿ ಹಾಗೂ ಅರಣ್ಯ ನಾಶದಿಂದ ಕಾಡು ಪ್ರಾಣಿಗಳಿಗೆ ಆಹಾರದ ಕೊರತೆಯಾಗುತ್ತಿದೆ. ಅರಣ್ಯ ಸಂರಕ್ಷಣೆಯೊಂದಿಗೆ ಕಾಡು ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ನೂರು ಹುಲಿಗಳ ಪಿಲಿ ನಲಿಕೆ ವೈಭವ ಹಾಗೂ ಕಾಡು ಪ್ರಾಣಿಗಳ ನೃತ್ಯವನ್ನು ವೀಕ್ಷಿಸಿ ಸಂತಸದಿಂದ ಅವುಗಳನ್ನು ಹರಸಿ ಮಾತನಾಡಿದರು.
ನೀವು ಬದುಕಿ, ನಮ್ಮನ್ನೂ ಬದುಕಲು ಬಿಡಿ ಎಂದು ಎಲ್ಲಾ ಕಾಡು ಪ್ರಾಣಿಗಳು ಹೆಗ್ಗಡೆಯವರಿಗೆ ಮೌಖಿಕ ಮನವಿ ಅರ್ಪಿಸಿದವು. ಹೆಗ್ಗಡೆಯವರು ಸಂತೋಷದಿಂದ ಎಲ್ಲಾ ಪ್ರಾಣಿಗಳಿಗೂ ಶುಭ ಹಾರೈಸಿದರು.
ಪಿಲಿ ನಲಿಕೆ ಸಂಯೋಜಕ ಹಾಗೂ ಸ್ವತಃ ಹುಲಿ ವೇಷಧಾರಿಯಾಗಿ ಖ್ಯಾತರಾದ ಮಂಗಳೂರಿನ ಮಿಥುನ್ ರೈ ಅವರ ಕಾಳಜಿಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ವಿಶೇಷವಾಗಿ ಯುವಜನತೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಬೆಳ್ತಂಗಡಿ ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದರು.
ಪಿಲಿನಲಿಕೆ ಸಂಯೋಜಕ ಮಿಥುನ್ ರೈ ಶುಭಾಶಂಸನೆ ಮಾಡಿದರು.
ಉಜಿರೆಯ ಎಸ್.ಡಿ.ಎಮ್. ಕಾಲೇಜಿನ ಲಲಿತಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಾಡು ಪ್ರಾಣಿಗಳ ನೃತ್ಯ ಸಂಯೋಜನೆ ಪ್ರೇಕ್ಷಕರ ವಿಶೇಷ ಮೆಚ್ಚುಗೆ ಹಾಗೂ ಅಭಿನಂದನೆಗೆ ಪಾತ್ರವಾಯಿತು.
ನವದುರ್ಗೆಯರು ಧರೆಗಿಳಿದು, ಮಹಿಷಾಸುರ ಮರ್ದನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಹೇಮಾವತಿ ವಿ, ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾವರ್ಮ, ಡಿ. ಶ್ರೇಯಸ್ ಕುಮಾರ್, ಕು. ಮಾನ್ಯ ಉಪಸ್ಥಿತರಿದ್ದರು.