ಬಂಟ್ವಾಳ: ಬಂಟ್ವಾಳ ತಾಲೂಕಿನಾದ್ಯಂತ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ತಾಲೂಕಿನ ಮಣಿನಾಲ್ಕೂರು ಗ್ರಾಮದ ಬಾಚಕೆರೆ ಆನಂದ ಶೆಟ್ಟಿ ಅವರ ಅಂಗಡಿಗೆ ಚರಂಡಿ ನೀರು ನುಗ್ಗಿ ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ.
ಧಾರಾಕಾರ ಮಳೆಗೆ ಚರಂಡಿಯ ನೀರು ನೇರವಾಗಿ ಅಂಗಡಿಗೆ ನುಗ್ಗಿದ್ದು, ಗೋಡೆ ಕುಸಿಯುವ ಜತೆಗೆ ಅಂಗಡಿಗೆ ಕಾಪಾಟುಗಳಿಗೆ ಹಾನಿಯಾಗುವ ಜತೆಗೆ ಇತರ ದಿನಸಿ ಸಾಮಾಗ್ರಿಗಳಿಗೆ ನೀರು ನುಗ್ಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.
ಅಂಗಡಿಗೆ ನುಗ್ಗಿದ್ದ ನೀರು ತಳಭಾಗದ ಅವರ ಮನೆಯ ಮಣ್ಣಿನ ಗೋಡೆಯ ಬದಿಗೂ ಬಂದಿದ್ದು, ಮನೆಯೂ ಅಪಾಯದಲ್ಲಿದೆ. ರಸ್ತೆ ಬದಿಯ ಚರಂಡಿಗೆ ಮಣ್ಣು ತುಂಬಿಸಿದ ಪರಿಣಾಮವಾಗಿ ಈ ಸ್ಥಿತಿ ಉಂಟಾಗಿದೆ ಎಂದು ಆನಂದ ಶೆಟ್ಟಿ ಬಾಚಕೆರೆ ಆರೋಪಿಸಿದ್ದಾರೆ.