(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ: ಮಹಾರಾಷ್ಟ್ರ ರಾಜ್ಯ ವಿಧಾನ ಸಭಾ ಚುನಾವಣೆ-2019 ಸ್ಪರ್ಧಾ ಕಣದಲ್ಲಿ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್ (ಐ) ಪಕ್ಷದ ಅಭ್ಯಥಿಯಾಗಿ ಸ್ಪರ್ಧಿಸಿರುವ ಬಿಲ್ಲವ ಸಮುದಾಯದ ಧುರೀಣ, ಬಿಎಂಸಿ ನಗರಸೇವಕ ಜಗದೀಶ್ ಕುಟ್ಟಿ ಅವಿನ್ ಕಚೇರಿಗೆ ಕಳೆದ ಗುರುವಾರ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಭೇಟಿಯನ್ನಿತ್ತು ಶುಭ ಕೋರಿದರು.
ಕ್ಷೇತ್ರದ ಚುನಾವಣಾ ವಿವರ ಹಾಗೂ ಮತದಾರರ ಮಾಹಿತಿ ಪಡೆದ ಚಂದ್ರಶೇಖರ ಪೂಜಾರಿ ಬೃಹನ್ಮುಂಬಯಿ ಮಹಾನಗರ ಪಾಲಿಕಾ ನಗರ ಸೇವಕರಾಗಿದ್ದು ಇಲ್ಲಿನ ತುಳು ಕನ್ನಡಿಗರ ಏಕೈಕ ಪ್ರತಿನಿಧಿಯಾಗಿ ಕಣಕ್ಕಿಳಿದಿರುವ ದ.ಕ ಜಿಲ್ಲೆಯ ಕಾರ್ಕಳ ತಾಲೂಕು ನಿಟ್ಟೆ ಮೂಲತಃ ಜಗದೀಶ್ ಅವಿನ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಹಾಗೂ ಜಗದೀಶ್ ಗೆಲುವಿಗೆ ಈ ಕ್ಷೇತ್ರದ ಸರ್ವರೂ ಒಗ್ಗಟ್ಟಿನಿಂದ ಶ್ರಮಿಸಿ ಭಾರೀ ಮತಗಳಿಂದ ಚುನಾಯಿಸುವಂತೆಯೂ ಚಂದ್ರಶೇಖರ ಎಸ್.ಪೂಜಾರಿ ಸಮಾಜ ಬಾಂಧವರಲ್ಲಿ ವಿನಂತಿಸಿದ್ದಾರೆ.
ರಾಷ್ಟ್ರದ ಆಥಿಕ ರಾಜಧಾನಿ ಮುಂಬಯಿ ಮಹಾನಗರದ ಇತಿಹಾಸದಲ್ಲಿ ಕನ್ನಡಿಗ ಬಂಧುಗಳು ಮೂಡಿಸಿದ ಹೆಜ್ಜೆ ಗುರುತುಗಳು ನಗರದ ಸಮಗ್ರ ಬೆಳವಣಿಗೆಯಲ್ಲಿ ನಿರ್ಣಾಯಕವಾದುದು. ರಾಜಕೀಯ, ಆಥಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಕನ್ನಡಿಗರು ತಮ್ಮ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದಾರೆ ಆದುದರಿಂದ ನಮ್ಮವರೇ ಆದ ಶಾಸಕರ ಅಗತ್ಯವಿದ್ದು ಮಹಾರಾಷ್ಟ್ರ ರಾಜ್ಯ ವಿಧಾನ ಸಭಾ ಚುನಾವಣೆ-2019 ಸ್ಪರ್ಧಾ ಕಣದಲ್ಲಿರುವ ಭಿವಂಡಿಯಲ್ಲಿ ಸ್ಪರ್ಧಿಸಿರುವ ಸಂತೋಷ್ ಮಂಜಯ್ಯ ಶೆಟ್ಟಿ ಸೇರಿದಂತೆ ತುಳುಕನ್ನಡಿಗ ಉಮೇದುದಾರರನ್ನು ಗೆಲ್ಲಿಸುವರೇ ಶ್ರಮಿಸುವಂತೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ ಜಯ ಸಿ.ಸುವರ್ಣ ಅವರೂ ಕೋರಿದ್ದಾರೆ.
ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷ ಶ್ರೀನಿವಾಸ ಆರ್.ಕರ್ಕೇರ, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಅಸೋಸಿಯೇಶನ್‌ನ ಅಂಧೇರಿ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಎಸ್.ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ತುಳುಕನ್ನಡಿಗ ಅಭ್ಯಥಿಗಳ ಗೆಲುವಿಗೆ ರಾಜನಾಥ್ ನಾಡರ್ (ಕನ್ಯಾಕುಮಾರಿ), ಮಾಜಿ ನಗರ ಸೇವಕ ರೋಹಿತ್ ಎಂ.ಸುವರ್ಣ ಶ್ರಮಿಸುತ್ತಿದ್ದು ಮತದಾರರೂ ಸಹಕರಿಸುವಂತೆ ವಿನಂತಿಸಿದ್ದಾರೆ.