ಬಂಟ್ವಾಳ: ರಾಜ್ಯ ಚುನಾವಣಾ ಆಯೋಗವು ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ-2020ರಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಎಲ್ಲಾ ಮತದಾರರು ಕಡ್ಡಾಯವಾಗಿ ಪರಿಶೀಲನೆ ಮಾಡುವುದು ಅಗತ್ಯವಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಮನವಿ ಮಾಡಿದ್ದಾರೆ.
ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಕುರಿತು ಸಾಕಷ್ಟು ಮಂದಿಗೆ ಮಾಹಿತಿ ಕೊರತೆಯಿದ್ದು, ನಾವು ಆ ಕಾರ್ಯವನ್ನು ಮಾಡಬೇಕಿಲ್ಲ ಎಂದು ಸಾಕಷ್ಟು ಮಂದಿ ತಪ್ಪು ತಿಳಿವಳಿಕೆ ಹೊಂದಿದ್ದಾರೆ. ಮತದಾನದ ಹಕ್ಕಿರುವ ಪ್ರತಿಯೊಬ್ಬರೂ ಪರಿಷ್ಕರಣೆಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕಿದೆ.
ಬಂಟ್ವಾಳ ತಾಲೂಕು ವ್ಯಾಪ್ತಿಗೆ ಬಂಟ್ವಾಳ, ಪುತ್ತೂರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರ ಗಳು ಬರುತ್ತಿದ್ದು, ಒಟ್ಟು ಸುಮಾರು 3 ಲಕ್ಷದಷ್ಟು ಮತದಾರರಿದ್ದಾರೆ. ಪರಿಷ್ಕರಣಾ ಕಾರ್ಯವು ಸೆ. 1ಕ್ಕೆ ಆರಂಭಗೊಂಡಿದ್ದು, ಈ ತನಕ ತಾಲೂಕಿನಲ್ಲಿ ಕೇವಲ ೨೫೦೦ರಷ್ಟು ಮತದಾರರು ಮಾತ್ರ ಪರಿಷ್ಕರಣೆ ನಡೆಸಿದ್ದಾರೆ. ಅ. 15ರವರೆಗೆ ಮಾತ್ರ ಅವಕಾಶವಿದ್ದು, ಅದರೊಳಗೆ ಎಲ್ಲಾ ಮತದಾರರು ಪರಿಷ್ಕರಣೆ ನಡೆಸಬೇಕಿದೆ.
ಮತದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ತಮ್ಮ ಮೊಬೈಲ್ ಮೂಲಕವೂ ಪರಿಷ್ಕರಣೆಗೆ ಆಯೋಗವು ಅವಕಾಶ ನೀಡಿದೆ. ಗೂಗಲ್ ಪ್ಲೆ ಸ್ಟೊರ್ ಮೂಲಕ ಓಟರ್ ಹೆಲ್ಪ್ಲೈನ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಬಳಿಕ ಅದರಲ್ಲಿ ಇವಿಪಿಯನ್ನು ಆಯ್ಕೆ ಮಾಡಿ ಮುಂದುವರಿಯಬೇಕಿದೆ.
ಮತದಾರರು ಪರಿಷ್ಕರಣೆ ನಡೆಸುವ ವೇಳೆ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತಿದ್ದು, ಅದನ್ನು ದಾಖಲಿಸಿ ಮುಂದುವರಿಯಬಹುದಾಗಿದೆ. ಇದರಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುವುದಕ್ಕೂ ಅವಕಾಶವಿದ್ದು, ಮತದಾರರ ಪರಿಷ್ಕರಣೆ ಪೂರ್ಣಗೊಂಡ ಬಳಿಕ ಮತದಾರರಿಗೆ ಆಯೋಗವು ಒಂದು ಸರ್ಟಿಫಿಕೇಟನ್ನು ಕೂಡ ಆ್ಯಪ್‌ನ ಮೂಲಕವೇ ನೀಡುತ್ತದೆ.
ಒಂದು ಮೊಬೈಲ್ ನ ಮೂಲಕ ಡೌನ್‌ಲೋಡ್ ಮಾಡಿದ ಆ್ಯಪ್ ಮೂಲಕ ಇತರ ಮತದಾರರು ಕೂಡ ತಮ್ಮ ಮೊಬೈಲ್ ಸಂಖ್ಯೆ ದಾಖಲಿಸಿ ಪರಿಷ್ಕರಣೆ ನಡೆಸಲು ಅವಕಾಶವಿದೆ. ಪ್ರಸ್ತುತ ಸರಳ ರೀತಿಯಲ್ಲಿ ಪರಿಷ್ಕರಣೆಗೆ ಅವಕಾಶವಿದ್ದು, ಹೀಗಾಗಿ ಈಗಲೇ ಪ್ರತಿಯೊಬ್ಬ ಮತದಾರರೂ ಪರಿಷ್ಕರಣೆ ನಡೆಸಬೇಕಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.