ದ.ಕ.ಜಿಲ್ಲಾ ಸರ್ವ ಶಿಕ್ಷಾ ಅಭಿಯಾನದ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರ ನೇತೃತ್ವದಲ್ಲಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಇವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ದ.ಕ ಜಿಲ್ಲಾ ಟಿಜಿಟಿಗಳ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಬಂಟ್ವಾಳ ಘಟಕದ ಅಧ್ಯಕ್ಷರಾದ ಶ್ರೀಮತಿ ಕೆ, ಕಾರ್ಯದರ್ಶಿ ಡಿಕ್ಸನ್ ಡಿಮೆಲ್ಲೋ, ಕೋಶಾಧಿಕಾರಿ ಪುಷ್ಪಾವತಿ, ಸದಸ್ಯರುಗಳಾದ ಸುಧಾಕರ ಶೆಟ್ಟಿ, ಹರೀಶ ಮೂಲ್ಯ, ಶಶಿಕಾಂತ, ಸತೀಶ್ ಕುಮಾರ್ ಉಪಸ್ಥಿತರಿದ್ದು, ಟಿಜಿಟಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮಾನ್ಯ ಸಚಿವರ ಗಮನಕ್ಕೆ ತಂದರು. ಧನಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಪ್ರಾಥಮಿಕ ಶಿಕ್ಷಣದ ಗುಣಮಟ್ಟದ ಸುಧಾರಣೆಯ ಬಗ್ಗೆಯೂ ಸದ್ರಿ ಟಿಜಿಟಿಗಳ ಜೊತೆಗೆ ಚರ್ಚಿಸಿದರು.
ಸುಮಾರು ಹದಿನಾಲ್ಕು ವರ್ಷಗಳಿಂದ ಟಿಜಿಟಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸುವುದರ ಜೊತೆಗೆ ನೇಮಕಾತಿ ಜಿಲ್ಲೆಯೊಳಗೇ ಉಳಿಸಿಕೊಡುವ ಬಗ್ಗೆಯೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಅಲ್ಲದೆ ಕಳೆದ ಒಂದೂವರೆ ವರ್ಷಗಳಿಂದ ಸರ್ವಶಿಕ್ಷಾ ಅಭಿಯಾನದ ಶಿಕ್ಷಕರು ಎದುರಿಸುತ್ತಿರುವ ವೇತನ ವಿಳಂಬದ ಸಮಸ್ಯೆಗೆ ಇತಿಶ್ರೀ ಹಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.